ETV Bharat / state

ಬಜೆಟ್​​​​​​​​ನಲ್ಲಿ ಈ ಬಾರಿಯಾದರೂ ಸಿಗಲಿದೆಯೇ ಅಡಕೆ ಬೆಳೆಗೆ ಸ್ಥಿರ ಬೆಲೆ, ನಿಖರ ಔಷಧ?

author img

By ETV Bharat Karnataka Team

Published : Feb 13, 2024, 7:49 AM IST

Karnataka Budget  fixed price for areca nut  precision medicine  ಅಡಕೆ ಬೆಳೆಗೆ ಸ್ಥಿರ ಬೆಲೆ  ಸಿದ್ದು ಬಜೆಟ್​ ಲೆಕ್ಕ
ಅಡಕೆ ಬೆಳೆಗಾರರ ನಿರೀಕ್ಷೆಗಳು

ಈ ಬಾರಿಯ ಸಿದ್ದು ಬಜೆಟ್​ ಲೆಕ್ಕದಲ್ಲಿ ಅಡಕೆ ಬೆಳೆಗೆ ಸ್ಥಿರ ಬೆಲೆ ಹಾಗೂ ನಿಖರ ಔಷಧ ಸಿಗುವ ಭರವಸೆಯಲ್ಲಿ ನಮ್ಮ ರೈತರಿದ್ದಾರೆ.

ಅಡಕೆ ಬೆಳೆಗಾರರ ನಿರೀಕ್ಷೆಗಳು

ಶಿವಮೊಗ್ಗ: ಅಡಕೆಗೆ ಭಾರತೀಯ ಸಂಸ್ಕೃತಿಯಲ್ಲಿ ಒಂದು ಸ್ಥಾನವಿದೆ. ಭಾರತದಲ್ಲಿ ಶುಭಕರವಾದ ಕೆಲಸ ಮಾಡುವಾಗ ಅಡಕೆಯನ್ನು ಮುಂದಿಟ್ಟು ಕೆಲಸ ಮಾಡುತ್ತಾರೆ. ಅಡಕೆ ಬೆಳೆ ಈ ಹಿಂದೆ ಸಾಂಪ್ರದಾಯಕ ಬೆಳೆಯಾಗಿತ್ತು. ಆದರೆ, ಈಗ ಅದು ವಾಣಿಜ್ಯ ಬೆಳೆಯಾಗಿದೆ. ಅಡಕೆಯನ್ನು ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಆದರೆ, ಈಗ ಮಲೆನಾಡಿನಿಂದ ಅರೆ ಮಲೆನಾಡು ಹಾಗೂ ಬಯಲು ಸೀಮೆಯಲ್ಲೂ ಅಡಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಅಡಕೆ ಬೆಳೆಯನ್ನು ಸಂಪ್ರದಾಯಬದ್ದವಾಗಿ ಬೆಳೆದು ಸಂಸ್ಮರಣೆ ಮಾಡಿ ಮಾರಾಟ ಮಾಡಲಾಗುತ್ತದೆ. ಅಡಕೆಯಲ್ಲಿ ಔಷಧೀಯ ಗುಣವಿದೆ. ಇಂತಹ ಅಡಕೆಯು ಇಂದು ಅನೇಕ ರೋಗಗಳಿಗೆ ತುತ್ತಾಗುತ್ತಿದೆ. ಇದರಿಂದ ಅಡಕೆ ಬೆಳೆಗಾರ ಕಷ್ಟ ಅನುಭವಿಸುವಂತಾಗಿದೆ.

ಮೊದಲು ಅಡಕೆ ಬೆಳೆಯಲ್ಲಿ ಉತ್ತಮ ಅಡಕೆಯಿಂದ ಸಂಗ್ರಹಿಸಿ ಸಸಿ ಮಾಡಲಾಗುತ್ತದೆ. ಸಸಿಯನ್ನು ನೆಟ್ಟು ಸುಮಾರು 8-10 ವರ್ಷಗಳ ಬೆಳೆಸಬೇಕಾಗುತ್ತದೆ. ಅಡಕೆಯು ಸುಮಾರು 6 ವರ್ಷಗಳ ನಂತರ ಹೊಂಬಾಳೆ ಬಿಡಲು ಪ್ರಾರಂಭಿಸುತ್ತದೆ. ಪೂರ್ಣ ಪ್ರಮಾಣದ ಅಡಕೆ ಬೆಳೆ ಸಿಗಬೇಕಾದರೆ ಕನಿಷ್ಠ 10 ವರ್ಷ ಬೇಕಾಗುತ್ತದೆ. ಮಧ್ಯ ಕರ್ನಾಟಕದಲ್ಲಿ ಅಡಕೆ ಬೆಳೆಗಳ ಮೇಲೆ ಸಾಕಷ್ಟು ರೈತರು ಅವಲಂಬಿತರಾಗಿದ್ದಾರೆ. ಅಡಕೆಗೆ ಇಂದಿನ ದರ ಕ್ವಿಂಟಾಲ್ ಗೆ 48 ಸಾವಿರ ಇದೆ. ಅಡಕೆಯಲ್ಲಿ ರಾಶಿ, ಗೊರಬಲು, ಚಾಲಿ , ಚಿಪ್ಪು, ಪುಡಿ, ಕೆಂಪು ಹೀಗೆ ಹಲವು ವಿವಿಧ ತಳಿಗಳಿವೆ. ಅಡಕೆಗೆ ರೋಗಭಾದೆಗಳು ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿದೆ. ಇದರಲ್ಲಿ ತಲೆಮುಂಡು ರೋಗ, ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗ ಸೇರಿದಂತೆ ಹಲವು ರೋಗಳು ಅಡಕೆ ಬೆಳಗಾರರನ್ನು ಕಾಡುತ್ತಿವೆ.‌

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚು ಬೆಳೆಗಾರರು: ಅಡಕೆಯನ್ನು ನಮ್ಮ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುತ್ತಾರೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ ಭಾಗದಲ್ಲಿ ಬೆಳೆಯುತ್ತಾರೆ. ಆದರೆ, ಇತ್ತಿಚೀನ ವರ್ಷಗಳಲ್ಲಿ ಚಿತ್ರದುರ್ಗ, ತಮಕೂರು ಭಾಗದಲ್ಲೂ ಸಹ ಅಡಕೆ ಬೆಳೆ ಬೆಳೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ- 92.181 ಹೆಕ್ಟರ್, ಚಿಕ್ಕಮಗಳೂರು ಜಿಲ್ಲೆ-72.998.7 ಹೆಕ್ಟರ್ ಮತ್ತು ದಾವಣಗೆರೆ ಜಿಲ್ಲೆ- 84 ಸಾವಿರ ಹೆಕ್ಟೇರ್​ ಅಡಕೆ ಬೆಳೆ ಬೆಳೆಯಲಾಗಿದೆ.

ಈ ಕುರಿತು ಮಾತನಾಡಿದ ಅಡಕೆ ಬೆಳೆಗಾರರಾದ ರಮೇಶ್ ಹೆಗ್ಡೆ, ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿಯೇ ಅಡಕೆ ಬೆಳೆಯುವ ಜಿಲ್ಲೆಯಾಗಿದೆ.‌ ಅದೇ ರೀತಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಅಡಕೆ ಬೆಳೆಯುವ ರಾಜ್ಯವಾಗಿದೆ. ಅಡಕೆ ಬೆಳೆಗಾರರಿಗೆ ಎಲೆಚುಕ್ಕಿ ರೋಗ ಬಹುವಾಗಿ ಕಾಡುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಎಲೆಚುಕ್ಕೆ ರೋಗ ಬಹುವಾಗಿ ಹರಡುತ್ತಿದೆ. ಎಲೆಚುಕ್ಕೆ ರೋಗಕ್ಕೆ ಸೂಕ್ತ ನಿಯಂತ್ರಣದ ವ್ಯವಸ್ಥೆ ಆಗಬೇಕಿದೆ. ಅಡಕೆ ತಳಿ, ಅದರ ರೋಗ ಹಾಗೂ ನಿಯಂತ್ರಣದ ಕುರಿತು ಸಂಶೋಧನೆಯಾಗಬೇಕಿದೆ. ಇದಕ್ಕಾಗಿ ಅನುದಾನ ಬಿಡುಗಡೆಯಾಗಬೇಕಿದೆ ಎಂದರು. ಈಗ ಇರುವ ಔಷಧಗಳಿಂದ ಇದುವರೆಗೂ ಶಾಶ್ವತವಾಗಿ ಎಲೆಚುಕ್ಕೆ ರೋಗ ನಿಯಂತ್ರಣ ಆಗಿಲ್ಲ‌. ಆದರೂ ತಾತ್ಕಾಲಿಕವಾಗಿ ಔಷಧ ನಿಂಪಡಣೆ ಮಾಡಲು ತೋಟಗಾರಿಕ ಇಲಾಖೆ ಹೇಳಿದೆ. ಅದಕ್ಕೆ ಈ ಔಷಧಗಳನ್ನು ಉಚಿತವಾಗಿ ಹಾಗೂ ಸಬ್ಸಡಿ ದರದಲ್ಲಿ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಅಡಕೆ ಬೆಳೆಗಾರದಾದ ಹಿಟ್ಟೂರು ರಾಜು ಮಾತನಾಡಿ, ಬಜೆಟ್​​ನಲ್ಲಿ ಅಡಕೆಗೆ ಹೆಚ್ಚಿನ ಒತ್ತು‌ ನೀಡಬೇಕೆಂದು ನಾನು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೆನೆ. ಮಲೆನಾಡು ಹಾಗೂ ಅರೆ ಮಲೆನಾಡು ಭಾಗದ ಅಡಕೆ ತೋಟಗಳಿಗ ಎಲೆಚುಕ್ಕೆ ರೋಗ ಲಗ್ಗೆ ಇಟ್ಟು ಒಂದೂವರೆ ವರ್ಷ ಕಳದಿದೆ. ಈ ರೋಗಕ್ಕೆ ತುತ್ತಾಗಿ ಅಡಕೆ ತೋಟಗಳು ಸಂಪೂರ್ಣ ನಾಶವಾಗಿವೆ. ಎಲೆ ಚುಕ್ಕೆ ರೋಗ, ಹಳದಿ ರೋಗ ಮತ್ತು ಎಡೆ ಮುಂಡಿಗೆ ರೋಗದಿಂದ ಅಡಕೆ‌ ಫಸಲನ್ನು ಕಾಪಾಡುವುದೇ ಕಷ್ಟವಾಗಿದೆ. ಅಡಕೆ ಬೆಳೆಯ ಫಸಲನ್ನು ತೆಗೆಯಲು ಕನಿಷ್ಠ 10 ವರ್ಷ ಬೇಕು.‌ ಇಲ್ಲಿ ಒಂದು ವರ್ಷ ಗ್ಯಾಪ್ ಆದರೆ ಫಸಲು ಮತ್ತೆ ಮುಂದಕ್ಕೆ ಹೋಗ್ತಾ ಇದೆ. ಈಗ ಸಿಗುವ ಕರೆಂಟ್​ನಲ್ಲಿ ಬೆಳೆ ಬೆಳೆದರೂ ಸಹ ಮಧ್ಯಂತರದಲ್ಲಿ ರೋಗ ಬಂದ್ರೆ ಬಹಳ ಸಮಸ್ಯೆ ಆಗ್ತಾ ಇದೆ. ಮಲೆನಾಡಿನ ಅಡಕೆ ಬೆಳೆಗಾರರರಿಗೆ ವಿಶೇಷ ಅನುದಾನ ನೀಡಬೇಕು. ಅಲ್ಲದೇ ಈ ರೋಗ ಭಾದೆ ಹೇಗೆ ಬರುತ್ತದೆ ಎಂಬುದನ್ನು‌ ಮೊದಲು ಕಂಡು ಹಿಡಿಯಬೇಕು. ಕೃಷಿ ವಿಶ್ವ ವಿದ್ಯಾನಿಲಯಗಳು ಹಾಗೂ ಸಂಶೋಧನ ಕೇಂದ್ರಗಳು ಬ್ರಿಟಿಷರು ಬಿಟ್ಟು ಹೋಗಿದ್ದ ಗಂಧಕ ಹಾಗೂ ಮೈಲುತುತ್ತುವನ್ನೆ ಬಳಸಲು ಹೇಳುತ್ತಿದ್ದಾರೆ.‌ ಇದನ್ನು ಬಿಟ್ಟು ಬೇರೆ ಏನೂ ಮಾಡಲು ಹೇಳುತ್ತಿಲ್ಲ.‌ ಕೃಷಿ ವಿಶ್ವ ವಿದ್ಯಾನಿಲಯ, ಸಂಶೋಧನ ಕೇಂದ್ರದ ಅಧಿಕಾರಿಗಳು ರೈತರ ತೋಟಗಳಿಗೆ ಬಂದು ಸಮಸ್ಯೆಯ ಬಗ್ಗೆ ಗಮನಹರಿಸಿ, ಪರಿಹಾರ ಒದಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಅಡಕೆ ತಲೆರೋಗಕ್ಕೆ ಇನ್ನೂ ಸಿಕ್ಕಿಲ್ಲ ಪರಿಹಾರ: ರೈತ ಮಂಜಪ್ಪ‌ ಮಾತನಾಡಿ, ರೈತನಿಗೆ ಪ್ರಮುಖ ಬೆಳೆಯಾಗಿ ಕಾಣುತ್ತಿರುವುದು ಅಡಕೆ ಒಂದೇ. ಅಡಕೆ ಬೆಳೆಗಾರ ಸಹ ನೆಲಕಚ್ಚುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಅಡಕೆ ಬೆಳೆಯ ಕುರಿತು ಸಂಶೋಧನೆ ನಡೆಸಲು ಸಂಶೋಧನ ಕೇಂದ್ರವಿದೆ. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಿದೆ.

ಆದರೆ, ಇದುವರೆಗೂ ಸಹ ಅಡಕೆ ತಲೆ ಹೋಗುವ ರೋಗಕ್ಕೆ ಔಷಧ ಕಂಡು ಹಿಡಿಯಲು ಆಗಿಲ್ಲ. ಮುಂಚೆ ಅಡಕೆ ಬೆಳೆಗೆ ರೋಗಗಳೇ ಇರಲಿಲ್ಲ. ಈಗ ಸಾಕಷ್ಟು ರೋಗ ಬಂದಿವೆ. ಈಗಿನ ರೋಗ ಪರಿಹಾರಕ್ಕೆ ಉತ್ತಮ ವಿಜ್ಞಾನಿಗಳನ್ನು ನೇಮಿಸಿ, ಔಷಧ ಕಂಡು ಹಿಡಿಯಬೇಕು. ಅಡಕೆ ದರ ಸ್ಥಿರವಾಗಿಲ್ಲ. ಅಡಕೆ ದರ ಏರಿಳಿತವಾಗುತ್ತಿರುತ್ತದೆ. ಮಾರುಕಟ್ಟೆಯಲ್ಲಿ ಮೊನ್ನೆ 48 ಸಾವಿರ ರೂ. ಇದೆ ಎನ್ನುತ್ತಿದ್ದವರು, ಈಗ 46 ಸಾವಿರ ರೂ. ಎನ್ನುತ್ತಿದ್ದಾರೆ. ಹೀಗೆ ದರ ಯಾಕೆ ಇಳಿತವಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ದರ ಕುಸಿತಕ್ಕೆ ಏನೂ ಕಾರಣ ಅಂತ ತಿಳಿಯುತ್ತಿಲ್ಲ. ನಮ್ಮ ದೇಶಕ್ಕೆ ವಿದೇಶದಿಂದ ಅಡಕೆ ಬರುತ್ತಿದೆಯೇ ಎಂದು ತಿಳಿಯತ್ತಿಲ್ಲ. ವ್ಯಾಪಾರಿಗಳ ಕುತಂತ್ರಕ್ಕೆ ರೈತ ಸಾಲಗಾರನಾಗಿ ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ರಾಜ್ಯಸಭೆ, ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ ಆದ್ಯತೆ ನೀಡಿ: ಖರ್ಗೆಗೆ ಶಾಮನೂರು ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.