ETV Bharat / state

ರಾಜ್ಯದಲ್ಲಿ ಬಿಜೆಪಿ ಮಾಡಿದ ಎಲ್ಲಾ ಅಭಿವೃದ್ಧಿಯನ್ನು ಕೆಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ: ಪ್ರಧಾನಿ ಮೋದಿ - pm modi

author img

By ETV Bharat Karnataka Team

Published : Apr 28, 2024, 8:16 PM IST

ರಾಜ್ಯದಲ್ಲಿ ಬಿಜೆಪಿ ಮಾಡಿದ ಎಲ್ಲಾ ಅಭಿವೃದ್ಧಿಯನ್ನು ಕೆಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ: ಪ್ರಧಾನಿ ಮೋದಿ
ರಾಜ್ಯದಲ್ಲಿ ಬಿಜೆಪಿ ಮಾಡಿದ ಎಲ್ಲಾ ಅಭಿವೃದ್ಧಿಯನ್ನು ಕೆಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ: ಪ್ರಧಾನಿ ಮೋದಿ

ಕಾಲೇಜು ಆವರಣದಲ್ಲೇ ನಡೆದ ವಿದ್ಯಾರ್ಥಿನಿ ಹತ್ಯೆಯಲ್ಲೂ ಸಹ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದರು.

ದಾವಣಗೆರೆ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಬಾಂಬ್ ಬ್ಲಾಸ್ಟ್, ನೇಹಾ ಹತ್ಯೆಯಲ್ಲಿ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ತಂದೆ - ತಾಯಿಗಳಿಗೆ ಒಂದು ಆಸೆ ಇರುತ್ತದೆ. ನಮ್ಮ ಮಕ್ಕಳಿಗೆ ಏನಾದರೂ ಉಳಿಸೋಣ ಎನ್ನುವ ಯೋಚನೆ ಮಾಡುತ್ತಾರೆ. 55% ರಷ್ಟು ಆಸ್ತಿ ಲೂಟಿ ಮಾಡಲು ಪಿತ್ರಾರ್ಜಿತ ತೆರಿಗೆ ಕಾನೂನು ತರಲು ಮುಂದಾಗಿದ್ದಾರೆ. ನಿಮ್ಮ ಪೀಳಿಗೆಗೆ ನಿಮ್ಮ ದುಡಿಮೆಯನ್ನು ಕೊಡಲು ಬಿಡುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ, ಜನರು ಆತಂಕದಲ್ಲಿದ್ದಾರೆ. ರಾಜ್ಯದ ಜನರಿಗೆ ಸುಳ್ಳು ಹೇಳಿ ರಾಜ್ಯದ ಜನರ ಜೀವವನ್ನು ಅಪಾಯಕ್ಕೆ ತಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಲೇಜು ಆವರಣದಲ್ಲೇ ನಡೆದ ವಿದ್ಯಾರ್ಥಿನಿ ಹತ್ಯೆಯಲ್ಲೂ ಸಹ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ನೇಹಾ ಹತ್ಯೆ ಸಾಮಾನ್ಯ ಘಟನೆಯಲ್ಲ, ವೋಟ್​ ಬ್ಯಾಂಕಿನ ಹತ್ಯೆ. ಅಪಾಯದ ಮನಸ್ಥಿತಿ ಇರುವ ವ್ಯಕ್ತಿಗಳ ಕೆಲಸ. ಪಿಎಫ್‌ಐ, ಎಸ್‌ಡಿಪಿಐಗಳ ವಿರುದ್ಧ ಇದ್ದ ಪ್ರಕರಣಗಳನ್ನು ವಾಪಾಸು ಪಡೆದು ರಾಜ್ಯದಲ್ಲಿ ಬಾಂಬ್ ಹಾವಳಿ ಹೆಚ್ಚಾಗುವಂತೆ ಮಾಡಿದೆ. ದೇಶದಲ್ಲಿ ಸುರಕ್ಷತೆ, ವಿಕಾಸದ ಗ್ಯಾರಂಟಿ ಮೋದಿ. 10 ವರ್ಷದಲ್ಲಿ ನೀವು ನೋಡಿದ್ದೀರಿ. ಮೊದಲೆಲ್ಲಾ ಮನೆಗೆ ನುಗ್ಗಿ ದಾಂಧಲೆ ಮಾಡುತ್ತಿದ್ದರು, ಈಗ ಆ ರೀತಿ ಇಲ್ಲ ಎಂದರು.

ಮೇ 7 ರಂದು ಬಿಜೆಪಿಗೆ ವೋಟ್​ ಕೊಡಿ. ಗಾಯತ್ರಿ ಸಿದ್ದೇಶ್ವರ್ ಹಾಗೂ ಹಾವೇರಿಯ ಬಸವರಾಜ ಬೊಮ್ಮಾಯಿಗೆ ವೋಟ್​ ಮಾಡಿ. ಕಮಲಕ್ಕೆ ವೋಟ್​ ಹಾಕಿದರೆ, ನಿಮ್ಮ ವೋಟ್​ ಮೋದಿಗೆ ತಲುಪಲಿದೆ. ನಿಮ್ಮ ಒಂದೊಂದು ಮತದಿಂದ ಮೋದಿಯ ಸಂಕಲ್ಪ, ಭಾರತದ ಸದೃಢತೆ ಹೆಚ್ಚಾಗಲಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂತೆ ದೇಶದ ಜನತೆ ಮತದಾನ ಮಾಡಲಿ ಎಂದು ಕರೆ ನೀಡಿದರು.

ಕಾಂಗ್ರೆಸ್​ಗೆ ನಡುಕ ಶುರುವಾಗಿದೆ: ಏ.26 ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನವಾಗಿದೆ. ಕರ್ನಾಟಕದಲ್ಲಿ ಮಾತೆಯರು, ಮಹಿಳೆಯರು, ಮೊದಲ ಬಾರಿಗೆ ಮತದಾನ ಮಾಡಿದವರು ಚಮತ್ಕಾರ ಮಾಡಿದ್ದಾರೆ. ಕಾಂಗ್ರೆಸ್‌ಗೆ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮೇ.7ರಂದು ಇದೇ ರೀತಿ ಆದರೆ ಏನು ಮಾಡುವುದು ಎಂದು ಚಿಂತೆಗೀಡಾಗಿದೆ. ಕಾಂಗ್ರೆಸ್‌ಗೆ ದಿಲ್ಲಿಯಲ್ಲಿ ಖಾತೆ ತೆಗೆಯುವ ಸಂಭವ ಇಲ್ಲದಂತಾಗಿದೆ. ರಾಜ್ಯದ ಜನತೆ ಕಾಂಗ್ರೆಸ್ಸಿನ ಪಾಪಕ್ಕೆ ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದು ಹೇಳಿದರು.

ಮೊದಲೆಲ್ಲಾ ಇವಿಎಂ ಸರಿಯಲ್ಲ ಎಂದು ಹೇಳುತ್ತಿದ್ದರು. ಮೊನ್ನೆ ಸುಪ್ರೀಂಕೋರ್ಟ್ ಕಪಾಳಮೋಕ್ಷ ಮಾಡಿದೆ. ಈವರೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಇವಿಎಂ ಬಗ್ಗೆ ಸುಳ್ಳು ಹೇಳಿ ಕಾರ್ಯಕರ್ತರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿತ್ತು. ಇದೀಗ ಅವರಿಗೆ ನೆಪ ಹೇಳಲು ಏನೂ ಇಲ್ಲದಂತಾಗಿದೆ. ಈ ಹಿಂದಿನ ದಿನಗಳೇ ಬೇರೆ, 2024ರ ದಿನಗಳೇ ಬೇರೆ. ಕಳೆದ 10 ವರ್ಷಗಳಲ್ಲಿ ದೇಶದ ಜನತೆ ಮೋದಿ ಬಗ್ಗೆ ತಿಳಿದಿದ್ದಾರೆ. ಮೋದಿಗೆ ಮಹಿಳೆಯರು, ಸಹೋದರಿಯರು, ಹೆಣ್ಣು ಮಕ್ಕಳು ಕೋಟೆ ಇದ್ದಂತೆ. 70 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ದೇಶ ಕೆಟ್ಟಹೋಗಿತ್ತು. ಆದರೆ, ನಂತರ ದೇಶದ ಜನತೆ ನನ್ನನ್ನು ಸೇವೆ ಮಾಡಲು ಆಯ್ಕೆ ಮಾಡಿದರು. ಇದು ನನ್ನ ಪುಣ್ಯ ಭಗವಂತನೇ ನನ್ನನ್ನು ನಿಮ್ಮ ಸೇವೆ ಮಾಡಲು ಕಳಿಸಿದ್ದಾನೆ. ನಿಮ್ಮ ಸೇವೆ ಮಾಡಲು ನೀವೇ ನನ್ನನ್ನು ಆಯ್ಕೆ ಮಾಡಿಕೊಂಡಿದ್ದೀರಿ. ನನ್ನ ಬಳಿ ನಿಮಗೆ ಕೊಡಲು ಏನೂ ಇಲ್ಲ. ನನ್ನ ಬಳಿ ಇರುವುದು ಸಂವೇದನೆ, ಮೌನ, ನಾನು ಸದಾ ತಲೆಬಾಗಿಸಿ ನಿಮಗೆ ನಮಸ್ಕಾರ ಮಾಡುವೆ. ನಮ್ರತೆಯಿಂದ ಶಿರಬಾಗಿಸಿ ನಿಮ್ಮ ಬಳಿ ಆಶೀರ್ವಾದ ಪಡೆಯಲು ಬಂದಿರುವೆ ಎಂದು ಹೇಳಿದರು.

ನಾನು ಯಾವಾಗಲೂ ಸುಸ್ತಾಗಲ್ಲ, ಬಗ್ಗಲ್ಲ- ಜಗ್ಗಲ್ಲ: ನಾನು ಯಾವಾಗಲೂ ಸುಸ್ತಾಗಲ್ಲ. ಬಗ್ಗಲ್ಲ, ಜಗ್ಗಲ್ಲ. ನಿಮಗಾಗಿ ನಾನು ಸೇವೆ ಮಾಡುವೆ. ಇದು ಮೋದಿಯ ಗ್ಯಾರಂಟಿ. ದೇಶದ ಎಲ್ಲೇ ಹೋದರೂ ಕೇವಲ ಮೋದಿ ಮತ್ತೊಮ್ಮೆ ಎನ್ನುವ ಸದ್ದು ಕೇಳಿಸುತ್ತಿದೆ. ದಾವಣಗೆರೆಯ ಮಹತ್ವ ದೇಶದಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಬಿಜೆಪಿ ಸರ್ಕಾರ ದೇಶವನ್ನು ಮುಂದೆ ತೆಗೆದುಕೊಂಡುಹೋದರೆ, ಕಾಂಗ್ರೆಸ್​ ಕರ್ನಾಟಕವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದೆ. ವಿಕಸಿತ ಭಾರತದ ಹೆಸರಿನಲ್ಲಿ ದೇಶವನ್ನು 2047 ವೇಳೆಗೆ ವಿಶ್ವದ ನಂಬರ್ ಒನ್ ದೇಶವನ್ನಾಗಿಸೋಣ. ಕಾಂಗ್ರೆಸ್ ದೇಶದ ಏಕತೆ ಒಡೆಯಲು ಮುಂದಾಗಿದ್ದು, ಅಭಿವೃದ್ಧಿ ಕಾರ್ಯವನ್ನು ತಡೆಯಲು ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಬಿಜೆಪಿ ಮಾಡಿದ ಎಲ್ಲಾ ಅಭಿವೃದ್ಧಿಯನ್ನು ಕಾಂಗ್ರೆಸ್ ಸರ್ಕಾರ ಕೆಡಿಸಲು ಮುಂದಾಗಿದೆ. ಅವರವರ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಕರ್ನಾಟಕವನ್ನು ಅಭಿವೃದ್ಧಿ ಮಾಡಲು ಮುಂದಾಗುತ್ತಿಲ್ಲ. ಯುವಕರ, ಜನಸಾಮಾನ್ಯರ, ವಿದ್ಯಾವಂತರ ಜೀವನ ಜತೆ ಚೆಲ್ಲಾಟ ಆಡುತ್ತಿದೆ. ಎರಡೂವರೆ ವರ್ಷ ನಾನು, ಎರಡೂವರೆ ವರ್ಷ ನೀನು ಎಂದು ಅವರವರೇ ಕಿತ್ತಾಟ ಮಾಡುತ್ತಿದ್ದಾರೆ. ದೇಶ 5 ವರ್ಷಗಳ ಕಾಲ ಯಾರಿಗೆ ನೀಡಬೇಕೆಂದು ಜನರು ಯೋಚನೆ ಮಾಡುತ್ತಾರೆ. ಯಾರೋ ಕೇಳುತ್ತಾರೆ ಎಂದು ಕೊಟ್ಟು ಬಿಡಲ್ಲ. ನಿಮ್ಮ ಬಳಿ ಜನರಿಗೆ ತಿಳಿಸಲು ಏನಿದೆ. ಇಂಡಿಯಾ ಮೈತ್ರಿಕೂಟಕ್ಕೆ 5 ವರ್ಷ ಅವಕಾಶ ಸಿಕ್ಕರೆ ಪ್ರತಿ ವರ್ಷ ಒಬ್ಬೊಬ್ಬ ಪ್ರಧಾನ ಮಂತ್ರಿ ಆಗಲಿದ್ದಾರೆ. ಹೀಗೆ ವರ್ಷಕ್ಕೊಬ್ಬ ಪ್ರಧಾನಿ ಸಿಕ್ಕರೆ ದೇಶದ ಅಭಿವೃದ್ಧಿ ಯಾವ ರೀತಿ ಆಗಲಿದೆ ಹೇಳಿ. ಕಾರಣ ನಿಮ್ಮ ವೋಟ್​ ಬಹಳ ಮಹತ್ವ ಪಡೆದಿದೆ. ಆದ ಕಾರಣ ಯೋಚನೆ ಮಾಡಿ ಮತದಾನ ಮಾಡಿ. ದೇಶದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಮೋದಿ ಮನವಿ ಮಾಡಿದರು.

ಇದನ್ನೂ ಓದಿ: ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಇಡೀ ರಾಷ್ಟ್ರವೇ ಆತಂಕದಲ್ಲಿದೆ: ಪ್ರಧಾನಿ ಮೋದಿ - PM Modi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.