ETV Bharat / state

ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 2,022 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ: ಪ್ರಿಯಾಂಕ್ ಖರ್ಗೆ

author img

By ETV Bharat Karnataka Team

Published : Mar 1, 2024, 9:44 PM IST

minister-priyank-kharge-reaction-on-filling-vacant-posts-in-panchayatraj-department
ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 2022 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ: ಪ್ರಿಯಾಂಕ್ ಖರ್ಗೆ

ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳು ನೇಮಕಾತಿ ಪತ್ರಗಳನ್ನು ಶೀಘ್ರದಲ್ಲೇ ಪಡೆಯಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು: "ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 2,022 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿದ್ದು, ಶೀಘ್ರದಲ್ಲಿಯೇ ಹುದ್ದೆಗಳ ನೇಮಕಾತಿ ಪತ್ರಗಳನ್ನು ಅಭ್ಯರ್ಥಿಗಳು ಪಡೆಯಲಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 136 ಕಿರಿಯ ಎಂಜಿನಿಯರ್, 288 ಸಹಾಯಕ ಎಂಜಿನಿಯರ್ ಮತ್ತು 24 ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗವು ಜನವರಿ 31ರಂದು ಅಂತಿಮಪಟ್ಟಿ ಪ್ರಕಟಿಸಿದೆ. ಈ ಪೈಕಿ 24 ಸಹಾಯಕ ಕಾರ್ಯಪಾಲಕ ಎಂಜಿನಿಯರ್​ಗಳ ನೇಮಕಾತಿ ಆದೇಶವನ್ನು ಆಯೋಗವು ತಡೆ ಹಿಡಿದಿದ್ದು, ಉಳಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.

"ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾದ ವಿವಿಧ 91 ಹುದ್ದೆಗಳನ್ನು ನೇರ ನೇಮಕಾತಿ ಕೋಟಾದಡಿ ಆನ್​ಲೈನ್​ ಮೂಲಕ ಭರ್ತಿ ಮಾಡಲು ಆಯೋಗಕ್ಕೆ ತಿಳಿಸಲಾಗಿದೆ. ಈ ಹುದ್ದೆಗಳಲ್ಲಿ 20 ಕಿರಿಯ ಎಂಜಿನಿಯರ್, 18 ಪ್ರಥಮ ದರ್ಜೆ ಸಹಾಯಕರು. 3 ಪ್ರಥಮ ದರ್ಜೆ ಲೆಕ್ಕ ಸಹಾಯಕರು, 42 ದ್ವಿತೀಯ ದರ್ಜೆ ಸಹಾಯಕರು ಹಾಗೂ 8 ದ್ವಿತೀಯ ದರ್ಜೆ ಲೆಕ್ಕ ಸಹಾಯರು ಸೇರಿದ್ದು, ಆಯೋಗ ಅಧಿಸೂಚನೆ ಹೊರಡಿಸಿದೆ" ಎಂದು ಮಾಹಿತಿ ನೀಡಿದ್ದಾರೆ.

"ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಲ್ಲಿ ಐವರು ಸಹಾಯಕ ಕಾರ್ಯಪಾಲಕ ಎಂಜನಿಯರ್​ಗಳ ನೇರ ನೇಮಕಾತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳೆದ 24ರಂದು ಸೂಚಿಸಲಾಗಿದೆ. ಇದೇ ಇಲಾಖೆಯಲ್ಲಿನ 2 ಪ್ರಥಮ ದರ್ಜೆ ಲೆಕ್ಕ ಸಹಾಯಕ, 49 ದ್ವಿತೀಯ ದರ್ಜೆ ಸಹಾಯಕ ಮತ್ತು 6 ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಲು ಆಯೋಗಕ್ಕೆ ಸೂಚಿಸುವ ಪ್ರಕ್ರಿಯೆ ನಡೆಯುತ್ತಿದೆ" ಎಂದರು.

"ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅಗತ್ಯವಾದ 40 (ಇವುಗಳಲ್ಲಿ 8 ಹುದ್ದೆಗಳು ಕಲ್ಯಾಣ ಕರ್ನಾಟಕ) ಗ್ರೂಪ್ ಎ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಾದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿಗಳನ್ನು ಭರ್ತಿ ಮಾಡಲು ಲೋಕಸೇವಾ ಆಯೋಗವು ಕಳೆದ 26ರಂದು ಅಧಿಸೂಚನೆ ಹೊರಡಿಸಿದೆ. ಹಾಗೆಯೇ, ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 256 ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಇವುಗಳಲ್ಲಿ 106 ಹೈ.ಕ), 220 ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1) (ಇವುಗಳಲ್ಲಿ 85 ಹೈ.ಕ), 343 ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್-2) (ಇವುಗಳಲ್ಲಿ 52 ಹೈ.ಕ) ಮತ್ತು 105 ದ್ವಿತೀಯ ದರ್ಜೆ ಲೆಕ್ಕ ಸಹಾಯಕ (ಇವುಗಳಲ್ಲಿ 50 ಹೈ.ಕ) ಹುದ್ದೆಗಳನ್ನು ನೇರವಾಗಿ ತುಂಬಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಶೀಘ್ರದಲ್ಲೇ ಸೂಚಿಸಲಾಗುವುದು" ಎಂದು ಸಚಿವರು ತಿಳಿಸಿದರು.

"ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಖಾಲಿ ಇರುವ 100 ಪ್ರಥಮ ದರ್ಜೆ ಸಹಾಯಕರು, 200 ದ್ವಿತೀಯ ದರ್ಜೆ ಸಹಾಯಕರು ಮತ್ತು ಕಲ್ಯಾಣ ಕರ್ನಾಟಕ ವೃಂದದ 48 ಪ್ರಥಮ ದರ್ಜೆ ಸಹಾಯಕರು ಹಾಗೂ 109 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತುಂಬಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಗ್ರಾ.ಪಂ ಕುಂದುಕೊರತೆ ದಾಖಲಿಸಲು ವಾಟ್ಸ್​ಆ್ಯಪ್ ಚಾಟ್​ಬಾಟ್: 'ಪಂಚಮಿತ್ರ ಪೋರ್ಟಲ್'​ಗೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.