ETV Bharat / state

ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು: ಯು.ಟಿ.ಖಾದರ್

author img

By ETV Bharat Karnataka Team

Published : Mar 3, 2024, 2:33 PM IST

Assembly Speaker UT Khader  ಬೆಳಗಾವಿ  Belagavi  ವಿಧಾನಸಭೆ ಸ್ಪೀಕರ್​ ಯುಟಿ ಖಾದರ್  ಬಾಂಬ್ ಬ್ಲಾಸ್ಟ್ ವಿಚಾರ
ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು: ವಿಧಾನಸಭೆ ಸ್ಪೀಕರ್​ ಯು.ಟಿ. ಖಾದರ್

ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಘಟನೆಯನ್ನು ರಾಜ್ಯದ ಎಲ್ಲ ಜನತೆ ಖಂಡಿಸಿದ್ದಾರೆ. ಇಂಥ ದೇಶದ್ರೋಹಿ ಕೃತ್ಯ ಯಾರು ಮಾಡಿದ್ದಾರೋ, ಅವರಷ್ಟೇ ಅಲ್ಲದೇ ಅವರ ಹಿಂದಿದ್ದು ಷಡ್ಯಂತ್ರ ಮಾಡಿದವರನ್ನು ಮಟ್ಟ ಹಾಕಬೇಕು ಎಂದು ವಿಧಾನಸಭೆ ಸ್ಪೀಕರ್​ ಯು.ಟಿ. ಖಾದರ್ ಆಗ್ರಹಿಸಿದರು.

ವಿಧಾನಸಭೆ ಸ್ಪೀಕರ್​ ಯು.ಟಿ. ಖಾದರ್ ಪ್ರತಿಕ್ರಿಯೆ

ಬೆಳಗಾವಿ: ''ಬಾಂಬ್ ಇಟ್ಟವರು ದೇಶದ್ರೋಹಿಗಳು. ಅವರಿಗೆ ಯಾವುದೇ ಜಾತಿ, ಧರ್ಮ, ವರ್ಗವಿಲ್ಲ. ಮನುಷ್ಯತ್ವ, ಕರುಣೆ ಇಲ್ಲದವರನ್ನು ನಾವು ಯಾರೂ ಕೂಡ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ವಿಧಾನಸಭೆ ಸ್ಪೀಕರ್​ ಯು.ಟಿ.ಖಾದರ್ ಹೇಳಿದರು.

ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ವಿಚಾರಕ್ಕೆ ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಶಾಂತಿಯುತ, ನಿರ್ಭಯ ಸಮಾಜದಲ್ಲಿ ಮಾತ್ರ ಅಭಿವೃದ್ಧಿ ಮತ್ತು ಜನ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಶಾಂತಿಯುತ ರಾಜ್ಯವನ್ನು ಹದಗೆಡಿಸಲು ಪ್ರಯತ್ನಿಸಿದವರನ್ನು ಮಟ್ಟ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಇದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶ ಏನಾಗಿತ್ತು ಎಂಬುದನ್ನು ಬಯಲು ಮಾಡಬೇಕು. ಅದೇ ರೀತಿ ಮುಂದೆ ಈ ರೀತಿ ಕೃತ್ಯ ಮಾಡಲು ಯಾರಿಗೂ ಧೈರ್ಯ ಬಾರದಂತಹ ಶಿಕ್ಷೆ ವಿಧಿಸಬೇಕು'' ಎಂದು ಆಗ್ರಹಿಸಿದರು.

ಬಾಂಬ್ ಇಟ್ಟವರಿಗೆ ಕಠಿಣ ಶಿಕ್ಷೆ ಆಗಬೇಕು: ''ಈ ಸಂದರ್ಭದಲ್ಲಿ ಯಾರೂ ಸಹ ರಾಜಕಾರಣ ಮಾಡಬಾರದು. ಆ ರೀತಿ ಮಾಡಿದರೆ ಅದು ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ಇರುವುದಿಲ್ಲ. ಈಗ ನಾವೆಲ್ಲ ಒಗ್ಗಟ್ಟಾಗಿರಬೇಕು. ಅದನ್ನು ಬಿಟ್ಟು ನಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿದರೆ, ದುಷ್ಕರ್ಮಿಗಳು ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಇನ್ನು ಯಾರೋ ಒಬ್ಬ ಮಾಡಿದ ತಪ್ಪಿಗೆ ಅವರ ಇಡೀ ವರ್ಗವನ್ನು ಗುರಿಯಾಗಿಸುವುದು ಸರಿಯಲ್ಲ. ಹಾಗಾಗಿ, ನಾವೆಲ್ಲಾ ಒಗ್ಗಟ್ಟಾಗಿರಬೇಕು. ಆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕು. ಬಾಂಬ್ ಇಟ್ಟವರಿಗೆ ಕಠಿಣ ಶಿಕ್ಷೆ ಆಗಬೇಕು'' ಎಂದರು.

ಕಾಂಗ್ರೆಸ್ ಸರ್ಕಾರ ಇದ್ದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ರಾಜಕೀಯವಾಗಿ ನಾನು ಏನೂ ಮಾತಾಡೋದಿಲ್ಲ. ಕರ್ನಾಟಕ ಜನತೆ, ಕನ್ನಡಿಗರು ಎಲ್ಲರೂ ಒಗ್ಗಟ್ಟಾಗಿ, ಅಣ್ಣ ತಮ್ಮಂದಿರಂತೆ ಜೀವನ ನಡೆಸುತ್ತೇವೆ. ಇದರ ನಡುವೆ ನಮ್ಮನ್ನು ಬೇರ್ಪಡಿಸಲು ಯಾರಿಗೂ ಅವಕಾಶ ನೀಡಬಾರದು'' ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶಾಸಕರ ಭವನ ಕಟ್ಟುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯು.ಟಿ‌. ಖಾದರ್, ''ಇದರಕ್ಕೆ ಎರಡ್ಮೂರು ಪ್ಲಾನ್ ಮಾಡಿಕೊಂಡಿದ್ದೇವೆ. ಇಲಾಖೆ ಅಧಿಕಾರಿಗಳ ಜೊತೆಗೆ ಡಿಸಿಯವರು ಚರ್ಚೆ ಮಾಡಿದ್ದಾರೆ. ನಾನು ಮತ್ತು ವಿಧಾನ ಪರಿಷತ್ ಸಭಾಪತಿ ಅವರು ಕುಳಿತು ಚರ್ಚೆ ಮಾಡಿ, ಶಾಸಕರ ಭವನಕ್ಕೆ ಅಂತಿಮ ರೂಪುರೇಷೆ ಸಿದ್ಧಪಡಿಸುತ್ತೇವೆ'' ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ಕೆಫೆ ಸ್ಫೋಟ: ತನಿಖೆಗೆ ಸವಾಲಾದ ಆರೋಪಿ ಬಳಸಿಕೊಂಡ ಸಮಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.