ETV Bharat / state

ಐಪಿಎಲ್​ 2024: ಮುಂಬೈಗೆ ಆರನೇ ಟ್ರೋಫಿ ತಂದು ಕೊಡ್ತಾರಾ ಹೊಸ ನಾಯಕ ಹಾರ್ದಿಕ್​?

author img

By ETV Bharat Karnataka Team

Published : Mar 19, 2024, 9:14 PM IST

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ಐಪಿಎಲ್​ ನಲ್ಲಿ ಯಶಸ್ವಿಯಾಗಿ ಐದು ಬಾರಿ ಪ್ರಶಸ್ತಿ ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಹಿಸಲಾಗಿದೆ. ಹೀಗಾಗಿ ಆರನೇ ಪ್ರಶಸ್ತಿಯನ್ನು ಮುಂಬೈಗೆ ತಂದು ಕೊಡ್ತಾರಾ ಪಾಂಡ್ಯ ಎಂಬ ಪ್ರಶ್ನೆ ಅಭಿಮಾನಗಳ ಮುಂದಿದೆ.

ಹೈದರಾಬಾದ್ : ಇಂಡಿಯನ್​ ಪ್ರೀಮಿಯರ್​ ಲೀಗ್​ 16 ಆವೃತ್ತಿಗಳಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್​ ತಂಡಕ್ಕೆ ಹೊಸ ನಾಯಕ ಹಾರ್ದಿಕ್ ಪಾಂಡ್ಯ ಅವರು ಆರನೇ ಟ್ರೋಫಿ ತಂದು ಕೊಡ್ತಾರಾ ಎಂಬುದು ಕ್ರಿಕೆಟ್​ ವಲಯದಲ್ಲಿ ಚರ್ಚೆಯಾಗುತ್ತಿದೆ.

ಐಪಿಎಲ್​​ ಟೂರ್ನಿಯಲ್ಲಿ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತ ತಂಡ ಸ್ಟಾರ್​ ಬ್ಯಾಟರ್​ ರೋಹಿತ್ ಶರ್ಮಾ ಅವರಿಂದ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ಮುಂಬೈ​ ಫ್ರಾಂಚೈಸಿ ಹಸ್ತಾಂತರಿಸಿದೆ. ಹೀಗಾಗಿ ಆರನೇ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಮೂಲಕ ಮುಂಬೈ ತಂಡವನ್ನು ಮತ್ತೊಮ್ಮೆ ಚಾಂಪಿಯನ್​ ಮಾಡುವ ಹೊಣೆಗಾರಿಕೆ ಪಾಂಡ್ಯ ಹೆಗಲ ಮೇಲಿದೆ.

ಕಳೆದ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮುಂಬೈ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದಿತ್ತು. ಅಂದು ಗುಜರಾತ್​ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದರು. ಐಪಿಎಲ್​ ನಲ್ಲಿ ಗುಜರಾತ್ ಟೈಟಾನ್ಸ್ ಆಡಿರುವ ಎರಡು ಆವೃತ್ತಿಗಳಲ್ಲಿ ಒಂದು ಬಾರಿ ಚಾಂಪಿಯನ್​ ಆಗಿದ್ದು, ಒಂದು ಬಾರಿ ರನ್ನರ್​ ಆಪ್​ ಆಗಿದೆ. ಈ ಕೀರ್ತಿ ಹಾರ್ದಿಕ್ ಪಾಂಡ್ಯ ಅವರಿಗೆ ಸಲ್ಲುತ್ತದೆ. ಆದರಿಂದ ಪಾಂಡ್ಯ ಅವರನ್ನು ಮುಂಬೈಗೆ ಮರಳಿ ಕರೆ ತಂದಿದ್ದು, ನಾಯಕನ ಜವಾಬ್ದಾರಿ ನೀಡುವ ಮೂಲಕ ಮತ್ತೊಮ್ಮೆ ತಂಡ ಚಾಂಪಿಯನ್​ ಮಾಡುವ ಲೆಕ್ಕಾಚಾರದಲ್ಲಿ ಫ್ರಾಂಚೈಸಿ ಯೋಚಿಸಿದೆ.

ಕಳೆದ ವರ್ಷ ಮುಂಬೈ ಪರ ಸೂರ್ಯಕುಮಾರ್ ಯಾದವ್ 43.21 ಸರಾಸರಿಯೊಂದಿಗೆ 605 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಪಿಯೂಷ್ ಚಾವ್ಲಾ ತಂಡದ ಪರ ಪ್ರಮುಖ ವಿಕೆಟ್​ಗಳನ್ನು ಪಡೆದರೆ, ಜೇಸನ್ ಬೆಹ್ರೆನ್‌ಡಾರ್ಫ್ 14 ವಿಕೆಟ್‌ಗಳನ್ನು ಕಬಳಿಸುವ ಮೂಲಕ ನೆರವಾಗಿದ್ದರು.

ಇನ್ನು ಈ ವರ್ಷ ಮಿನಿ ಹರಾಜಿನಲ್ಲಿ ಜೆರಾಲ್ಡ್ ಕೋಟ್ಜಿ ಮತ್ತು ನುವಾನ್ ತುಷಾರ್​ ಅವರನ್ನು ಕ್ರಮವಾಗಿ 5 ಕೋಟಿ ರೂ. ಮತ್ತು 4.8 ಕೋಟಿ ರೂ. ಗಳಿಗೆ ಖರೀದಿಸುವ ಮೂಲಕ ಮುಂಬೈ ತಮ್ಮ ವೇಗದ ಬೌಲಿಂಗ್​ ವಿಭಾಗ ಬಲಪಡಿಸಿಕೊಂಡಿದೆ. ಅಲ್ಲದೇ, ಮೊಹಮ್ಮದ್ ನಬಿ ಅವರನ್ನು ಹರಾಜು ಟೇಬಲ್‌ನಲ್ಲಿ ಖರೀದಿಸಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಆಲ್‌ರೌಂಡರ್ ಅವರನ್ನು ಪಡೆದಿದ್ದಾರೆ.

ಪ್ರಸ್ತುತ ಮುಂಬೈ ಇಂಡಿಯನ್ಸ್​ ತಂಡ ವಿಶ್ಲೇಷಣೆ ಹೀಗಿದೆ :

ಸಾಮರ್ಥ್ಯ : ಗುಜರಾತ್​ನಿಂದ ಮುಂಬೈಗೆ ಮರಳಿ ಬಂದಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ. ಇವರೊಂದಿಗೆ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ಮೂವರು ಅಗ್ರ ಕ್ರಮಾಂಕದ ಬ್ಯಾಟರ್​ಗಳ​ ಬಲವಿದೆ. ತಿಲಕ್ ವರ್ಮ ನಾಲ್ಕನೇ ವಿಕೆಟ್​ಗೆ ಬ್ಯಾಟ್ ಮಾಡಲು ಬರಬಹುದು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಟಿಮ್ ಡೇವಿಡ್ ಇನ್ನಿಂಗ್ಸ್ ಮುಗಿಸಬಹುದು. ಇದನ್ನು ಗಮನಿಸಿದರೆ ಮುಂಬೈ ಪ್ರಬಲ ಬ್ಯಾಟಿಂಗ್ ಲೈನ್‌ ಅಪ್‌ ಹೊಂದಿದೆ.

ವೇಗದ ಬೌಲಿಂಗ್​ ವಿಭಾಗವನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾಗೆ ಲ್ಯೂಕ್ ವುಡ್ ಮತ್ತು ಜೆರಾಲ್ಡ್ ಕೊಯೆಟ್ಜಿ ಅವರ ಬೆಂಬಲ ಸಿಕ್ಕಿದೆ. ಜೊತೆಗೆ ರೊಮಾರಿಯೋ ಶೆಫರ್ಡ್ ಸಹ ಇದ್ದು, ತಮ್ಮ ತೋಳು ಬಲಗಳಿಂದ ಬ್ಯಾಟರ್​ಗಳಿಗೆ ತೊಂದರೆ ಉಂಟು ಮಾಡಬಹುದು.

ದೌರ್ಬಲ್ಯ : ತಂಡ ದೌರ್ಬಲ್ಯ ಎಂದರೆ ಅದು ಸ್ಪಿನ್​ ವಿಭಾಗವಾಗಿದೆ. ಹೇಳಿಕೊಳ್ಳುವಂತಹ ಯಾವುದೇ ಸ್ಪಿನ್ನರ್​ಗಳು ಇಲ್ಲ. ​ಪಿಯೂಷ್ ಚಾವ್ಲಾ ಕಳೆದ ವರ್ಷ ಉತ್ತಮ ರೀತಿಯಲ್ಲಿ ಬೌಲಿಂಗ್​ ಮಾಡಿದರೂ, ಈ ವರ್ಷ ಅವರ ಫಾರ್ಮ್ ಅನುಮಾನಾಸ್ಪದವಾಗಿದೆ. ಅವರನ್ನು ಹೊರತುಪಡಿಸಿ, ಕುಮಾರ್ ಕಾರ್ತಿಕೇಯ ಅವರನ್ನು ಸ್ಪಿನ್ನ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿ ಉಪಯೋಗಿಸಲು ಮುಂದಾಗ್ತಾರಾ ಎಂಬುದು ಗೊತ್ತಿಲ್ಲ.

ಮೊಹಮ್ಮದ್ ನಬಿ ಕೂಡ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹಾಗೂ ಕಳೆದ ವರ್ಷಗಳಲ್ಲಿ ಹೈದರಾಬಾದ್​ ತಂಡದಲ್ಲಿದಾಗ ವಿಕೆಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಅದರೇ ಆಡುವ 11ರ ಬಳಗದಲ್ಲಿ ನಬಿ ಸ್ಥಾನವನ್ನು ಖಾತರಿಪಡಿಸುವಂತೆ ತೋರುತ್ತಿಲ್ಲ. ಇನ್ನೊಂದೆಡೆ ರೋಹಿತ್ ಮತ್ತು ಕಿಶನ್ ಹೊರತುಪಡಿಸಿ ಯಾವುದೇ ವಿಶೇಷ ಆರಂಭಿಕರನ್ನು ಹೊಂದಿಲ್ಲದ ಕಾರಣ ಎಂಐ ಬ್ಯಾಕಪ್ ಆಟಗಾರರನ್ನು ಇಟ್ಟಿಕೊಂಡಿಲ್ಲ. ಒಂದು ವೇಳೆ ಈ ಇಬ್ಬರು ಆಟಗಾರರಲ್ಲಿ ಒಬ್ಬರು ಗಾಯಕ್ಕೆ ತುತ್ತಾದರೆ ತಂಡಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.

ಯುವ ಆಟಗಾರಿಗೆ ಅವಕಾಶ : ತಿಲಕ್ ವರ್ಮಾ ಐಪಿಎಲ್‌ನಲ್ಲಿ ತನ್ನನ್ನು ತಾನು ಹೊರಹಾಕಲು ಮತ್ತು ಭಾರತ ಟಿ 20 ತಂಡದಲ್ಲಿ ಆಧಾರಸ್ತಂಭವಾಗುವ ಸಾಮರ್ಥ್ಯವನ್ನು ತೋರಿಸಲು ದೊಡ್ಡ ಅವಕಾಶ ಹೊಂದಿದ್ದಾರೆ. ಎಡಗೈ ಬ್ಯಾಟರ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಇದುವರೆಗೆ ಮಧ್ಯಮ ಕ್ರಮಾಂಕದಲ್ಲಿ 15 ಇನ್ನಿಂಗ್ಸ್‌ಗಳಿಂದ 336 ರನ್ ಗಳಿಸಿದ್ದಾರೆ.

ನೆಹಾಲ್ ವಧೇರಾ ಮತ್ತು ಕುಮಾರ್ ಕಾರ್ತಿಕೇಯ ಅವರು ಸಿಕ್ಕ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳಲು ಕಾತರರಾಗಿದ್ದಾರೆ. ಈ ಜೋಡಿಯು ಋತುವಿನ ಉದ್ದಕ್ಕೂ ಕೆಲವು ಪಂದ್ಯಗಳನ್ನು ಮಾತ್ರ ಆಡಬಹುದು. ಆದರೆ ಆ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನವು ಕ್ರಿಕೆಟ್ ಲೋಕದ ಗಮನವನ್ನು ಸೆಳೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲು ಉತ್ಸಾಹದಲ್ಲಿರುವ ಯುವ ಪ್ರತಿಭೆಗಳು: ಏನಂದ್ರು ಹೊಸಬರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.