ETV Bharat / state

ಪಾಕ್ ಪರ ಘೋಷಣೆ ವಿಷಯದ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು; ಸದನದ ಬಾವಿಗಿಳಿದು ಧರಣಿ

author img

By ETV Bharat Karnataka Team

Published : Feb 29, 2024, 12:59 PM IST

ವಿಧಾನ ಪರಿಷತ್ ಕಲಾಪ
ವಿಧಾನ ಪರಿಷತ್ ಕಲಾಪ

ವಿಧಾನ ಪರಿಷತ್ ಕಲಾಪದಲ್ಲಿ ಪಾಕ್ ಪರ ಘೋಷಣೆ ವಿಷಯದ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿ ಸದನದ ಬಾವಿಗಿಳಿದು ಧರಣಿ ನಡೆಸಿವೆ.

10 ನಿಮಿಷ ಕಲಾಪ ಮುಂದೂಡಿಕೆ

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪ ಪ್ರಕರಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ವಿಧಾನ ಪರಿಷತ್​ನಲ್ಲಿ ಪ್ರತಿಪಕ್ಷಗಳು ಬಿಗಿ ಪಟ್ಟು ಹಿಡಿದ ಹಿನ್ನೆಲೆ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಪ್ರತಿಪಕ್ಷಗಳು ಸದನದ ಬಾವಿಗಿಳಿದು ಧರಣಿ ನಡೆಸಿದ್ದು, ಗದ್ದಲದ ಕಾರಣದಿಂದಾಗಿ ಕಲಾಪವನ್ನು ಕೆಲಹೊತ್ತು ಮುಂದೂಡಿಕೆ ಮಾಡಲಾಯಿತು.

ವಿಧಾನ ಪರಿಷತ್ ಕಲಾಪ ಪ್ರಾರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಮಾತನಾಡಿ ನಾನು ನಿನ್ನೆ ಉತ್ತರ ನೀಡುವಾಗ ಪಾಕಿಸ್ತಾನ ಬಿಜೆಪಿಗೆ ಶತ್ರು ರಾಷ್ಟ್ರ ಆಗಿರಬಹುದು. ಆದರೆ ನೆರೆ ರಾಷ್ಟ್ರ ಅಂತ ನಾನು ಹೇಳಿದ್ದೆ, ಅದನ್ನು ಮಾಧ್ಯಮಗಳಲ್ಲಿ ಬೇರೆ ತರಹ ಬಿಂಬಿಸಲಾಗುತ್ತಿದೆ. ಇದರ ವಿರುದ್ಧ ನಾನು ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದರು.

ಈ ವೇಳೆ ಬಿಜೆಪಿ ವಿಪ್ ರವಿಕುಮಾರ್ ಪಾಕ್ ಪರ ಘೋಷಣೆ ವಿಷಯ ಪ್ರಸ್ತಾಪ ಮಾಡಿದರು. ಘೋಷಣೆ ಕೂಗಿದವರನ್ನು ಇದುವರೆಗೆ ಬಂಧಿಸಿಲ್ಲ. ಕೇವಲ ಮಾತನಾಡಿ ಕಳಿಸಿದ್ದೇವೆ. ಏಳು ಜನರನ್ನು ವಿಚಾರಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್​ ಹೇಳಿದ್ದಾರೆ. ಇದರಿಂದ ನಾವು ಬಹಳ ಅಸಮಾಧಾನಿತರಾಗಿದ್ದೇವೆ. 36 ತಾಸು ಕಳೆದರೂ ಇದುವರೆಗೆ ಬಂಧಿಸಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸರ್ಕಾರ ಈವರೆಗೆ ಆರೋಪಿಗಳನ್ನ ಬಂಧಿಸಿಲ್ಲ. ಹಾಗಾಗಿ ಈ ವಿಷಯದ ಕುರಿತು ಚರ್ಚೆಗೆ ಅವಕಾಶ ಕೊಡಿ ಎಂದು ವಿಪಕ್ಷಗಳು ಪಟ್ಟು ಹಿಡಿದವು. ನಿನ್ನೆ ಈ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಗೃಹ ಸಚಿವರ ಉತ್ತರದ ವೇಳೆ ಎಷ್ಟು ಸಮಯ ಬೇಕಾದರೂ ಕೊಡುತ್ತೇನೆ. ಈಗ ನೋಟಿಸ್ ಕೊಡಿ, ಆಮೇಲೆ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದರು. ಇದೊಂದು ಗಂಭೀರವಾದ ವಿಚಾರ, ಈಗಲೇ ಚರ್ಚೆಗೆ ಅವಕಾಶ ಕೊಡಿ ಎಂದು ಪ್ರತಿಪಕ್ಷಗಳು ಪಟ್ಟು ಮುಂದುವರೆಸಿದವು. ಇದರ ನಡುವೆಯೇ ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಗಣಿಸದೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರಿಗೆ ಬಜೆಟ್ ಮೇಲೆ ಮಾತನಾಡಿ ಎಂದು ಸಭಾಪತಿ ಸೂಚಿಸಿದರು. ಇದಕ್ಕೆ ಬಿಜೆಪಿ-ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಈಗಲೇ ಅವಕಾಶ ಕೊಡಿ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೀವು ಹೀಗೆ ವರ್ತಿಸಿದರೆ ನಾನು ಸದನ ನಡೆಸೋದು ಹೇಗೆ ಎಂದು ಸಭಾಪತಿ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಇವರನ್ನು ಹೊರ ಹಾಕಿ ಕಲಾಪ ನಡೆಸಿ ಎಂದು ಮರಿತಿಬ್ಬೇಗೌಡ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. ಇದಕ್ಕೆ ಟಕ್ಕರ್ ನೀಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ನಮಗೆ ದೇಶ ಮೊದಲು. ಮರಿತಿಬ್ಬೇಗೌಡ್ರು ಕಾಂಗ್ರೆಸ್ ಸೇರುವ ತವಕದಲ್ಲಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಪರ ಮಾತನಾಡುತ್ತಾರೆ ಎಂದರು. ಈ ವೇಳೆ ಆಡಳಿತ ಪ್ರತಿಪಕ್ಷಗಳ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪವನ್ನು ಹತ್ತು ನಿಮಿಷ ಮುಂದೂಡಿಕೆ ಮಾಡಲಾಯಿತು.

ಇದನ್ನೂ ಓದಿ : ವಿಧಾನಸೌಧದಲ್ಲಿ ದೇಶದ್ರೋಹ ಘೋಷಣೆ ಖಂಡನೀಯ: ಜಗದೀಶ್ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.