ETV Bharat / state

ನೀರಾ ಕುರಿತು ಪರಿಷತ್​ನಲ್ಲಿ ಸ್ವಾರಸ್ಯಕರ ಚರ್ಚೆ: ಪರಸ್ಪರ ಕಾಲೆಳೆದುಕೊಂಡ ಡಿಕೆಶಿ, ಕೋಟ ಶ್ರೀನಿವಾಸ ಪೂಜಾರಿ

author img

By ETV Bharat Karnataka Team

Published : Feb 23, 2024, 1:31 PM IST

Karnataka Legislative Council  ವಿಧಾನ ಪರಿಷತ್​ ಕೋಟ ಶ್ರೀನಿವಾಸ ಪೂಜಾರಿ  ಡಿಸಿಎಂ ಡಿಕೆ ಶಿವಕುಮಾರ್  Kota Shirinivasa Pujari
ನೀರಾ ಕುರಿತು ಪರಿಷತ್​ನಲ್ಲಿ ಸ್ವಾರಸ್ಯಕರ ಚರ್ಚೆ: ಪರಸ್ಪರ ಕಾಲೆಳೆದುಕೊಂಡ ಡಿಕೆಶಿ, ಕೋಟ ಶ್ರೀನಿವಾಸ ಪೂಜಾರಿ

ವಿಧಾನ ಪರಿಷತ್​ನಲ್ಲಿ ಇಂದು (ಶುಕ್ರವಾರ) ನೀರಾ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಪರಸ್ಪರ ಕಾಲೆಳೆದುಕೊಂಡರು.

ಬೆಂಗಳೂರು: ಸಾರಾಯಿ, ಶೇಂದಿ, ನೀರಾ ಕುರಿತು ವಿಧಾನ ಪರಿಷತ್​ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ನೀರಾ ಕುಡಿದಿದ್ದೀರಾ ಎನ್ನುವ ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆಗೆ ನಿಮ್ಮಂತೆ ದಪ್ಪ ಇಲ್ಲ, ಅದನ್ನು ಕುಡಿದು ತಡೆದು ಕೊಳ್ಳುವ ಶಕ್ತಿ ಇಲ್ಲ ಎಂದು ವಿಧಾನ ಪರಿಷತ್​ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟಕ್ಕರ್ ಕೊಟ್ಟರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ''ಸಾರಾಯಿ ನಿಷೇಧ ಯಡಿಯೂರಪ್ಪ ಅವರ ಕಾಲದಲ್ಲಿ ಆಯ್ತು. ಆದರೆ, ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ. ಸಾವಿರಾರು ಮಂದಿ ಬೀದಿಗೆ ಬಂದರು, ಆತ್ಮಹತ್ಯೆಗೆ ಪ್ರಯತ್ನಿಸಿದರು. ಆದರೆ, ಈ ಸಮುದಾಯ ಪ್ರತಿಭಟನೆ ನಡೆಸಲಿಲ್ಲ. ಬೇರೆ ಸಮುದಾಯ ಆದರೆ ರಕ್ತಪಾತ ಆಗುತ್ತಿತ್ತು. ಆದರೆ, ಸಾರಾಯಿ ಮಾರಾಟ ಮಾಡುವ ಸಮುದಾಯ ಪ್ರತಿಭಟನೆ ಮಾಡಲಿಲ್ಲ. ಸಾರಾಯಿ ನಿಷೇಧದಿಂದ ನಿರ್ಗತಿಕರಾದವರ ಬಗ್ಗೆ ಸರ್ಕಾರ ಕಾರ್ಯಕ್ರಮ ಏನಾದ್ರು ಇದೆಯಾ'' ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ''ಸಾರಾಯಿ ನಿಷೇಧ ಹಿನ್ನೆಲೆ ಹರಿಪ್ರಸಾದ್ ಕಾಳಜಿ ವ್ಯಕ್ತಪಡಿಸಿದ್ದಾರೆ. 16-17 ವರ್ಷದ ಹಿಂದಿನ ವಿಚಾರ ಇದು. ಸುವರ್ಣ ಕಾಯಕ ಯೋಜನೆ ಜಾರಿ ಮಾಡಿದರೂ, 47,639 ಜನ ನಿರುದ್ಯೋಗಿಗಳಾದರು. ಕೋರ್ಟ್ ಸಹ ಎರಡು ತಿಂಗಳಲ್ಲಿ ವ್ಯವಸ್ಥೆ ಮಾಡಿ ಅಂದಿತ್ತು. ಆದರೆ, ಆ ಸಮುದಾಯಕ್ಕೆ ಏನು ಮಾಡಲು ಆಗಿಲ್ಲ. ಈಗ ಆ ಬಗ್ಗೆ ಯಾರಾದರು ಬಂದರೆ, ಅವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ'' ಎಂದು ಭರವಸೆ ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿ.ಕೆ. ಹರಿಪ್ರಸಾದ್, ''ಆ ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ'' ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್ ಬಿ ತಿಮ್ಮಾಪುರ, ''ಸಾರಾಯಿ ಯೋಜನೆಯಲ್ಲಿ ಬೀದಿ ಪಾಲಾದ ಕುಟುಂಬದ ಮಕ್ಕಳಿಗೆ ಏನಾದರೂ ಅವಕಾಶ ಮಾಡಲು ಸರ್ಕಾರ ವರದಿ ತರಿಸಿ ಕ್ರಮ ಕೈಗೊಳ್ಳುತ್ತದೆ'' ಎಂದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ''ಹಿಂದೆ ಶೇಂದಿ ಮಾರಾಟ ರದ್ದು ಆಗಿತ್ತು. ವಿರೇಂದ್ರ ಪಾಟೀಲ್ ರದ್ದು ಪಡಿಸಿದ್ದರು. ಈಗ ನೀರಾ ತೆಗೆಯುವುದು ಹೆಚ್ಚಾಗುತ್ತಿದೆ. ಇದಕ್ಕೆ ಆದ್ಯತೆ ನೀಡುವ ಜೊತೆಗೆ, ಶೇಂದಿ ಮಾರಾಟ ರದ್ದತಿಯಿಂದ ನಿರ್ಗತಿಕರಾದವರಿಗೆ ಇದರಲ್ಲಿ ಅವಕಾಶ ಕಲ್ಪಿಸಬೇಕು'' ಎಂದು ಮನವಿ ಮಾಡಿದರು.

ಡಿಕೆಶಿಗೆ ಕೋಟ ಶ್ರೀನಿವಾಸ ಪೂಜಾರಿ ಟಾಂಗ್: ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ''ನೀವು ನೀರಾ ಕುಡಿದಿದ್ದೀರಾ'' ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಕಾಲೆಳೆದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ''ನಾನು ಕುಡಿದಿಲ್ಲ, ನೀರಾ ಕುಡಿದು ಅದರ ಅಮಲು ತಡೆದುಕೊಳ್ಳುವ ಶಕ್ತಿ ನನಗಿಲ್ಲ. ನಿಮ್ಮ ಹಾಗೆ ದಪ್ಪ ಇದ್ದಿದ್ದರೆ, ನೀರಾ ಕುಡಿದು ಬೀಳದೇ ಗಟ್ಟಿಯಾಗಿ ನಿಲ್ಲಬಹುದಿತ್ತು'' ಎಂದು ಟಾಂಗ್ ನೀಡಿದರು.

ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್, ''ನಮ್ಮ ಊರಿನಲ್ಲಿ ಒಮ್ಮೆ ನನ್ನನ್ನ ಕರೆದುಕೊಂಡು ಹೋಗಿ ನೀರಾ ಕುಡಿಸಿದ್ದರು. ನೀರಾ ಮಾರಾಟವನ್ನು ವ್ಯವಸ್ಥಿತವಾಗಿ ಮಾಡುವ, ಕಾರ್ಪೋರೇಟ್ ಸ್ಪರ್ಶ ನೀಡುವ ಬಗ್ಗೆ ಅವರ ಅಭಿಪ್ರಾಯ ತಿಳಿಸಿದ್ದಾರೆ. ಅದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಸುವ ಸಾಧ್ಯತೆ ಇರುತ್ತದೆ. ಕೋಟ ಶ್ರೀನಿವಾಸ ಪೂಜಾರಿಯವರು ಅವರ ಉದ್ಯೋಗ, ಅವರ ಕಷ್ಟ ಹೇಳಿದ್ದಾರೆ. ಸರ್ಕಾರ ಆ ಬಗ್ಗೆ ಗಮನ ಹರಿಸಲಿದೆ'' ಎಂದರು.

ಬೇಸರ ವ್ಯಕ್ತಪಡಿಸಿದ ಬಿ.ಕೆ. ಹರಿಪ್ರಸಾದ್: ನಂತರ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಹೆಂಡ ತೆಗೆಯುವುದು ನಮ್ಮ ಉದ್ಯೋಗ ಅಲ್ಲ, ನಮ್ಮ ಮೂಲ ಉದ್ಯೋಗ ಕೃಷಿ, ಹೆಂಡ ತೆಗೆಯುವುದು ಉಪ ಕಸುಬು. ನಮ್ಮನ್ನ ಹೆಂಡ ತೆಗೆಯೊರು ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಅದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.

ಇದನ್ನೂ ಓದಿ: ಹಿಂದೂಗಳನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿಯಿಂದ ಕಪೋಲಕಲ್ಪಿತ ಆರೋಪ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.