ETV Bharat / state

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಗೆ ಕಲ್ಯಾಣ ಕರ್ನಾಟಕದಲ್ಲಿ ಶೋಧ

author img

By ETV Bharat Karnataka Team

Published : Mar 10, 2024, 10:22 PM IST

ಇತ್ತೀಚಿನ ಬೆಂಗಳೂರು ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿಯ ಪತ್ತೆಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎನ್‌ಐಎ ಅಧಿಕಾರಿಗಳು ಮತ್ತು ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Rameshwar Cafe blast case
ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಮತ್ತು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶಂಕಿತ ಆರೋಪಿ ಪತ್ತೆಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೋಧ ಕೈಗೊಂಡಿದ್ದಾರೆ.

ಆರೋಪಿಯು ಕೆಕೆಆರ್‌ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ) ಬಸ್‌ನಲ್ಲಿ ಪ್ರಯಾಣಿಸಿರುವ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಎನ್‌ಐಎ ಬಸ್‌ ಚಾಲಕ ಮತ್ತು ನಿರ್ವಾಹಕನನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದೆ. ಕಲಬುರಗಿಯಲ್ಲಿ ತನಿಖಾ ತಂಡ ಬೀಡುಬಿಟ್ಟಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಸ್ಫೋಟದ ಬಳಿಕ ಶಂಕಿತ ಬಿಎಂಟಿಸಿ ಬಸ್​ನಲ್ಲಿ ಸಂಚರಿಸಿರುವ ಮತ್ತು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

ಸಿಸಿ ಕ್ಯಾಮರಾ ದೃಶ್ಯಗಳು ವಶಕ್ಕೆ: ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆಯ ನಾಲ್ಕು ಶಾಖೆಗಳಿಗೆ ಆರೋಪಿ ಭೇಟಿ ನೀಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜಾಜಿನಗರ, ಇಂದಿರಾನಗರ, ಕುಂದಲಹಳ್ಳಿ ಹಾಗೂ ಜೆ.ಪಿ.ನಗರದ ಶಾಖೆಗಳಿಗೆ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸುಮಾರು 20 ದಿನಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಂಕಿತ ಕುಂದಲಹಳ್ಳಿ ಬ್ರಾಂಚ್ ​ಅನ್ನೇ ಟಾರ್ಗೆಟ್ ಮಾಡಲು ಕಾರಣವೇನು?, ಕಳೆದ 20 ದಿನದಲ್ಲಿ ಯಾವ, ಯಾವ ಬ್ರಾಂಚ್‌ಗೆ ಬಂದು ಹೋಗಿರಬಹುದು. ಎಲ್ಲೆಲ್ಲಿ ಬಂದಿರಬಹುದು ಎಂಬೆಲ್ಲ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕೆಫೆ ಸ್ಫೋಟ ಪ್ರಕರಣ: 9 ದಿನವಾದರೂ ಪತ್ತೆಯಾಗದ ಆರೋಪಿ, ಶಂಕಿತನ ಮತ್ತಷ್ಟು ಫೋಟೋ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.