ETV Bharat / state

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಆರೋಪಿಯ ಎಸ್‌ಡಿಎ ಹುದ್ದೆ ಮುಂದುವರೆಸುವ ಕೆಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್ - High Court

author img

By ETV Bharat Karnataka Team

Published : Apr 29, 2024, 4:07 PM IST

high-court
ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಎಸ್‌ಡಿಎ ಹುದ್ದೆ ಮುಂದುವರೆಸುವ ಕೆಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಯಾಗಿದ್ದ ಎಸ್‌ಡಿಎ ಮರು ನೇಮಕ ಕುರಿತಂತೆ ಕೆಎಟಿ ಆದೇಶವನ್ನು ಹೈಕೊರ್ಟ್ ಎತ್ತಿಹಿಡಿದಿದೆ.

ಬೆಂಗಳೂರು: 2012 ರಲ್ಲಿ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಯಾಗಿದ್ದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹೆಚ್.ಎಸ್. ಸುನೀಲ್‌ಕುಮಾರ್ ಅವರ ಹುದ್ದೆಗೆ ಮರು ನೇಮಕ ಮಾಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ಹೈಕೊರ್ಟ್ ಎತ್ತಿಹಿಡಿದಿದೆ.

ಆರೋಪಿಯಾಗಿದ್ದ ಸುನೀಲ್ ಕುಮಾರ್ ಅವರಿಗೆ ಎಸ್‌ಡಿಎ ಹುದ್ದೆಗೆ ಮರು ನೇಮಕಕ್ಕೆ ಕೆಎಟಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ (ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಖಜಾನೆ ನಿರ್ದೇಶನಾಲಯ) ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಸೂಕ್ತ ಸಾಕ್ಷ್ಯಾಧಾರಗಳಿಲ್ಲ: ಅಲ್ಲದೆ, ಪ್ರಕರಣದಲ್ಲಿ ಪ್ರತಿವಾದಿ ಹೆಚ್.ಎಸ್.ಸುನೀಲ್ ಕುಮಾರ್, ಸ್ಟ್ರಾಂಗ್ ರೂಮ್ ಬೀಗ ತನ್ನಲ್ಲಿಟ್ಟುಕೊಂಡಿದ್ದರು. 2012ರ ಮಾರ್ಚ್ 15ರಂದು ಪಿಯು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಪ್ರಕರಣದ ಸಹ ಆರೋಪಿ ಕೆ.ಪಿ.ವೀರಭದ್ರಪ್ಪ ಅವರನ್ನು ಸಾಕ್ಷ್ಯಗಳ ವಿಚಾರಣೆ ವೇಳೆ ಪರಿಗಣಿಸಿರಲಿಲ್ಲ. ಪ್ರಕರಣದ ಪ್ರಮುಖ ಆರೋಪಿಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿಲ್ಲ ಎಂಬ ಅಂಶವನ್ನು ನ್ಯಾಯಾಧಿಕರಣ ಗಂಭೀರವಾಗಿ ಪರಿಗಣಿಸಿದೆ. ಈ ಅಂಶವು ವಿಚಾರಣೆ ವೇಳೆ ನಡೆದಿರುವ ದೊಡ್ಡ ಲೋಪವಾಗಿದೆ. ಹೀಗಾಗಿ, ಪ್ರತಿವಾದಿ ಅವರು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆದ ಕಾರಣ, ಅನಧಿಕೃತವಾಗಿ ಸ್ಟ್ರಾಂಗ್ ರೂಮ್ ಬೀಗ ತೆಗೆದು ಪ್ರಶ್ನೆ ಪತ್ರಿಕೆ ಸೋರಿಕೆಗೆ ನೆರವಾಗಿದ್ದಾರೆ ಎಂದು ಹೇಳಲಾಗದು ಎಂದು ಪೀಠ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಬಂದ ಬಳಿಕ ಪ್ರತಿವಾದಿ ಆರೋಪಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದರೂ ಸೂಕ್ತ ರೀತಿಯಲ್ಲಿ ವಿಚಾರಣೆಗೊಳಪಡಿಸದೆ, ಪ್ರತಿವಾದಿಯನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಮೇಲ್ಮನವಿಯಲ್ಲಿ ತಿಳಿಸಿರುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಶಿಸ್ತು ಪ್ರಾಧಿಕಾರ ನೀಡಿದ ವರದಿಯಲ್ಲಿರುವಂತೆ ಸರಿದೂಗಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣ ಸಂಬಂಧ ತನಿಖೆಯ ಕಡತಗಳನ್ನು ಪರಿಶೀಲಿಸಿದರೆ, ಪ್ರತಿವಾದಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಅಲ್ಲದೆ, ಶಿಸ್ತು ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರ ಆದೇಶವನ್ನು ರದ್ದುಗೊಳಿಸಿದ ನಂತರ ಪ್ರಕರಣದ ಆರೋಪಿಯಾಗಿರುವವರನ್ನು ಹುದ್ದೆಗೆ ಮುಂದಿನ ಮೂರು ತಿಂಗಳಲ್ಲಿ ಯಾವುದೇ ರೀತಿಯ ತಡೆಹಿಡಿದಿರುವ ವೇತನ ಪಾವತಿ ಮಾಡದೆ, ಮರು ನೇಮಕ ಮಾಡಿಕೊಳ್ಳುವಂತೆ ಕೆಎಟಿ ಸೂಚನೆ ನೀಡಿದೆ.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಟಿ ಎರಡು ಕಡೆ ವಾದ ಮತ್ತು ಕಡತಗಳನ್ನು ಪರಿಶೀಲಿಸಿದ ಬಳಿಕ, ಪ್ರತಿವಾದಿ ತಪ್ಪಿತಸ್ಥ ಎಂಬುದಾಗಿ ಕಂಡುಹಿಡಿಯುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ತೀಮಾನಕ್ಕೆ ಬಂದಿದೆ. ಹೀಗಾಗಿ, ಕೆಎಟಿ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆದ್ದರಿಂದ ಮೇಲ್ಮನವಿ ಅರ್ಜಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ. ಹೀಗಾಗಿ ವಜಾಗೊಳಿಸಿಸುತ್ತಿದ್ದು, ಪ್ರಕರಣದ ಪ್ರತಿವಾದಿಗೆ ಕೆಎಟಿ ಆದೇಶದಂತೆ ಮುಂದಿನ ಎರಡು ತಿಂಗಳಲ್ಲಿ ಅದೇ ಹುದ್ದೆಗೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಆರೋಪಿ 2012ರಲ್ಲಿ ಖಜಾನೆ ಇಲಾಖೆ ಕಡೂರಿನ ಉಪ ಖಜಾನೆಯಲ್ಲಿ ಎಸ್‌ಡಿಎ ಆಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯ ವಿರುದ್ಧ ದೂರು ದಾಖಲಾಗಿ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಶಿಸ್ತು ಪ್ರಾಧಿಕಾರ ಮತ್ತು ಸರ್ಕಾರ ನೇಮಿಸಿದ್ದ ನಿವೃತ್ತ ಜಿಲ್ಲಾನ್ಯಾಯಾಧೀಶರ ನೇತೃತ್ವದ ಸಮಿತಿ ಆರೋಪ ಕುರಿತು ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು.

ವರದಿಯ ಆಧಾರದಲ್ಲಿ ಆರೋಪಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆದುಕೊಳ್ಳಲಾಗಿತ್ತು. ಆದಾಗ್ಯೂ 2015ರ ಅಕ್ಟೋಬರ್ 15ರಂದು ಆರೋಪಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರತಿವಾದಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಸರ್ಕಾರ ತಿರಸ್ಕರಿಸಿತ್ತು.

ಈ ಕ್ರಮ ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಅರ್ಜಿದಾರರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದ ಕಾರಣ ಅವರನ್ನು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಈ ಆದೇಶ ಪ್ರಶ್ನಿಸಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಖಜಾನೆ ನಿರ್ದೇಶನಾಲಯದ ನಿರ್ದೇಶಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ರಸ್ತೆ ಅಪಘಾತದಿಂದ ಯುವಕನ ವೈವಾಹಿಕ ಜೀವನಕ್ಕೂ ಕುತ್ತು: 38 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.