ETV Bharat / state

ಬೆಂಗಳೂರನ್ನು ಸೇಫ್ ​ಸಿಟಿ ಮಾಡುವ ಪ್ರಯತ್ನ ಮುಂದುವರೆಯಲಿದೆ: ಗೃಹ ಸಚಿವ ಪರಮೇಶ್ವರ್

author img

By ETV Bharat Karnataka Team

Published : Mar 3, 2024, 4:27 PM IST

minister-g-parameshwar-reaction-on-making-bengaluru-safe-city
ಬೆಂಗಳೂರನ್ನು ಸೇಫ್​ಸಿಟಿ ಮಾಡುವ ಪ್ರಯತ್ನ ಮುಂದುವರೆಯಲಿದೆ: ಗೃಹ ಸಚಿವ ಪರಮೇಶ್ವರ್

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಎಫ್ಎಸ್ಎಲ್ ತನಿಖಾ ವರದಿ ಸಂಪೂರ್ಣವಾಗಿ ಬರಬೇಕಿದೆ. ಅದು ಬಂದ ಕೂಡಲೇ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್, ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ತನಿಖೆಯ ಮಾಹಿತಿಯನ್ನು ಸಭೆಯಲ್ಲಿ ಗೃಹ ಸಚಿವರು ಪಡೆದುಕೊಂಡರು.

ಸಭೆ ಬಳಿಕ ಮಾತನಾಡಿದ ಗೃಹ ಸಚಿವರು, "ಬಾಂಬ್ ಸ್ಫೋಟ ಪ್ರಕರಣದ ಇದುವರೆಗಿನ ತನಿಖೆ, ಮುಂದಿನ ತನಿಖಾ ಹಂತಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬ್ಯಾಗ್ ಇಟ್ಟು ಹೋದ ಆರೋಪಿತ ವ್ಯಕ್ತಿ ಯಾರು ಎಂಬುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ತನಿಖೆ ಪ್ರಾರಂಭಿಸಲಾಗಿದೆ. ಈಗಾಗಲೇ ಅನೇಕ ಪೊಲೀಸ್ ತಂಡಗಳನ್ನ ರಚಿಸಿಕೊಂಡು ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಪ್ರಮುಖವಾದ ಕುರುಹುಗಳು ದೊರೆತಿವೆ, ಅವುಗಳನ್ನು ಉಪಯೋಗಿಸಿಕೊಂಡು ಶೀಘ್ರದಲ್ಲಿಯೇ ಆರೋಪಿಯ ಬಂಧನವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಸ್ತು ಮತ್ತು ಇಂಟಲಿಜೆನ್ಸ್ ಹೆಚ್ಚಿಸುವಂತೆ ಸೂಚಿಸಲಾಗಿದೆ: ಎನ್​ಐಎ ಹಾಗೂ ಎನ್​ಎಸ್​ಜಿ ತಂಡಗಳು ಸಹ ಅವರದ್ದೇ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ. ಬೆಂಗಳೂರಿನ ಜನ ಆತಂಕ ಪಡುವ ಅಗತ್ಯವಿಲ್ಲ, ಬೆಂಗಳೂರನ್ನು ಸೇಫ್ ಸಿಟಿ ಮಾಡುವ ಪ್ರಯತ್ನ ಮುಂದುವರೆಯಲಿದೆ. ಆಯಾ ವಿಭಾಗಗಳ ಡಿಸಿಪಿಗಳು ತಮ್ಮ ವ್ಯಾಪ್ತಿಯಲ್ಲಿ ಗಸ್ತು ಮತ್ತು ಇಂಟಲಿಜೆನ್ಸ್ ಮಾಹಿತಿಗಳನ್ನು ಕಲೆಹಾಕುವ ಕೆಲಸವನ್ನ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ್​ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಎಫ್ಎಸ್ಎಲ್ ತನಿಖಾ ವರದಿ ಸಂಪೂರ್ಣವಾಗಿ ಬರಬೇಕಿದೆ. ಅದು ಬಂದ ಕೂಡಲೇ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಯಾವ ತಪ್ಪಿತಸ್ಥರನ್ನೂ ಸಹ ರಕ್ಷಿಸುವ ಅವಶ್ಯಕತೆಯೇ ಇಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತರುಗಳು ಭಾಗಿಯಾಗಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು: ಯು.ಟಿ.ಖಾದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.