ETV Bharat / state

ಶಿಕ್ಷಕಿ ಸಿಸ್ಟರ್ ಪ್ರಭಾ ಮೇಲೆ ಕ್ರಮಕ್ಕೆ ಒತ್ತಾಯ: ಮಂಗಳೂರು ಪೊಲೀಸ್ ಕಮಿಷನರ್ ಭೇಟಿಯಾದ ಪೋಷಕರು

author img

By ETV Bharat Karnataka Team

Published : Feb 16, 2024, 10:55 PM IST

ಮಂಗಳೂರು
ಮಂಗಳೂರು

ಶಿಕ್ಷಕಿ ಸಿಸ್ಟರ್ ಪ್ರಭಾ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಮಕ್ಕಳ ಪೋಷಕರು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಮಂಗಳೂರು: ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಪಾಠ ಮಾಡುವಾಗ ಹಿಂದೂ ಧರ್ಮವನ್ನು ನಿಂದಿಸಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪೋಷಕರ ತಂಡ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾಗಿ ಮನವಿ ಮಾಡಿತು.

ಶಾಲಾ ಶಿಕ್ಷಕಿ 'work and worship' ಎಂಬ ರವೀಂದ್ರನಾಥ್ ಟಾಗೋರ್ ಅವರ ಪದ್ಯವನ್ನು ಬೋಧಿಸುವಾಗ ಹಿಂದೂ ಧರ್ಮದ ನಿಂದನೆ ಮಾಡಿದ್ದಾರೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮಕ್ಕಳ ಪೋಷಕರು ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಈ ಕುರಿತು ಏನು ಕ್ರಮ ತೆಗೆದುಕೊಳ್ಳಲಾಗಿದೆ? ಎಂದು ಪೋಷಕರು ಕಮಿಷನರ್ ಅವರಲ್ಲಿ ವಿಚಾರಿಸಿದರು. ಅಲ್ಲದೆ ಶಾಸಕ ವೇದವ್ಯಾಸ ಕಾಮತ್, ಇಬ್ಬರು ಕಾರ್ಪೊರೇಟರ್​ಗಳು, ಸ್ಥಳದಲ್ಲಿಯೇ ಇಲ್ಲದ ಶಾಸಕ ಭರತ್ ಶೆಟ್ಟಿ, ಹಿಂದೂ ಮುಖಂಡ ಶರಣ್ ಪಂಪ್​ವೆಲ್ ಅವರುಗಳ ಮೇಲೆ ಹಾಕಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ಎಂಬವರು, ''ನಾವು ನೀಡಿದ ದೂರಿನ ಬಗ್ಗೆ ಕಮೀಷನರ್ ಅವರಲ್ಲಿ ವಿಚಾರಿಸಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ವಿನಂತಿಸಿದ್ದೇವೆ. ಅಲ್ಲಿ ನಡೆದದ್ದು ಜನರಿಗೆ ಗೊತ್ತಿದೆ. ಇದೀಗ ಬೇರೆ ತಿರುವು ಪಡೆದುಕೊಂಡಿದೆ. ಯಾರಿಂದ ತಪ್ಪಾಗಿದೆ ಎಂಬುದನ್ನು ಪಾದರ್ಶಕವಾಗಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರ ಸತ್ಯಾಸತ್ಯತೆ ಎಲ್ಲರಿಗೂ ತಿಳಿಯುವಂತಾಗಬೇಕೆಂದು ವಿನಂತಿಸಿದ್ದೇವೆ'' ಎಂದರು.

ದಿವ್ಯಾ ಎಂಬವರು ಮಾತನಾಡಿ, ''ನಾವು ಕೆಲವು ಪೋಷಕರು ಬಂದು ದೂರು‌ ಕೊಟ್ಟಿದ್ದೆವು. ಸಿಸ್ಟರ್ ಪ್ರಭಾ ಮೇಲೆ ವಿಚಾರಣೆ ಮಾಡಬೇಕೆಂದು ದೂರು‌ ಕೊಟ್ಟಿದ್ದೆವು. ಅದು ಇನ್ನೂ ಎಫ್​ಐಆರ್ ಆಗಿಲ್ಲ. ಅದರ ಬಗ್ಗೆ ಕೇಳಲು ಬಂದಿದ್ದೇವೆ. ಶಾಸಕರು ಮತ್ತು ಕಾರ್ಪೊರೇಟರ್ ಮತ್ತಿತರರ ಮೇಲೆ ಹಾಕಲಾದ ಪ್ರಕರಣ ರದ್ದುಪಡಿಸಬೇಕು'' ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಶಾಲಾ ವಿವಾದ: ಇಬ್ಬರು ಬಿಜೆಪಿ ಶಾಸಕರು ಸೇರಿ ಆರು ಮಂದಿ ಮೇಲೆ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.