ETV Bharat / state

ಕಲ್ಯಾಣ ಮಂಟಪಕ್ಕೆ ಬಂದು ಮಂಗಳ ಸೂತ್ರ ಕಿತ್ತುಕೊಂಡ ಪ್ರಿಯಕರ! ಹಾಸನದಲ್ಲಿ ಮುರಿದು ಬಿತ್ತು ಮದುವೆ - Boyfriend Snatched Mangalasutra

author img

By ETV Bharat Karnataka Team

Published : Mar 22, 2024, 9:25 AM IST

Updated : Mar 22, 2024, 11:03 AM IST

ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧುವಿನ ಪ್ರಿಯಕರ ಆಗಮಿಸಿ ನಡೆಯುತ್ತಿದ್ದ ಮದುವೆಯನ್ನು ನಿಲ್ಲಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಆದರೆ ಕ್ಲೈಮ್ಯಾಕ್ಸ್ ಏನು ಗೊತ್ತೇ? ಮುಂದೆ ಓದಿ..

ಮುರಿದು ಬಿದ್ದ ಮದುವೆ
ಮುರಿದು ಬಿದ್ದ ಮದುವೆ

ಹಾಸನ: ತಾಳಿ ಕಟ್ಟುವ ವೇಳೆ ಸಿನಿಮೀಯ ರೀತಿಯಲ್ಲಿ ಮದುವೆ ಮುರಿದು ಬಿದ್ದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಗುರುವಾರ ನಡೆಯಿತು. ನವ ವಧು-ವರರನ್ನು ಹರಸಲು ಬಂದಿದ್ದ ನೂರಾರು ಮಂದಿ ನಿರಾಶೆಗೊಂಡರು. ಶುಭ ಕಾರ್ಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಎರಡೂ ಮನೆಯವರು ಕಂಗಾಲಾದರು.

ನಡೆದಿದ್ದೇನು?: ಪ್ರೀತಿ ಮುಚ್ಚಿಟ್ಟ ಯುವತಿ ಬೇರೊಬ್ಬನ ಜೊತೆ ಹಸೆಮಣೆ ಏರುತ್ತಿದ್ದ ಸುದ್ದಿ ತಿಳಿದು ಪ್ರಿಯಕರ ಕಲ್ಯಾಣಮಂಟಪಕ್ಕೆ ಆಗಮಿಸಿದ್ದಾನೆ. ಹೀಗೆ ಬಂದವನೇ ವರನ ಕೈಯಲ್ಲಿದ್ದ ತಾಳಿ ಕಸಿದುಕೊಂಡ. ತಕ್ಷಣವೇ ಆತನನ್ನು ಹಿಡಿದ ವಧುವಿನ ಮನೆಯವರು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರ ವಿಚಾರಣೆಯ ಬಳಿಕ ಇಬ್ಬರ ನಡುವಿನ ಪ್ರೇಮ್ ಕಹಾನಿ ಬಯಲಾಯಿತು.

ಸಂಪೂರ್ಣ ವಿವರ: ಬೇಲೂರು ಪಟ್ಟಣದ ಯುವತಿ ಹಾಗೂ ಶಿವಮೊಗ್ಗ ಜಿಲ್ಲೆಯ ಯುವಕನಿಗೆ ಮದುವೆ ನಿಶ್ಚಯವಾಗಿದ್ದು, ಒಕ್ಕಲಿಗರ ಸಮುದಾಯ ಭವನದಲ್ಲಿ ವಿವಾಹ ಕಾರ್ಯಕ್ರಮ ನಿಗದಿಯಾಗಿತ್ತು. ಇನ್ನೇನು ತಾಳಿ ಕಟ್ಟಿ ಮಂತ್ರಾಕ್ಷತೆ ಹಾಕಿ, ಮಂಗಳವಾದ್ಯ ಮೊಳಗಬೇಕು ಎನ್ನುವಷ್ಟರಲ್ಲಿ ಥೇಟ್ ಸಿನಿಮಾ ರೀತಿಯಲ್ಲೇ ಕಲ್ಯಾಣಮಂಟಪಕ್ಕೆ ಹಾಸನ ಹೊರವಲಯದ ಗವೇನಹಳ್ಳಿಯ ಯುವಕ ತನ್ನ ಕೆಲವು ಸ್ನೇಹಿತರೊಂದಿಗೆ ನುಗ್ಗಿದ್ದಾನೆ. ನೂರಾರು ಮಂದಿಯ ಸಮ್ಮುಖದಲ್ಲೇ ವಧುವಿನ ಕೊರಳಿಗೆ ಮದುಮಗ ಕಟ್ಟಬೇಕಿದ್ದ ತಾಳಿಯನ್ನು ಕಿತ್ತುಕೊಂಡಿದ್ದಾನೆ.

ಆ ಬಳಿಕ, "ಆಕೆ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನೊಂದಿಗೆ ಮದುವೆ ಮಾಡಿ" ಎಂದು ಪಟ್ಟು ಹಿಡಿದು ನಿಂತುಬಿಟ್ಟ. ಈ ದೃಶ್ಯ ಕಂಡು ಮದುವೆ ಮನೆಯಲ್ಲಿದ್ದವರು ಅರೆಕ್ಷಣ ಆತಂಕಗೊಂಡರು. ಕಲ್ಯಾಣಮಂಟಪದಲ್ಲಿ ಗೊಂದಲದ ವಾತಾವರಣ ನಿರ್ಮಾಣಯಿತು. ತಕ್ಷಣವೇ ಯುವಕನನ್ನು ಹಿಡಿದುಕೊಂಡ ವಧುವಿನ ಕಡೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಯುವಕ ಹಾಗೂ ವಧುವನ್ನು ವಶಕ್ಕೆ ಪಡೆದು ಕರೆದೊಯ್ದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಧು, "ನನಗೆ ಈ ಯುವಕ ಯಾರೆಂದು ಗೊತ್ತಿಲ್ಲ" ಎಂದು ಹೇಳಿದ್ದಾಳೆ.

ಇದರಿಂದ ಕೋಪಗೊಂಡ ಯುವಕ, ತಮ್ಮ ಲವ್ ಸ್ಟೋರಿಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದಾನೆ. ಯುವತಿ ಮಾಡಿರುವ ಮೆಸೇಜ್‌ಗಳು, ಫೋಟೋಗಳನ್ನು ಪೊಲೀಸರಿಗೆ ತೋರಿಸಿದ್ದಾನೆ. ಈ ಇಬ್ಬರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರೂ ಕೂಡಾ ತಮ್ಮ ಪೋಷಕರಿಗೆ ಈ ವಿಷಯ ತಿಳಿಸಿರಲಿಲ್ಲ.

ಈ ನಡುವೆ ಮದುವೆಗೂ ಮುನ್ನಾ ದಿನ ರಾತ್ರಿ ಯುವಕನಿಗೆ ಮೆಸೇಜ್ ಮಾಡಿದ್ದ ವಧು, ನನಗೆ ಮದುವೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ನೀನೇ ಬಂದು ನಿಲ್ಲಿಸು ಎಂದು ಮೆಸೇಜ್ ಮಾಡಿದ್ದಳು!. ಅದರಂತೆ ಯುವಕ ನಾಲ್ಕೈದು ಸ್ನೇಹಿತರೊಂದಿಗೆ ಬಂದು ಮದುವೆ ನಿಲ್ಲಿಸಿದ್ದಾನೆ.

ಇನ್ನೊಂದೆಡೆ, ಹೊಸ ಕನಸುಗಳೊಂದಿಗೆ ಹೊಸ ಬಾಳಿಗೆ ಕಾಲಿಡಬೇಕಿದ್ದ ವರ ತಾನು ಮದುವೆಯಾಗಬೇಕಿದ್ದ ವಧುನಿನ ಲವ್‌ ಸ್ಟೋರಿ ಕಂಡು, ನನಗೆ ಈ ಮದುವೆಯೇ ಬೇಡ ಎಂದು ಪೋಷಕರು ಹಾಗೂ ಸಂಬಂಧಿಕರೊಂದಿಗೆ ಶಿವಮೊಗ್ಗಕ್ಕೆ ವಾಪಸ್ ತೆರಳಿದ್ದಾನೆ.

ನಂತರ ವಧು, ನಾನು ಕೂಡಾ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಹೊಸ ವರಸೆ ತೆಗೆದಿದ್ದಾಳೆ. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಬೇಲೂರು ಪೊಲೀಸ್ ಠಾಣೆಯಲ್ಲಿ ಯುವಕ ಹಾಗೂ ಯುವತಿ ಪೋಷಕರ ಜೊತೆ ಪೊಲೀಸರು ಮಾತುಕತೆ ನಡೆಸಿದ್ದು, ಅದೇ ಯುವಕನಿಗೆ ಮದುವೆ ಮಾಡಿಕೊಡಲು ವಧುವಿನ ಪೋಷಕರು ಒಪ್ಪಿಕೊಂಡರು!.

ಆದರೆ ಯುವತಿ, ತನಗೆ ಮದುವೆ ಬೇಡ ಎಂದು ಮತ್ತೆ ಹಠ ಹಿಡಿದಳು. ಹಿರಿಯರು ಹಾಗೂ ಪೊಲೀಸರು ಮನವೊಲಿಸಿದ ನಂತರ ಯುವಕನ ಜೊತೆ ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ. ಇಂದು ರಿಜಿಸ್ಟರ್ ಮ್ಯಾರೇಜ್ ನಡೆಯಲಿದ್ದು, ಇನ್ನೊಂದು ತಿಂಗಳ ನಂತರ ವಿವಾಹ ಮಾಡಲು ಎರಡೂ ಕಡೆಯ ಕುಟುಂಬಸ್ಥರು ಒಪ್ಪಿದ್ದಾರೆ.

ಇದನ್ನೂ ಓದಿ: ಯುವತಿಗೆ ವೈಯಕ್ತಿಕ ವಿಡಿಯೋ ಕಳುಹಿಸಿ ಹಣ ಸುಲಿಗೆ‌ ಮಾಡಿದ್ದ ಆರೋಪಿ ಬಂಧನ - extorted money from young woman

Last Updated :Mar 22, 2024, 11:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.