ETV Bharat / state

ನರೇಂದ್ರ ಮೋದಿ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿಎಂ ಸಿದ್ದರಾಮಯ್ಯ - CM Siddaramaiah

author img

By ETV Bharat Karnataka Team

Published : May 4, 2024, 2:50 PM IST

Narendra Modi Lok Sabha election 2024 CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ(ETV Bharat)

''ನರೇಂದ್ರ ಮೋದಿ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್'' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕುಮಟಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. (ETV Bharat)

ಕುಮಟಾ (ಉತ್ತರ ಕನ್ನಡ) : ''ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ, ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ಪ್ರಧಾನಿಯವರ ರೀತಿ? ಮೋದಿ ಒಬ್ಬ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ಇಲ್ಲಿ ನಡೆದ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿದ ಅವರು, ''ಮಹಿಳೆಯರಿಗೆ ರಕ್ಷಣೆ ಕೊಡತ್ತೇವೆಂದು ಪ್ರಧಾನಿಯವರು ಹಾಗೂ ಬಿಜೆಪಿಯವರು ಹೇಳುತ್ತಾರೆ. ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಹಾಲಿ ಲೋಕಸಭಾ ಸದಸ್ಯ, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾಡಿರುವ ಅನ್ಯಾಯ ಜಗಜ್ಜಾಹೀರಾಗಿದೆ. ಈ ಬಗ್ಗೆ ಗೊತ್ತಿದ್ದೂ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಟಿಕೆಟ್ ನೀಡಿದ್ದಾರೆ. ಹೆಣ್ಣುಮಕ್ಕಳನ್ನು ರೇಪ್ ಮಾಡಿರುವವನಿಗೆ ಟಿಕೆಟ್ ಕೊಟ್ಟಿದ್ದಾರೆ. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ನೀತಿ'' ಎಂದು ಪ್ರಶ್ನಿಸಿದರು.

''ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಆಶೀರ್ವಾದ ಮಾಡಬೇಕು. ಹಿಂದೆ ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದೀರಿ. ಮಾರ್ಗರೇಟ್ ಆಳ್ವಾ ಒಮ್ಮೆ ಸಂಸದರಾಗಿದ್ದರು. ಈ ಬಾರಿ ಬದಲಾವಣೆಗೆ ಅವಕಾಶ ಇದೆ. ಹತ್ತು ವರ್ಷಗಳ ಕಾಲ ಮೋದಿಯವರು ಅಧಿಕಾರದಲ್ಲಿದ್ದರೂ ಕರ್ನಾಟಕದಲ್ಲಾಗಲಿ, ದೇಶದಲ್ಲಾಗಲಿ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿಲ್ಲ. ಮೋದಿ ಮತ್ತು ಬಿಜೆಪಿಯವರು ಹೇಳುತ್ತಿದ್ದರು. ಎರಡೂ ಕಡೆ ಒಂದೇ ಸರ್ಕಾರವಿದ್ದರೆ ಡಬಲ್ ಎಂಜಿನ್ ಸರ್ಕಾರವಾಗುತ್ತದೆ ಎನ್ನುತ್ತಿದ್ದರು. ಮೂರು ವರ್ಷ ಹತ್ತು ತಿಂಗಳು ಎರಡೂ ಒಂದೇ ಸರ್ಕಾರವಿದ್ದರೂ ಲೂಟಿ ಹೊಡೆದರೇ ವಿನಾ ಏನೂ ಕೆಲಸ ಮಾಡಿಲ್ಲ. ಮೋದಿಯವರು ಹೇಳ್ತಾರೆ, ಕರ್ನಾಟಕದಲ್ಲಿ ಲೂಟಿ ಹೊಡೆಯುವ ಗ್ಯಾಂಗ್ ಇದೆ. ಕಾಂಗ್ರೆಸ್‌ನವರು ಲೂಟಿ ಮಾಡುತ್ತಾರೆ ಎನ್ನುತ್ತಾರೆ. ಗುತ್ತಿಗೆದಾರರ ಸಂಘದವರು ರಾಜ್ಯ ಬಿಜೆಪಿ ಸರ್ಕಾರ ಶೇ 40 ಕಮಿಷನ್ ಸರ್ಕಾರವೆಂದಾಗ ಮೋದಿಯವರು ಏನೂ ಪ್ರತಿಕ್ರಿಯೆ ಕೊಟ್ಟಿಲ್ಲ'' ಎಂದು ಸಿದ್ದರಾಮಯ್ಯ ಹರಿಹಾಯ್ದರು.

''ಪ್ರಧಾನಿಯಾಗುವ ಮುನ್ನ ನೀಡಿದ್ದ ಯಾವ ಭರವಸೆಯನ್ನೂ ಮೋದಿಯವರು ಈಡೇರಿಸಿಲ್ಲ. ಎರಡು ಕೋಟಿ ವಾರ್ಷಿಕ ಉದ್ಯೋಗ ಸೃಷ್ಟಿ ಮಾಡುತ್ತೇವೆಂದರು. ವಿದ್ಯಾವಂತರು 10 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗದೆ‌ ನಿರುದ್ಯೋಗಿಗಳಾಗಿದ್ದಾರೆ. ಕೆಲಸ ಕೇಳಿದರೆ ಪಕೋಡಾ ಮಾರೋಕೆ ಹೋಗಿ ಎಂದು ಮೋದಿಯವರು ಹೇಳಿದರು. ಒಬ್ಬ ಪ್ರಧಾನಿ ಹೇಳುವ ಮಾತು ಇದಲ್ಲ. ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಸಲು ಆಗದಿದ್ದ ಮೇಲೆ ಆ ಕುರ್ಚಿಯಲ್ಲಿರಲು ನಿಮಗೆ ಯೋಗ್ಯತೆ ಇಲ್ಲ'' ಎಂದು ಕಿಡಿಕಾರಿದರು.

ಹಾವೇರಿಯಲ್ಲೂ ಸಿದ್ದರಾಮಯ್ಯ ಅಬ್ಬರದ ಪ್ರಚಾರ: ''ಬಾಗಲಕೋಟೆಗೆ ಬಂದಾಗ ಮೋದಿಯವರಿಗೆ ಕರಿ ಕಂಬಳಿ ಹೊದಿಸಲಾಗಿದೆ. ಅಂದು‌ ಕಂಬಳಿ ಹಾಕಿಕೊಂಡು ಕುರುಬರು ವೋಟ್ ಕೊಡ್ಲಿ ಅಂತ ಮೋದಿ ನಾಟಕ ಮಾಡಿದ್ದಾರೆ. ಕರಿ ಕಂಬಳಿ ಕುರುಬರ ಹಾಗೂ ಕನಕದಾಸರ ಸಂಕೇತ. ಅದಕ್ಕಾಗಿ ಕರಿ ಕಂಬಳಿ ಹಾಕ್ತಾರೆ. ಮೋದಿಯವರಿಗೆ ಕರಿ ಕಂಬಳಿ ಹಾಕೋ‌ ನೈತಿಕತೆ ಇಲ್ಲ. ಬಿಜೆಪಿಯವರು 28 ಸ್ಥಾನಗಳಲ್ಲಿ ಕುರುಬರಿಗೆ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ'' ಎಂದ ಸಿಎಂ ಸಿದ್ದರಾಮಯ್ಯನವರು ಬಿಜೆಪಿಗೆ ಮತ ಹಾಕದಂತೆ ಕುರುಬ ಸಮಾಜಕ್ಕೆ‌ ಕರೆ ನೀಡಿದರು.

ಹಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. (ETV Bharat)

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ''ಪಾಪ‌ ಈಶ್ವರಪ್ಪ ತಮ್ಮ ಮಗ ಕಾಂತೇಶನಿಗೆ ಟಿಕೆಟ್ ಕೇಳಿದರೆ ಕೊಡಲಿಲ್ಲ. ಆರ್​ಎಸ್ಎಸ್​ನಲ್ಲಿ ಪಳಗಿದವನು ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದವರು. ಆದರೆ, ಅವರ ಮಗನಿಗೆ ಟಿಕೆಟ್ ಕೊಡಲಿಲ್ಲ. ಕುರುಬರು ಒಂದೇ ಒಂದು‌ ವೋಟ್ ಬಿಜೆಪಿಗೆ ಕೊಡಬಾರದು'' ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಜನ ಸಂಕಲ್ಪ ಮಾಡಿದ್ದಾರೆ: ವಿಜಯೇಂದ್ರ - Lok Sabha Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.