ETV Bharat / state

10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 40 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ

author img

By ETV Bharat Karnataka Team

Published : Jan 31, 2024, 10:47 AM IST

Updated : Jan 31, 2024, 5:52 PM IST

Lokayukta officers raid  Verification of files  ಲೋಕಾಯುಕ್ತ ದಾಳಿ  ಕಡತಗಳ ಪರಿಶೀಲನೆ
ಪಿಜಿ‌ ಸೆಂಟರ್​ನ ನಿರ್ದೇಶಕರ ಮೇಲೆ ಲೋಕಾಯುಕ್ತ ದಾಳಿ, ಕಡತಗಳ ಪರಿಶೀಲನೆ

ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ಪಿಟಿಐಗೆ ತಿಳಿಸಿದ್ದಾರೆ. ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ತುಮಕೂರು, ಕೊಪ್ಪಳ ಮತ್ತು ಮಂಗಳೂರಿನಲ್ಲಿ ದಾಳಿ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಳ್ಳಾರಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 10 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಸ್ಥಿರ ಮತ್ತು ಚರ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಬಳ್ಳಾರಿ-ಪಿಜಿ‌ ಸೆಂಟರ್​ನ ನಿರ್ದೇಶಕರ ಮನೆ ಮೇಲೆ ದಾಳಿ: ಬಳ್ಳಾರಿಯ ವಿಎಸ್​ಕೆ ವಿಶ್ವವಿದ್ಯಾಲಯದ ನಂದಿಹಳ್ಳಿಯ ಪಿಜಿ‌ ಸೆಂಟರ್​ನ ನಿರ್ದೇಶಕ ಪ್ರೊ.ರವಿ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೆಹರು ಕಾಲೊನಿಯ ಅಪಾರ್ಟ್​ಮೆಂಟ್​ನಲ್ಲಿರುವ ಮನೆಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ಕಡತಗಳ ಪರಿಶೀಲನೆ ನಡೆಯುತ್ತಿದೆ.

ಮಂಡ್ಯ-ಪಿಡಬ್ಲ್ಯುಡಿ ಅಧಿಕಾರಿ ಮೇಲೆ ದಾಳಿ: ಮಂಡ್ಯದ ಲೋಕೋಪಯೋಗಿ ಇಲಾಖೆಯ ಇಇ ಹರ್ಷ ಅವರ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಮನೆ, ಮಂಡ್ಯ ಜಿಲ್ಲೆಯ ಸಂಬಂಧಿಕರ ಮನೆಗಳು, ಮಂಡ್ಯ ಕಚೇರಿ, ಕಲ್ಲಹಳ್ಳಿಯ ಮಾವ ಹಾಗೂ ನಾಗಮಂಗಲದ ತೋಟದ ಮನೆಗಳಲ್ಲಿ ಕಡತಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಹಾಸನ-ಆಹಾರ ನಿರೀಕ್ಷಕರ ಮನೆ, ಕಚೇರಿ ಮೇಲೆ ದಾಳಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಹಾಸನದ ಆಹಾರ ನಿರೀಕ್ಷಕ ಜಗನ್ನಾಥ್ ಅವರ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, ಕಚೇರಿ ಹಾಗೂ ನಿವಾಸದಲ್ಲಿ ಶೋಧ ನಡೆಸುತ್ತಿದ್ದಾರೆ. ಜಗನ್ನಾಥ್ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕಿರಣ್ ಅವರ ನಿವಾಸ ಮತ್ತು ಕಚೇರಿ ಮೇಲೂ ದಾಳಿಯಾಗಿದೆ. ಲೋಕಾಯುಕ್ತ ಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ತಿರುಮಲೇಶ್, ಇನ್ಸ್​ಪೆಕ್ಟರ್​ಗಳಾದ ಬಾಲು ಮತ್ತು ಶಿಲ್ಪಾ ನೇತೃತ್ವದ ಶೋಧ ನಡೆಯುತ್ತಿದೆ.

ಚಿಕ್ಕಮಗಳೂರು-ವಾಣಿಜ್ಯ ತೆರಿಗೆ ಅಧಿಕಾರಿ ಮೇಲೆ ದಾಳಿ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ನೇತ್ರಾವತಿ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಕಡೂರು ಪಟ್ಟಣದಲ್ಲಿರುವ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಮೈಸೂರು: ಮುಡಾ ಇಂಜಿನಿಯರ್ ಮೇಲೆ ದಾಳಿ: ಮುಡಾ ಎಂಜಿನಿಯರ್ ಯಜ್ಞೇಂದ್ರ ಅವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಮೈಸೂರಿನ ಜೆ.ಪಿ.ನಗರದ ಮನೆ, ವಿಜಯನಗರದ ಅಪಾರ್ಟ್ ಮೆಂಟ್, ಕೆ.ಆರ್.ನಗರ ತಾಲೂಕಿನ ನಗರ್ಲೆ ಗ್ರಾಮದ ಯಜ್ಞೇಂದ್ರ ಅವರ ಸಹೋದರನ ಮನೆಗಳಲ್ಲೂ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ತುಮಕೂರು-ಕೆಆರ್‌ಡಿಎಲ್ ಎಂಜಿನಿಯರ್ ಮೇಲೆ ದಾಳಿ: ತುಮಕೂರಿನ ಶಿರಾ ಗೇಟ್ ಬಳಿ ಇರುವ ಕೆಆರ್ ಡಿಎಲ್ ಎಂಜಿನಿಯರ್ ಹನುಮಂತರಾಯಪ್ಪ ಅವರ ಮನೆ ಮೇಲೆ ಲೋಕಾ ಅಧಿಕಾರಿಗಳು ನಡೆಸಿ, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

ಮಂಗಳೂರು-ಮೆಸ್ಕಾಂ ಇಂಜಿನಿಯರ್ ಮೇಲೆ ದಾಳಿ: ಮಂಗಳೂರಿನ ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅತ್ತಾವರ ವಿಭಾಗದ ಮೆಸ್ಕಾಂ ಇಇ ಶಾಂತಕುಮಾರ್ ಅವರ ದೇರೆಬೈಲ್ ಕೊಂಚಾಡಿ ಹಾಗೂ ಕೊಂಚಾಡಿಯ ಶಿವಪ್ರಸಾದ್ ಗೋಲ್ಡ್ ಅಪಾರ್ಟ್​ಮೆಂಟ್​‌ನಲ್ಲಿರುವ ಮನೆ ಹಾಗೂ ಬೆಂಗಳೂರು ನಿವಾಸದಲ್ಲಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಕಳೆದ ಐದಾರು ವರ್ಷಗಳಿಂದ ಮಂಗಳೂರಿನಲ್ಲಿ ಶಾಂತಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲೂ ದಾಳಿ: ವರ್ಗಾವಣೆಗೊಂಡು ಸ್ಥಳ ನಿರೀಕ್ಷಣೆಯಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ರವಿಕುಮಾರ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿರುವ ಹಾಗೂ ಮೈಸೂರಿನಲ್ಲಿ ರವಿಕುಮಾರ್ ಮನೆ, ಅವರ ಬಾಮೈದುನನ ಮನೆ ಹಾಗೂ ಆಲಗಳ್ಳಿಯಲ್ಲಿರುವ ತಂದೆ ಮನೆಯಲ್ಲಿ ಏಕಕಾಲಕ್ಕೆ ಲೋಕಾ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ರವಿಕುಮಾರ್ ಮೊದಲು ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಟಿ.ನರಸೀಪುರ, ನಂತರ ಹುಣಸೂರಿಗೆ ವರ್ಗಾವಣೆಗೊಂಡಿದ್ದರು.

ಗಂಗಾವತಿಯಲ್ಲಿ ಅರಣ್ಯಾಧಿಕಾರಿ ಮನೆ ಮೇಲೆ ದಾಳಿ: ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ರೇಣುಕಮ್ಮ ಎಂಬುವವರ ಗಂಗಾವತಿ ನಿವಾಸ ಹಾಗೂ ಫಾರ್ಮ್​ ಹೌಸ್ ಮೇಲೆ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗಂಗಾವತಿ ನಗರದ ನಿವಾಸ ಮತ್ತು ರಾಯಚೂರು-ಕೊಪ್ಪಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹೇಮಗುಡ್ಡದ ಟೋಲ್​ ಗೇಟ್ ಸಮೀಪದ ಎಚ್ಆರ್​ಜಿ ನಗರದ (ಲಿಂಗದಳ್ಳಿ) ಫಾರ್ಮ್​ ಹೌಸ್ (ತೋಟದ ಮನೆ) ಮೇಲೆ ದಾಳಿ ನಡೆದಿದೆ. ರೇಣುಕಮ್ಮ ಹಾಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಅರಣ್ಯ ಇಲಾಖೆಯ ವಲಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: 'ಮಾನವ ಹಕ್ಕುಗಳ ಆಯೋಗದಲ್ಲಿ 1,230 ಪ್ರಕರಣ ಇತ್ಯರ್ಥ'

Last Updated :Jan 31, 2024, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.