ETV Bharat / state

ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿಗೆ ಬರುವ ಸಾಧ್ಯತೆ ಇದೆ ಎಂದ ಯತ್ನಾಳ್; ನಮ್ಮ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಎಂದ ಪ್ರಿಯಾಂಕ್

author img

By ETV Bharat Karnataka Team

Published : Feb 22, 2024, 4:02 PM IST

ಪ್ರಿಯಾಂಕ್ ಖರ್ಗೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್
ಪ್ರಿಯಾಂಕ್ ಖರ್ಗೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್

ನಿಮ್ಮ ರಕ್ತದಲ್ಲಿ ಸಂವಿಧಾನ ಇಲ್ಲ, ನಮ್ಮ ರಕ್ತದಲ್ಲಿ ಆರ್​ಎಸ್​ಎಸ್​ ಇಲ್ಲ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಅವರು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಿರುಗೇಟು ನೀಡಿದರು.

ಅರವಿಂದ ಬೆಲ್ಲದ್

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿಗೆ ಬರುವ ಸಾಧ್ಯತೆ ಇದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಕುತೂಹಲದ ಹೇಳಿಕೆ ನೀಡಿದ ಪ್ರಸಂಗ ನಡೆಯಿತು.

ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ್ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಗೂ ಅನುದಾನ ಕೊಟ್ಟಿಲ್ಲ ಎಂದು ಹೇಳಿದಾಗ, ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಧ್ಯೆ ಪ್ರವೇಶಿಸಿ ಮಾತನಾಡಿ, 40 ಪರ್ಸೆಂಟ್ ಕಮೀಷನ್ ಬಗ್ಗೆ ಈ ಸರ್ಕಾರ ತನಿಖೆಯನ್ನೇ ಮಾಡಲಿಲ್ಲ. ಕಾಂಗ್ರೆಸ್‌ನ ಹಲವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳು ಇವೆ. ಮಧ್ಯಪ್ರದೇಶದ ಕಮಲನಾಥ್ ಬಿಜೆಪಿ ಸೇರುತ್ತಾರೆ. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರುತ್ತಾರೆ ಎಂಬ ಮಾತುಗಳಿವೆ ಎಂದು ಹೇಳಿದ್ದು, ಸಚಿವ ಪ್ರಿಯಾಂಕ್​ ಖರ್ಗೆಯವರ ಸಿಟ್ಟಿಗೆ ಕಾರಣವಾಯಿತು. ಆಗ ಯತ್ನಾಳ್ ಜತೆ ಮಾತಿನ ಚಕಮಕಿ ನಡೆಸಿದರು. ನಮ್ಮ ಹೆಣ ಕೂಡಾ ಬಿಜೆಪಿ ಕಡೆ ಹೋಗಲು ಸಾಧ್ಯವೇ ಇಲ್ಲ. ನಮ್ಮ ರಕ್ತದಲ್ಲಿ ಅದು ಇಲ್ಲವೇ ಇಲ್ಲ ಎಂದು ಸಿಟ್ಟಿನಿಂದ ಹೇಳಿದರು.

ಮಾತು ಮುಂದುವರೆಸಿದ ಪ್ರಿಯಾಂಕ್​ ಖರ್ಗೆ, ನಿಮ್ಮ ರಕ್ತದಲ್ಲಿ ಸಂವಿಧಾನ ಇಲ್ಲ, ನಮ್ಮ ರಕ್ತದಲ್ಲಿ ಆರ್‌ಎಸ್‌ಎಸ್ ಇಲ್ಲ ಎಂದು ಯತ್ನಾಳ್ ಅವರಿಗೆ ನೇರವಾಗಿ ತಿರುಗೇಟು ಕೊಟ್ಟರು. ಬಸನಗೌಡ ಪಾಟೀಲ್ ಯತ್ನಾಳ್, ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡುತ್ತಿರುವುದು ನಾವೇ ಎಂದು ಸಮರ್ಥಿಸಿಕೊಂಡರು.

ಪ್ರಿಯಾಂಕ್ ಖರ್ಗೆ ಮಾತನಾಡಿ, ನೀವು ಹೇಗೆ ಸಂವಿಧಾನ ಸರಿಯಾಗಿ ಜಾರಿ ಮಾಡಿದ್ದೀರಾ ಸರ್. ಒಂದು ಧರ್ಮಕ್ಕೆ ಮಾತ್ರ ಆದ್ಯತೆ ನೀಡುವುದು ಸಂವಿಧಾನ ಬದ್ಧವೇ? ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಸ್ಪೀಕರ್ ಯು. ಟಿ ಖಾದರ್ ಪದೇ ಪದೇ ಈ ರೀತಿ ಮಧ್ಯದಲ್ಲಿ ಎದ್ದುನಿಂತು ಚರ್ಚೆ ಮಾಡುವುದು ಬೇಡ. ಅರವಿಂದ ಬೆಲ್ಲದ್ ಚರ್ಚೆ ಮುಂದುವರೆಸಲಿ ಎಂದು ಹೇಳಿ ಈ ಕುರಿತ ಹೆಚ್ಚಿನ ಚರ್ಚೆಗೆ ಅವಕಾಶ ಕೊಡದೆ ಯತ್ನಾಳ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಮಾತುಗಳಿಗೆ ತಡೆ ಹಾಕಿದರು.

ಸಚಿವ ಪ್ರಿಯಾಂಕ ಖರ್ಗೆ

ಮಾತು ಮುಂದುವರೆಸಿದ ಬೆಲ್ಲದ್, ಸಿದ್ದರಾಮಯ್ಯ ಅವರ ಸರ್ಕಾರ ಸಾಲ ಮಾಡಿ ತುಪ್ಪ ತಿನ್ನುವಂತಹ ಬಜೆಟ್ ಮಂಡಿಸಿದೆ. ರೈತರ ಮೇಲಷ್ಟೆ ಅಲ್ಲ ಮುಖ್ಯಮಂತ್ರಿಯವರು ಡಿ. ಕೆ ಶಿವಕುಮಾರ್ ಮೇಲಿನ ಸಿಟ್ಟಿಗೆ ನೀರಾವರಿ ಇಲಾಖೆಗೆ ಅನುದಾನ ಕಡಿತ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಗೆ ರಾಜ್ಯದ ಉದಯೋನ್ಮುಖ ನಾಯಕ ಎನ್ನುತ್ತಿದ್ದಂತೆ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ ಸುಧಾಕರ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು, ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಎಷ್ಟು ಬಾಕಿ ಉಳಿಸಿತ್ತು ಎಂದು ಹೇಳಿ ಎಂದು ಸವಾಲು ಹಾಕಿದರು.

ತನಿಖೆಗೆ ನಿಮ್ಮ ಸಹಕಾರ ಬೇಕಿದೆ : ಸಚಿವ ಪ್ರಿಯಾಂಕ್ ಖರ್ಗೆ ಇದಕ್ಕೆ ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶೇ.40ರಷ್ಟು ಕಮಿಷನ್ ತನಿಖೆ ಪೂರ್ಣಗೊಳಿಸಿ. ಈ ಸರ್ಕಾರ ಬಂದು ಒಂಬತ್ತು ತಿಂಗಳಾಯಿತು. ಪಿಎಸ್‍ಐ ಹಗರಣದ್ದು ತನಿಖೆ ಪೂರ್ಣಗೊಂಡಿಲ್ಲ ಎಂದಾಗ, ಪ್ರಿಯಾಂಕ್ ಖರ್ಗೆ, ಬಹಿರಂಗವಾಗಿ ಹೇಳಿಕೆ ನೀಡಿದ್ದ ಯತ್ನಾಳ್ ಅವರು ಪಿಎಸ್‍ಐ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ವೀರಪ್ಪ ಆಯೋಗದ ಮುಂದೆ ಹೇಳಿಕೆ ನೀಡಿಲ್ಲ. ನಾವು ನಿಮ್ಮ ಹೇಳಿಕೆ ಕಾಯುತ್ತಿದ್ದೇವೆ. ತನಿಖೆಗೆ ನಿಮ್ಮ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.

ಇನ್ನು ಶೇ. 40ರಷ್ಟು ಹಗರಣದಲ್ಲಿ ಎಷ್ಟು ನುಂಗಿದ್ದಾರೆ ಎಂದರೆ, ಅದರ ಆಳ ಅಗಲವೇ ಗೊತ್ತಾಗುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು. ಬಸನಗೌಡ ಪಾಟೀಲ್ ಯತ್ನಾಳ್ ಈ ಸರ್ಕಾರ ಬಂದಾಗ ಶುರುವಾಗಿರುವ ಶೇ. 40ರಷ್ಟು ಕಮಿಷನ್ ಬಗ್ಗೆಯೂ ತನಿಖೆಯಾಗಬೇಕು. ಸಿಬಿಐಗೆ ವಹಿಸಿ ಎಂದರು. ಆಗ ಕಾಂಗ್ರೆಸ್ ಶಾಸಕರು ಯತ್ನಾಳ್ ಅವರನ್ನು ಕೆಣಕಿದಾಗ, ಸರ್ವಪಕ್ಷದ ಅಧಿಕೃತ ಪ್ರತಿಪಕ್ಷದ ನಾಯಕ ನಾನೇ ಎಂದು ಯತ್ನಾಳ್ ಸೆಟೆದು ನಿಂತರು.

ಇದನ್ನೂ ಓದಿ : ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ: ಕೆಳಮನೆಯಲ್ಲಿ ಪಾಸ್​, ಮೇಲ್ಮನೆಯಲ್ಲಿ ಫೇಲ್; ಮತ ಎಣಿಕೆ ಮೂಲಕ ಪರಿಶೀಲನಾ ಸಮಿತಿ ರಚನೆಗೆ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.