ETV Bharat / state

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹಿಂದೂ ಸಮಾಜದ ಮೇಲೆ ಹಲ್ಲೆ ಸಹಜ: ಜೋಶಿ - Prahlad Joshi

author img

By ETV Bharat Karnataka Team

Published : Apr 23, 2024, 6:49 PM IST

ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ
ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ

ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದಮೇಲೆ ಅಪರಾಧಿಗಳಿಗೆ ನಮ್ಮ ಪರವಾದ ಸರ್ಕಾರ ಎಂಬ ಮನೋಭಾವ ಬಂದಿದೆ ಎಂದು ಪ್ರಹ್ಲಾದ್​ ಜೋಶಿ ಟೀಕಿಸಿದರು.

ಧಾರವಾಡ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಸಮಾಜದ ಮೇಲೆ ಹಲ್ಲೆ ಮಾಡುವುದು ಸಹಜವಾಗಿದೆ. ಜೈ ಶ್ರೀರಾಮ್ ಎನ್ನುವವರ ಮೇಲೆ ಹಲ್ಲೆ ಆಯ್ತು. ಇದಕ್ಕಿಂತ ಮುಂಚೆ ಅಂಗಡಿಯಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ ನಡೆಯಿತು. ಆದರೆ ಹಲ್ಲೆಯಾದವರ ಮೇಲೆ‌ ಕೇಸ್ ಹಾಕಲಿಲ್ಲ, ಇದರ ಬದಲಿಗೆ ಹಲ್ಲೆ ಮಾಡಿಸಿಕೊಂಡವರ ಮೇಲೆಯೇ ಪ್ರಕರಣ ದಾಖಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಿಡಿಕಾರಿದರು.

ಈ‌ ಕುರಿತು ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪಿಎಫ್‌ಐ, ಎಸ್‌ಡಿಪಿಐ ಜೊತೆಗೂಡಿ ಗಲಾಟೆ ಮಾಡಿದ್ದರು. ಈ ದಂಗೆಯಲ್ಲಿ ಬಂಧನಕ್ಕೊಳದವರ ಬಿಡುಗಡೆ ಮಾಡಿಸಿದರು. ದಲಿತ ಸಮುದಾಯಕ್ಕೆ ಸೇರಿದ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ನಡೆಸಿ ಅವರ ಮೇಲೆ ಹಲ್ಲೆ ಮಾಡಿ ಮನೆ ಸುಟ್ಟು ಹಾಕಿದ್ದರು. ಈ ಪ್ರಕರಣದಲ್ಲೂ ಬಂಧನಕ್ಕೊಳಗಾದ ಆರೋಪಿಗಳನ್ನು ಕಾಂಗ್ರೆಸ್​ ಅಧಿಕಾರಕ್ಕೆ ಬಂದಮೇಲೆ ಬಿಡುಗಡೆ ಮಾಡಿಸಿತು.‌ ಪಾಕ್ ಪರ ಜಿಂದಾಬಾದ್ ಅಂದಾಗಲೂ, ಅವರು ಹಾಗೆ ಅಂದಿಲ್ಲ ಎಂದು 8 ದಿನಗಳ ಬಳಿಕ ಒಬ್ಬನನ್ನು ಅರೆಸ್ಟ್ ಮಾಡಿದರು. ರಾಮೇಶ್ವರಂ ಕೆಫೆ ದಾಳಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದರು. ಅದೊಂದು ಸಿಲಿಂಡರ್​ ಬ್ಲಾಸ್ಟ್​ ಎಂದು ಹೇಳಿದ್ದರು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ಯುವತಿಯನ್ನು ಹತ್ಯೆ ಮಾಡಲಾಗಿದೆ. ನಿನ್ನೆ ಯಾದಗಿರಿಯಲ್ಲಿ ದಲಿತ ಯುವಕನ ಕೊಲೆಯಾಗಿದೆ. ಅಪರಾಧಿಗಳಿಗೆ ನಮ್ಮ ಪರವಾದ ಸರ್ಕಾರ ಎಂಬ ಮನೋಭಾವ ಬಂದಿದೆ ಎಂದರು.

ಈ ರೀತಿಯ ಪ್ರವೃತ್ತಿಯಿಂದ ನಮ್ಮ ಸಂಸ್ಕೃತಿ ಮೇಲೆ ಪ್ರಹಾರ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಹುಲ್ ಗಾಂಧಿ ತಮ್ಮ ಪಕ್ಷದ ಧ್ವಜದಲ್ಲೇ ಕೇಸರಿ ಇದೆ ಎಂಬ ಕಾರಣಕ್ಕೆ ಅದನ್ನು ಬಿಟ್ಟು ಮುಸ್ಲಿಂ ಲೀಗ್‌ನ ಹಸಿರು ಧ್ವಜ ಹಿಡಿದು ನಾಮಪತ್ರ ಸಲ್ಲಿಸೋಕೆ ಹೋಗಿದ್ದಾರೆ. ತಮ್ಮ ಧ್ವಜ, ಚಿಹ್ನೆಯನ್ನೇ ಕೈಬಿಟ್ಟಿದ್ದಾರೆ. ಇದು ಎಂತಹ ದುರಂತ?. ಭಯೋತ್ಪಾದನೆ ಮತ್ತು ಕೋಮುವಾದ ಒಂದೇ ನಾಣ್ಯದ ಎರಡು ಮುಖಗಳು. ಇದನ್ನು ಬೇರುಸಹಿತ ಕಿತ್ತು ಹಾಕುವ ಪ್ರಯತ್ನ ಮೋದಿ ಮಾಡುತ್ತಿದ್ದರೆ ಇದನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಬಿಜೆಪಿಯಿಂದ ಉಚ್ಚಾಟಿಸಿದ್ದಕ್ಕೆ ವಿಜಯೇಂದ್ರಗೆ ಅಭಿನಂದನೆ: ಕೆ.ಎಸ್.ಈಶ್ವರಪ್ಪ - K S Eshwarappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.