ETV Bharat / state

ಪ್ರತೀ ಚುನಾವಣೆಯಲ್ಲಿ ಮಂಗಳೂರು ಭೇಟಿ ತಪ್ಪಿಸಿಕೊಳ್ಳದ ಪ್ರಧಾನಿ ಮೋದಿ: ಕಾರಣವೇನು? - MODI MANGALURU VISITS

author img

By ETV Bharat Karnataka Team

Published : Apr 18, 2024, 7:43 AM IST

modi mangaluru visits
ಮೋದಿ-ಮಂಗಳೂರು

ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ದುರ್ಬಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ, ಮತಗಳನ್ನು ಹೆಚ್ಚಿಸಲು ನರೇಂದ್ರ ಮೋದಿಯಂಥ ನಾಯಕರು ರೋಡ್​ ಶೋ, ಸಮಾವೇಶ ಮಾಡುತ್ತಾರೆ. ಆದರೆ ದಕ್ಷಿಣ ಕನ್ನಡಲ್ಲಿ ಬಿಜೆಪಿ ಪ್ರಬಲವಾಗಿದೆ. ಆದರೂ ಮೋದಿ ಮಂಗಳೂರು ಭೇಟಿಯಿಂದ ತಪ್ಪಿಸಿಕೊಳ್ಳುದಿಲ್ಲ. ಇದೇ ಮಂಗಳೂರು ವಿಶೇಷ.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್​ ಕುಂಪಲ & ಕಾಂಗ್ರೆಸ್​ ಮುಖಂಡ ಶಾಹುಲ್ ಹಮೀದ್

ಮಂಗಳೂರು: ಪ್ರಧಾನಿ ಮೋದಿ ಮಂಗಳೂರಿನಲ್ಲಿ ರೋಡ್​ ಶೋ ನಡೆಸಿ ಲೋಕಸಭಾ ಚುನಾವಣೆಗೆ ರಂಗು ತಂದಿದ್ದಾರೆ. ಮಂಗಳೂರಿನಲ್ಲಿ ರೋಡ್ ಶೋ ಆಯೋಜಿಸುವ ಮೂಲಕ ಬಿಜೆಪಿ ಚುನಾವಣಾ ಪ್ರಚಾರ ನಡೆಸಿದ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ನವೊಲ್ಲಾಸ ತುಂಬಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಇದು ಬರುತ್ತಿರುವುದು ಹೊಸತೇನಲ್ಲ. ಪ್ರತೀ ಚುನಾವಣೆಯ ಸಂದರ್ಭದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿಯನ್ನು ತಪ್ಪಿಸಿಕೊಳ್ಳುವುದೇ ಇಲ್ಲ. ಈವರೆಗೆ ಅವರು ಮಂಗಳೂರಿಗೆ ಹತ್ತು ಬಾರಿ ಭೇಟಿ ಕೊಟ್ಟಿದ್ದಾರೆ.

ಯಾವಾಗೆಲ್ಲ ಮೋದಿ ಭೇಟಿ: '2013ರಲ್ಲಿ ಗುಜರಾತ್ ಸಿಎಂ ಆಗಿದ್ದ ಮೋದಿಯವರು ಆಗ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣ ಪ್ರಚಾರಕ್ಕೂ ಮೋದಿ ಆಗಮಿಸಿ, ಸಮಾವೇಶದಲ್ಲಿ ಮಾತನಾಡಿದ್ದರು. ಪ್ರಧಾನಿಯಾದ ಬಳಿಕ 2016ರಲ್ಲಿ ಕೇರಳದ ಕೊಚ್ಚಿಗೆ ತೆರಳುವ ಹಾದಿಯಲ್ಲಿ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿದ್ದರು. 2017ರಲ್ಲಿ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದರು. ಆಗ ಕೂಡ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದರು. 2017ರಲ್ಲಿ ಮೋದಿ ಲಕ್ಷದ್ವೀಪಕ್ಕೆ ಹೋಗುವುದಕ್ಕಾಗಿ ಒಂದು ರಾತ್ರಿ ಮಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ವೇಳೆಗೆ ಮಧ್ಯರಾತ್ರಿ ಆಗಿತ್ತು'.

'2018ರ ಅಸೆಂಬ್ಲಿ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಮೋದಿ ನೆಹರು ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು. 2019ರಲ್ಲಿ ಚುನಾವಣ ಪ್ರಚಾರ ಸಮಾವೇಶಕ್ಕೆ ಬಂದಿದ್ದ ಮೋದಿ, ನೆಹರು ಮೈದಾನದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಹಂಪನಕಟ್ಟೆ ಬಳಿ ಭರ್ಜರಿ ಜನರು ಸೇರಿದ್ದರು. ಜನರ ಉತ್ಸಾಹ ನೋಡಿ ಮೋದಿ ಕಾರಿನ ಬಾಗಿಲು ತೆರೆದು ಜನರ ಕೈ ಕುಲುಕಿದ್ದರು. 2022ರಲ್ಲಿ ವಿವಿಧ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಗೆಂದು ಮಂಗಳೂರಿಗೆ ಆಗಮಿಸಿದ್ದರು. 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಾಗಿ ಮೂಲ್ಕಿಗೆ ಆಗಮಿಸಿದ್ದರು. 2024ರ ಲೋಕಸಭಾ ಚುನಾವಣೆ ಪ್ರಚಾರಾರ್ಥ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ'.

ಪ್ರಧಾನಿ ಮೋದಿ ಚುನಾವಣೆಯ ಪ್ರತೀ ಸಂದರ್ಭದಲ್ಲಿ ತಪ್ಪದೇ ಮಂಗಳೂರಿಗೆ ಭೇಟಿ ನೀಡಿದ್ದಾರೆ. 2013, 2018, 2023 ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ, 2014, 2019, 2024 ರ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದಾರೆ. ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅವರು ಮಂಗಳೂರು ಭೇಟಿಯನ್ನು ಈವರೆಗೆ ತಪ್ಪಿಸಿಕೊಂಡಿಲ್ಲ. ಸಾಧಾರಣಾವಾಗಿ ಚುನಾವಣೆಯ ಸಂದರ್ಭದಲ್ಲಿ ದುರ್ಬಲವಾಗಿರುವ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಅಲ್ಲಿನ ಮತಗಳನ್ನು ಹೆಚ್ಚಿಸುವ ತಂತ್ರಗಾರಿಕೆಯಿಂದ ಮೋದಿಯಂತಹ ನಾಯಕರನ್ನು ಬಳಸುತ್ತಾರೆ. ಆದರೆ, ಮಂಗಳೂರಿನಲ್ಲಿ ಬಿಜೆಪಿ ಪ್ರಬಲವಾಗಿದೆ. ಕಳೆದ 33 ವರ್ಷಗಳ ಕಾಲ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಗೆ ಗೆಲುವನ್ನು ತಂದಿದ್ದರೂ ಮೋದಿ ಅವರು ಮಂಗಳೂರಿನಲ್ಲಿ ಪ್ರಚಾರ ಮಾಡಿದ್ದು ವಿಶೇಷ.

ಮನ್ ಕಿ ಬಾತ್​ನಲ್ಲಿಯೂ ಪ್ರಸ್ತಾಪ: 2019ರ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶಕ್ಕೆ ಆಗಮಿಸಿ ತೆರಳುವ ವೇಳೆ ಪ್ರಧಾನಿ ಅವರನ್ನು ನೋಡಲು ನಗರದ ಹಂಪನಕಟ್ಟೆಯಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರು. ಸಮಾವೇಶ ಮುಗಿದ ಬಳಿಕ ಅನಧಿಕೃತ ರೋಡ್ ಶೋ ನಡೆದಿತ್ತು. ಇದನ್ನು ಮುಂದಿನ ಮನ್​ ಕಿ ಬಾತ್​ನಲ್ಲಿ ಮೋದಿ ಪ್ರಸ್ತಾಪಿಸಿ ಮಂಗಳೂರಿನಲ್ಲಿ ಮಾನವ ಗೋಡೆಯನ್ನು ನಿರ್ಮಿಸಲಾಗಿತ್ತು ಎಂದು ಪ್ರಶಂಸಿದ್ದರು. ಆ ಬಳಿಕ ರೋಡ್ ಶೋ ಎಂಬ ಕಾನ್ಸೆಪ್ಟ್ ಎಲ್ಲಾ ಕಡೆ ಆರಂಭವಾಯಿತು ಎಂದು ಬಿಜೆಪಿ ನಾಯಕರು ಹೇಳುತ್ತಾರೆ.

ಮೋದಿ ಅವರ ಮಂಗಳೂರು ಭೇಟಿ ಬಗ್ಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್​ ಕುಂಪಲ-"ದಕ್ಷಿಣ ಕನ್ನಡ ಸಂಘಟನಾತ್ಮಕ ಜಿಲ್ಲೆ. ಕಳೆದ 33 ವರ್ಷಗಳಲ್ಲಿ ಲೋಕಸಭಾ ಚುನಾವಣೆ ಗೆಲ್ಲುತ್ತಾ ಬಂದಿದೆ. ಪ್ರಧಾನಮಂತ್ರಿ ಮಂಗಳೂರಿಗೆ ಪ್ರೀತಿಯಿಂದ ಬರುತ್ತಾರೆ. ಜನತೆಯ ಮೇಲಿರುವ ಪ್ರೀತಿ ಮತ್ತು ಇಲ್ಲಿಯ ಮತದಾರರು, ಬಿಜೆಪಿ ಕಾರ್ಯಕರ್ತರು ಅವರ ಭೇಟಿಯನ್ನು ನಿರೀಕ್ಷೆ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಮಂಗಳೂರಿಗೆ ಬರಬೇಕೆನ್ನುವುದು ನಮ್ಮೆಲ್ಲರ ಆಪೇಕ್ಷೆ".

"ನಮ್ಮ ಆಸೆಗೆ ತೊಂದರೆಯಾಗದಂತೆ ಅವರು ಬಂದು ಕಾರ್ಯಕರ್ತರಿಗೆ ಸಂತಸ ಕೊಡುವ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ. 2019 ರಲ್ಲಿ ರಸ್ತೆಯ ಇಕ್ಕೆಲ್ಲಗಳಲ್ಲಿ ಮಾನವ ಗೋಡೆ ತರಹ ಅವರನ್ನು ಜನತೆ ಕಾಣಲು ನಿಂತ ವಿಷಯವನ್ನು ಅವರು ಮನ್ ಕಿ ಬಾತ್​ನಲ್ಲಿ ಪ್ರಸ್ತಾಪಿಸಿದ್ದರು. ದೇಶದಲ್ಲಿ ಮುಂದೆ ರೋಡ್​ ಶೋ ಎಂಬ ಕಾನ್ಸೆಪ್ಟ್ ಬರಲು ಇದು ಕಾರಣವಾಯಿತು. ಅವರ ವರ್ಚಸ್ಸಿನಿಂದ ಅವರ ಭೇಟಿಯಿಂದ ನಮ್ಮ ಕಾರ್ಯಕರ್ತರ ಉಲ್ಲಾಸ ಇಮ್ಮಡಿಯಾಗುತ್ತದೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುತ್ತದೆ" ಎಂದಿದ್ದಾರೆ.

ಇನ್ನು ಮೋದಿ ರೋಡ್​ ಶೋ ಬಗ್ಗೆ ಕಾಂಗ್ರೆಸ್​ ಮುಖಂಡ ಶಾಹುಲ್ ಹಮೀದ್ ಅವರು ಮಾತನಾಡಿ, "ನಿರೀಕ್ಷೆಯಂತೆ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಆರಂಭದಲ್ಲಿ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಸಮಾವೇಶಕ್ಕೆ ಚಪ್ಪರ ಮುಹೂರ್ತ ಮಾಡಿದರು. ಸಂಜೆಗೆ ಸಮಾವೇಶ ರದ್ದು ಮಾಡಿ ರೋಡ್ ಶೋ ನಡೆಸಿದರು. ಬಹಳ ದೊಡ್ಡ ಮಟ್ಟದ ಜನ ಪ್ರವಾಹ ಇರಲಿಲ್ಲ. ಮೋದಿ ರೋಡ್ ಶೋ ನಡೆಸುತ್ತಿದ್ದಂತೆ ಜನ ಹಿಂದಿನಿಂದ ಮುಂದೆ ಬರುವುದು ಕಂಡಿದೆ. ಮೋದಿ ರೋಡ್ ಶೋ ಸಪ್ಪೆಯಾಗಿದೆ ".

"ದಕ್ಷಿಣ ಕನ್ನಡ ಜಿಲ್ಲೆಗೆ ಮೋದಿ ಅವರು ಬರುವಾಗ ಸಿಎಂ ಸಿದ್ದರಾಮಯ್ಯ ಅವರು ಕೆಲವು ಪ್ರಶ್ನೆಗೆ ಉತ್ತರ ಕೇಳಿದ್ದರು. ಯಾವುದಕ್ಕೂ ಉತ್ತರ ಕೊಡದೆ ಜನರಿಗೆ ಕೈ ಬೀಸಿ 'ಬಂದ ಪುಟ್ಟ ಹೋದ ಪುಟ್ಟ' ಎಂಬಂತೆ ತಿರುಗಿ ಹೋಗಿದ್ದಾರೆ. ಯಾವುದೇ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಬರುವುದಿಲ್ಲ. ಪ್ರಧಾನಿ ಮೋದಿ ಅವರು ಮಂಗಳೂರಿಗೆ ಕಳೆದ ಹತ್ತು ವರ್ಷಗಳಲ್ಲಿ ಕೊಟ್ಟ ಕೊಡುಗೆ ಏನು. ಕಾಂಗ್ರೆಸ್​ನ ಯೋಜನೆಗಳನ್ನು ಮಾರಿದ್ದಾರೆ ಎಂಬುದು ಜನರ ಮನಸ್ಸಿನಲ್ಲಿದೆ. ಮೋದಿ ಅವರ ಭೇಟಿ ಯಾವುದೇ ಪ್ರಯೋಜನವಾಗುವುದಿಲ್ಲ. ಬಿಜೆಪಿಯವರು ಭ್ರಮಾಲೋಕದಲ್ಲಿ ಇರಬಹುದು. ಈ ಬಾರಿಯ ಫಲಿತಾಂಶ ವ್ಯತಿರಿಕ್ತವಾಗಿ ಬರುತ್ತದೆ. 33 ವರ್ಷಗಳ ಬಿಜೆಪಿ ಆಡಳಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಗಾಣಲು ಮೋದಿ ಬಂದು ಮುನ್ನುಡಿ ಬರೆದಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ಕೇಸರಿಮಯವಾದ ಕುಡ್ಲ, ಘೋಷಣೆಗಳ ಅಬ್ಬರ - PM Modi Road Show

ETV Bharat Logo

Copyright © 2024 Ushodaya Enterprises Pvt. Ltd., All Rights Reserved.