ETV Bharat / state

ಪ್ರೀಮಿಯಂ ಎಫ್‌ಎಆರ್ ಪದ್ಧತಿಯಿಂದ ಸಾರ್ವಜನಿಕರಿಗೆ ಭಾರಿ ಸಮಸ್ಯೆ: ಎನ್.ಆರ್ ರಮೇಶ್

author img

By ETV Bharat Karnataka Team

Published : Mar 1, 2024, 9:44 AM IST

NR Ramesh
ಎನ್.ಆರ್ ರಮೇಶ್

ಪ್ರೀಮಿಯಂ ಎಫ್‌ಎಆರ್​​​​​​​ ಪದ್ಧತಿಯನ್ನು ರಾಜ್ಯಪಾಲರಿಗೆ ಕಳುಹಿಸುವ ಮೊದಲು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಸಲಹೆ ಪಡೆಯಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಹೇಳಿದ್ದಾರೆ.

ಬೆಂಗಳೂರು: ಪ್ರೀಮಿಯಂ ಎಫ್‌ಎಆರ್​​​​​ ಪದ್ಧತಿಯಿಂದ ಸಾರ್ವಜನಿಕರಿಗೆ ಭಾರಿ ಸಮಸ್ಯೆಯಾಗುತ್ತಿದ್ದು, ಆದ್ದರಿಂದ ಇದನ್ನು ರಾಜ್ಯಪಾಲರಿಗೆ ಕಳುಹಿಸುವ ಮೊದಲು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಸಲಹೆ ಪಡೆಯಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ.

ಬಿಬಿಎಂಪಿ ಬಜೆಟ್​​ ಬಗ್ಗೆ ಪ್ರತಿಕ್ರಿಯಿಸಿ, ಬೆಂಗಳೂರು ಮಹಾನಗರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಟಿಡಿಆರ್​​​ ನಿಯಮದಿಂದ ಸರ್ಕಾರಿ ಯೋಜನೆಗಳಿಗೆ ತಮ್ಮ ಸ್ವತ್ತನ್ನು ಕಳೆದುಕೊಳ್ಳುವ ಸ್ವತ್ತಿನ ಮಾಲೀಕರಿಗೆ ಧನ ರೂಪದ ಪರಿಹಾರದ ಬದಲಾಗಿ ಟಿಡಿಆರ್‌ಗಳನ್ನು ನೀಡುವ ಪದ್ಧತಿಯಿಂದ ಅನುಕೂಲವಾಗುತ್ತಿತ್ತು. ಆದರೆ ಈಗ ಜಾರಿಗೆ ತರಲು ಹೊರಟಿರುವ ಪ್ರೀಮಿಯಂ ಎಫ್‌ಎಆರ್ ಪದ್ಧತಿಯಿಂದಾಗಿ ಸರ್ಕಾರಿ ಯೋಜನೆಗಳಿಗೆಂದು ವಿಶೇಷವಾಗಿ ರಸ್ತೆ ಅಗಲೀಕರಣ ಕಾರ್ಯಕ್ಕೆಂದು ತಮ್ಮ ಸ್ವತ್ತುಗಳನ್ನು ಕಳೆದುಕೊಳ್ಳುವ ಆಯಾ ಸ್ವತ್ತುಗಳ ಮಾಲೀಕರುಗಳಿಗೆ ಪಾಲಿಕೆ ಅಥವಾ ಬಿಡಿಎ ವತಿಯಿಂದ ಮುಂದೆ ನೀಡಲಾಗುವ ಯುಬಿಎಸ್​ಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಸಹ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಟಿಡಿಆರ್​ ಬದಲಾಗಿ ಅದೇ ವಂಚಿತ ಸ್ವತ್ತುಗಳ ಮಾಲೀಕರುಗಳಿಗೆ ಮೊದಲಿನ ಹಾಗೆ ಹಣದ ರೂಪದಲ್ಲಿ ಪರಿಹಾರ ನೀಡಿದರೂ ಸಹ ಸರ್ಕಾರವು ಮಾರುಕಟ್ಟೆಯ ದರವನ್ನು ನೀಡುವ ಬದಲಾಗಿ ಕೇವಲ ಸರ್ಕಾರಿ ಮಾರ್ಗಸೂಚಿಯ ದರದಷ್ಟೇ ನೀಡುವುದರಿಂದ ಸಹಜವಾಗಿಯೇ ಸರ್ಕಾರಿ ಯೋಜನೆಗಳಿಗೆ ಸ್ವತ್ತುಗಳನ್ನು ಕಳೆದುಕೊಳ್ಳುವ ಭೂಮಾಲೀಕರು ದೊಡ್ಡಮಟ್ಟದ ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಾರೆ ಎಂದಿದ್ದಾರೆ.

ಈಗ ಜಾರಿಗೆ ತರಲು ಹೊರಟಿರುವ ಪ್ರೀಮಿಯಂ ಎಫ್‌ಎಆರ್​ ಪದ್ಧತಿಯಿಂದ ಆಗುವ ಪರಿಣಾಮಗಳ ಬಗ್ಗೆ ಕಾನೂನು ತಜ್ಞರ ಜತೆ ಕೂಲಂಕುಶವಾಗಿ ಸಮಾಲೋಚಿಸಿ ಕೂಡಲೇ ಈ ಪ್ರೀಮಿಯಂ ಎಫ್‌ಎಆರ್​ ವಿಧೇಯಕವನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸದೇ ಇರುವ ಸಂಬಂಧ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಬೆಂಗಳೂರಿನ ಸಮಸ್ತ ನಾಗರಿಕರ ಪರವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಗ್ರಹಿಸಲಾಗಿದೆ.

ಹಾಗೇ ಒಂದು ವೇಳೆ ಹಠಕ್ಕೆ ಬಿದ್ದು ಜನ ವಿರೋಧಿ ಮತ್ತು ವಂಚಕ ಬಿಲ್ಡರ್‌ಗಳ ಪರವಾದ ಈ ವಿಧೇಯಕವನ್ನು ಜಾರಿಗೆ ತಂದರೆ ಇದರ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದು ಅನಿವಾರ್ಯತೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸಲು ಮಾರ್ಚ್ 13ರವರೆಗೆ ಗಡುವು ವಿಸ್ತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.