ETV Bharat / state

ಕೇರಳ ಸಿಎಂ ಮಗಳು ನಿರ್ದೇಶಕಿಯಾಗಿರುವ ಕಂಪೆನಿ ವಿರುದ್ಧ ತನಿಖೆ: ಕೇಂದ್ರದ ಕ್ರಮ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

author img

By ETV Bharat Karnataka Team

Published : Feb 16, 2024, 3:28 PM IST

Updated : Feb 17, 2024, 6:23 PM IST

Karnataka High Court  Kerala CM daughter case  central government action  ಕೇರಳ ಸಿಎಂ ಮಗಳು ಪ್ರಕರಣ  ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಕೇರಳ ಸಿಎಂ ಪಿಣಿರಾಯಿ ವಿಜಯನ್ ಅವರ​ ಮಗಳು ನಿರ್ದೇಶಕರಾಗಿರುವ ಕಂಪೆನಿ ವಿರುದ್ಧ ತನಿಖೆಗೆ ಆದೇಶಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್​ ಎತ್ತಿ ಹಿಡಿದಿದೆ.

ಬೆಂಗಳೂರು: ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಗಳು ವೀಣಾ ನಿರ್ದೇಶಕರಾಗಿರುವ ಎಕ್ಸಾಲಾಜಿಕ್ ಸಲೂಷನ್ಸ್ ವಿರುದ್ಧದ ತನಿಖೆಗೆ ಆದೇಶಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ತಮ್ಮ ಕಂಪನಿಯ ವಿರುದ್ಧ ತನಿಖೆ ನಡೆಸುವಂತೆ ಗಂಭೀರ ವಂಚನೆ ತನಿಖಾ ಅಧಿಕಾರಿಗಳಿಗೆ (Serious Fraud Investigation Office) ಸೂಚನೆ ನೀಡಿದ್ದ ಕೇಂದ್ರದ ಕ್ರಮ ಪ್ರಶ್ನಿಸಿ ವೀಣಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿತು.

ಅಲ್ಲದೆ, ತಂತ್ರಜ್ಞಾನದ ಬೆಳವಣಿಗೆಯಾಗುತ್ತಿದ್ದಂತೆ ಆರ್ಥಿಕ ಅಪರಾಧಗಳು ದೇಶದ ಹಣಕಾಸು ವ್ಯವಸ್ಥೆಯ ಮೇಲೆ ಬೆದರಿಕೆಯಾಗಿ ಮಾರ್ಪಟ್ಟಿದೆ ಎಂದು ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಅಂತಹ ಅಪರಾಧಗಳ ಸ್ವರೂಪ ಮತ್ತು ಅದರಲ್ಲಿ ಭಾಗಿಯಾದ ವ್ಯಕ್ತಿಗಳ ಪಾತ್ರ ಪತ್ತೆ ಹಚ್ಚುವುದು ಹಾಗೂ ಅರ್ಥ ಮಾಡಿಕೊಳ್ಳುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ. ಜೊತೆಗೆ, ಪ್ರಸಕ್ತ ಪ್ರಕರಣದಲ್ಲಿ ಎಸ್‌ಎಫ್‌ಐಒನಂತಹ ಸಂಸ್ಥೆಗಳು ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರ ಕಂಪನಿ (ವೀನಾ ನಿರ್ದೇಶಕರಾಗಿರುವ) ಮತ್ತು ಕೇರಳ ರಾಜ್ಯ ಕೈಗಾರಿಕಾ ನಿಗಮ ಹಾಗೂ ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ಸ್ ಲಿಮಿಟೆಡ್ ನಡುವೆ ಈಗಾಗಲೇ ಕಂಪನಿಗಳ ರಿಜಿಸ್ಟ್ರಾರ್​​ ಅವರು ಕಂಪನಿ ಕಾಯಿದೆ ಸೆಕ್ಷನ್ 210ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅರ್ಜಿದಾರರೇ ಹೇಳಿದ್ದಾರೆ. ಇಂತಹ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸೆಕ್ಷನ್ 212ರ (ಎಸ್‌ಎಫ್‌ಐಒ) ಅಡಿಯಲ್ಲಿ ತನಿಖೆಗೆ ಆದೇಶಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿರಲಿದೆ. ಜೊತೆಗೆ, ಈ ಸೆಕ್ಷನ್‌ ಅನ್ನು ಶಾಸನಬದ್ಧವಾಗಿಯೇ ಜಾರಿ ಮಾಡಲಾಗಿದೆ. ಆದರೆ, ಸೆಕ್ಷನ್ 210ರ ಅಡಿಯಲ್ಲಿ ತನಿಖೆ ನಡೆಸುತ್ತಿದ್ದು, ಅಂತಿಮ ವರದಿ ಸಲ್ಲಿಸುವುದಕ್ಕೂ ಮುನ್ನ 212ರ ಅಡಿಯಲ್ಲಿ ತನಿಖೆಗೆ ಆದೇಶಿಸಬಹುದಾಗಿದೆ ಎಂದು ಪೀಠ ಹೇಳಿದೆ.

ಅಲ್ಲದೆ, ಕಂಪನಿ ಕಾಯಿದೆ ಸೆಕ್ಷನ್ 210ರ ಅಡಿಯಲ್ಲಿ ತನಿಖೆ ನಡೆಯುತ್ತಿದ್ದು, ಅದೇ ಕಾಯಿದೆಯ ಸೆಕ್ಷನ್ 212ರಂತೆ ವಹಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ಕಂಪನಿಯ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚುವುದಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ. ಅಂತಹ ಅಧಿಕಾರವನ್ನು ನ್ಯಾಯಾಲಯ ಮೊಟಕುಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ತನಿಖೆ ವೇಳೆ ಕಂಡುಬಂದ ಅಂಶಗಳ ಅಡಿಯಲ್ಲಿನ ಕಾನೂನು ಪ್ರಕಾರವಾಗಿಯೇ ಸಾರ್ವಜನಿಕ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರ ಎಸ್‌ಎಫ್‌ಐಒ ತನಿಖೆಗೆ ಆದೇಶಿಸಿದೆ. ಆದರೆ, ಕಾಯಿದೆಯ ಉಲ್ಲಂಘಿಸಿ ತನಿಖೆಗೆ ಆದೇಶಿಸಿದಾಗ ಮಾತ್ರ ನ್ಯಾಯಾಲಯ ತನ್ನ ಅಧಿಕಾರವನ್ನು ಚಲಾಯಿಸಬಹುದಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಕ್ರಮ ಸರಿಯಾಗಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ವೀಣಾ ನಿರ್ದೇಶಕರಾಗಿರುವ ಎಕ್ಸಾಲಾಜಿಕ್ ಸಲೂಷನ್ಸ್ ಕಂಪೆನಿಯು ಕೊಚ್ಚಿನ್ ಮಿನರಲ್ಸ್ ರುಟೈಲ್ ಲಿಮಿಟೆಡ್​​ (ಸಿಎಂಆರ್‌ಎಲ್) ಮತ್ತು ಅರ್ಜಿದಾರರ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿ 2021ರಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಕಂಪೆನಿ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಬೆಂಗಳೂರಿನ ಕಂಪೆನಿಗಳ ರಿಜಿಸ್ಟ್ರಾರ್ ಅವರಿಂದ ಅರ್ಜಿದಾರರಿಗೆ ಪತ್ರ ಬರೆಯಲಾಗಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿದ್ದ ಅರ್ಜಿದಾರರು ಕಂಪೆನಿ ರಿಜಿಸ್ಟ್ರಾರ್ ಕೇಳಿದ್ದ ಎಲ್ಲ ಮಾಹಿತಿಗಳನ್ನು ದಾಖಲೆಗಳೊಂದಿಗೆ ಸಲ್ಲಿಸಿದ್ದರು. ಆದರೆ, ಕಂಪೆನಿಗಳ ರಿಜಿಸ್ಟ್ರಾರ್ ಅವರು 2021ರ ಅ. 1ರಂದು ಮತ್ತೊಂದು ಪತ್ರ ಬರೆದು, ಈವರೆಗೂ ಸಲ್ಲಿಸಿರುವ ದಾಖಲೆಗಳು ಸರಿ ಇಲ್ಲ. ಹಾಗಾಗಿ, ಮುಂದಿನ ಏಳು ದಿನಗಳಲ್ಲಿ ಎಲ್ಲ ಸಮರ್ಪಕ ದಾಖಲೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದರು.

ಇದಕ್ಕೆ ಉತ್ತರಿಸಿದ್ದ ಅರ್ಜಿದಾರರು, ತಮ್ಮ ವಾದವನ್ನು ಆಲಿಸಬೇಕು ಎಂದು ಮನವಿ ಮಾಡಿದ್ದರು. ಅದರಂತೆ 2022ರ ಜೂನ್​ 24ರಂದು ಅರ್ಜಿದಾರರು ತಮ್ಮ ಪ್ರತಿನಿಧಿಗಳೊಂದಿಗೆ ಖುದ್ದು ಹಾಜರಾಗಿ ಅಗತ್ಯವಿರುವ ದಾಖಲೆಗಳೊಂದಿಗೆ ಎಲ್ಲ ವಿವರಣೆ ಮತ್ತು ಸ್ಪಷ್ಟೀಕರಣ ನೀಡಿದ್ದರು. ಆದರೆ, ಅರ್ಜಿದಾರ ಕಂಪೆನಿಯ ನಿರ್ದೇಶಕರ ತಂದೆಯ ಅಧೀನದಲ್ಲಿರುವ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು (ಕೆಎಸ್‌ಐಡಿಸಿ) ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್‌ಯಲ್ಲಿ ಶೇ.13.4ರಷ್ಟು ಷೇರುಗಳನ್ನು ಹೊಂದಿದೆ ಎಂದು ಆರೋಪಿಸಿ ಕಂಪನಿಗಳ ರಿಜಿಸ್ಟ್ರಾರ್ ಅವರು 2023ರ ಆಗಸ್ಟ್​ ತಿಂಗಳಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಿದ್ದರು. ನೋಟಿಸ್‌ಗೆ ಸಂಬಂಧಿಸಿದಂತೆ ಅರ್ಜಿದಾರ ಕಂಪೆನಿ ವಿವರಣೆ ನೀಡಿತ್ತು.

ಆದರೆ, ಕೈಗಾರಿಕಾ ಅಭಿವೃದ್ಧಿ ನಿಗಮವು (ಕೆಎಸ್‌ಐಡಿಸಿ) ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್ ವ್ಯವಹಾರಗಳ ಕುರಿತಂತೆ ತನಿಖೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಕೆ.ಪ್ರಭು ಎಂಬವರು ನೋಟಿಸ್ ನೀಡಿದ್ದರು. ಈ ಕುರಿತಂತೆ ಅರ್ಜಿದಾರರು ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು.

ಈ ನಡುವೆ ಎಕ್ಸಾಲಾಜಿಕ್ ಸಲೂಷನ್ಸ್ ವಿರುದ್ಧ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಕಂಪೆನಿಗಳ ಕಾಯ್ದೆ ಸೆಕ್ಷನ್​ 212 ಅಡಿ ತನಿಖೆ ನಡೆಸುವಂತೆ ಜನವರಿ 31ರಂದು ಆದೇಶಿಸಿತ್ತು. ಕೇಂದ್ರದ ಈ ಆದೇಶ ದೋಷಪೂರಿತವಾಗಿದೆ. ಸೂಕ್ತ ಕಾರಣವಿಲ್ಲದೆ ತನಿಖೆಗೆ ಆದೇಶಿಸಿದ್ದು, ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ದೂರಿದ್ದರು. ಅಲ್ಲದೆ, ಕೇಂದ್ರ ಸರ್ಕಾರ ತನಿಖೆಗೆ ಹೊರಡಿಸಿರುವ ಆದೇಶ ಮತ್ತು ಅದರ ಮುಂದಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಎಂದು ಹೈಕೋರ್ಟ್ ಮೇಟ್ಟಿಲೇರಿದರು.

ಇದನ್ನೂ ಓದಿ: ಕೇರಳ ಸಿಎಂ ಮಗಳು ನಿರ್ದೇಶಕರಾಗಿರುವ ಕಂಪೆನಿ ವಿರುದ್ಧ ಎಸ್‌ಎಫ್‌ಐಒ ತನಿಖೆ: ಕಠಿಣ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್​ ಸೂಚನೆ

Last Updated :Feb 17, 2024, 6:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.