ETV Bharat / state

ಮಳೆ ನೀರು ಕಾಲುವೆಗೆ ತ್ಯಾಜ್ಯ ನೀರು ಹರಿಸುತ್ತಿರುವವರಿಗೆ ಮೇ 1 ರಿಂದ ನೋಟಿಸ್‌: ಜಲಮಂಡಳಿ ಅಧ್ಯಕ್ಷ - Bengaluru rainwater Canal

author img

By ETV Bharat Karnataka Team

Published : Apr 30, 2024, 10:37 AM IST

Etv Bharat
Etv Bharat

ಅನಧಿಕೃತವಾಗಿ ತ್ಯಾಜ್ಯದ ನೀರನ್ನು ಒಳಚರಂಡಿಗೆ ಹರಿಸುತ್ತಿರುವುದು ಪತ್ತೆಯಾಗಿದೆ. ಅಗತ್ಯ ಶುಲ್ಕ ಭರಿಸಿಕೊಂಡು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

ಬೆಂಗಳೂರು: ಜಲಮಂಡಳಿಯ ಕಾಯ್ದೆಯನ್ನು ಉಲ್ಲಂಘಿಸಿ, ಅನಧಿಕೃತವಾಗಿ ತ್ಯಾಜ್ಯದ ನೀರನ್ನು ಒಳಚರಂಡಿ ಹಾಗೂ ಮಳೆ ನೀರು ಕಾಲುವೆಗೆ ಹರಿಸುತ್ತಿರುವವರ ಬಗ್ಗೆ ಪರಿಶೀಲನೆ ಚುರುಕುಗೊಳಿಸಿ, ಮೇ 1 ರಿಂದ ನೊಟೀಸ್‌ ಜಾರಿ ಮಾಡಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಲಮಂಡಳಿಯಿಂದ ಸಂಪರ್ಕ ಪಡೆಯದೇ ಅನಧಿಕೃತವಾಗಿ ತ್ಯಾಜ್ಯದ ನೀರನ್ನು ಒಳಚರಂಡಿಗೆ ಹರಿಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಮಳೆ ನೀರು ಕಾಲುವೆಗೂ ಹರಿಬಿಡಲಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ಒಳಚರಂಡಿ ಸಂಪರ್ಕ ಅಧಿಕೃತಗೊಳಿಸಲು ಮೇ 7ರ ತನಕ ಅವಕಾಶ ನೀಡಲಾಗಿದೆ. ಕಳೆದ ಒಂದು ವಾರದಿಂದ ಜಲಮಂಡಳಿ 528 ಕಟ್ಟಡಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ 446 ಕಡೆಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುತ್ತಿರುವುದು ಪತ್ತೆಯಾಗಿದೆ. ಇದರಲ್ಲಿ 221 ಸಂಪರ್ಕಗಳನ್ನ ಅಗತ್ಯ ಶುಲ್ಕ ಭರಿಸಿಕೊಂಡು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇನ್ನು 390 ಸಂಪರ್ಕಗಳಿಗೆ ನೊಟೀಸ್‌ ಜಾರಿಗೊಳಿಸಲಾಗಿದೆ. ಈ ಪರಿಶೀಲನಾ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕು, ಈ ಮೂಲಕ ತ್ಯಾಜ್ಯ ನೀರನ್ನು ಅಸಮರ್ಪಕವಾಗಿ ವಿಲೇವಾರಿ ಮಾಡುವ, ಮಳೆ ನೀರನ್ನು ಕಲುಷಿತಗೊಳಿಸುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ತಮ್ಮ ವ್ಯಾಪ್ತಿಯಲ್ಲಿರುವ 20ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ವಸತಿ ಸಮುಚ್ಚಯಗಳು, ಹೋಟೆಲ್​​ಗಳು, ವಾಣಿಜ್ಯ ಕಟ್ಟಡಗಳನ್ನು ಆದ್ಯತೆಯ ಮೇರೆಗೆ ಪರಿಶೀಲನೆ ನಡೆಸಬೇಕು. ಮೇ 7ರ ನಂತರವೂ ಒಳಚರಂಡಿ ಸಂಪರ್ಕವನ್ನು ಅಧಿಕೃತಗೊಳಿಸಲು ಅರ್ಜಿ ಸಲ್ಲಿಸದೇ ಇರುವಂತವರ ಮೇಲೆ ಕ್ರಮ ಕೈಗೊಳ್ಳಬೇಕು. 15 ದಿನಗಳ ಒಳಗಾಗಿ ಜಲಮಂಡಳಿ ಅಧಿಕೃತ ಸಂಪರ್ಕ ಪಡೆಯದೇ ಇದ್ದಲ್ಲಿ ಅವರ ಮೇಲೆ ಕಾನೂನಿನ ಅನ್ವಯ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಅನಧಿಕೃತವಾಗಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವುದರಿಂದ ಸಾರ್ವಜನಿಕರಲ್ಲಿ ಆರೋಗ್ಯದ ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನು ತಡೆಯುವುದು ಹಾಗೂ ನಗರವನ್ನು ಸ್ವಚ್ಛವಾಗಿ ಇರಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ, ಮುಖ್ಯ ಎಂಜನಿಯರ್​​ಗಳಾದ ಎಲ್.ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಕೆ.ಎನ್.ಮಹೇಶ, ಕೆ.ಎನ್ ರಾಜೀವ್, ಬಿ.ಸಿ ಗಂಗಾಧರ್, ಎಂ.ದೇವರಾಜು, ಜಯಶಂಕರ್, ಅಪರ ಮುಖ್ಯ ಎಂಜನಿಯರ್ ಮಧುಸೂಧನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ಬೆಂಗಳೂರು: ದೊಡ್ಡ ಪ್ರಮಾಣದಲ್ಲಿ ಬಳಸುವ ಗ್ರಾಹಕರಿಗೆ ನೀರು ಕಡಿತ - BwssB

ETV Bharat Logo

Copyright © 2024 Ushodaya Enterprises Pvt. Ltd., All Rights Reserved.