ETV Bharat / state

ಕುಡಿದ ಮತ್ತಿನಲ್ಲಿ ತಾಯಿಯ ಕೊಲೆ: ಆರು ತಿಂಗಳ ಸಮುದಾಯ ಸೇವೆ ಸಲ್ಲಿಸುವಂತೆ ಆರೋಪಿಗೆ ಹೈಕೋರ್ಟ್ ಆದೇಶ - Mother Murder case

author img

By ETV Bharat Karnataka Team

Published : May 3, 2024, 11:42 AM IST

ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ (Etv Bharat)

ತಾಯಿ ಕೊಂದ ಆರೋಪಿಗೆ ಆರು ತಿಂಗಳ ಸಮುದಾಯ ಸೇವೆ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರು: ಕೆಲಸಕ್ಕೆ ಹೋಗುವಂತೆ ಒತ್ತಾಯ ಮಾಡಿದ 60 ವರ್ಷದ ತಾಯಿಯನ್ನು ಕುಡಿದ ಮತ್ತಿನಲ್ಲಿ ಕಾಲಿನಿಂದ ಒದ್ದು ದೊಣ್ಣೆಯಿಂದ ಹೊಡೆಯುವ ಮೂಲಕ ಕೊಲೆಗೆ ಕಾರಣವಾಗಿದ್ದ ಆರೋಪಿಗೆ ಆರು ತಿಂಗಳ ಕಾಲ ಸ್ಥಳೀಯ ಶಾಲೆಯೊಂದರಲ್ಲಿ ಸಮುದಾಯ ಸೇವೆ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಮಡಿಕೇರಿ ತಾಲೂಕಿನ ಸಂಪಾಜೆಯ ಆರೋಪಿ ಅನಿಲ್ ಎಂಬುವರನ್ನು ಅಗತ್ಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲ್ಲೆಯಲ್ಲಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದ್ಗಲ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಹತ್ತು ಸಾವಿರ ದಂಡ ವಿಧಿಸಿದೆ.

ಆರೋಪಿ ಕುಡಿದ ಅಮಲಿನಲ್ಲಿ ಕೃತ್ಯವೆಸಗಿದ್ದಾನೆ. ಆದರೆ, ತಾಯಿಯ ಮರಣಪೂರ್ವ ಹೇಳಿಕೆ ಹೊರತುಪಡಿಸಿ ಘಟನೆಗೆ ಯಾವುದೇ ನೇರ ಸಾಕ್ಷಿಗಳು ಇಲ್ಲ. ಅಲ್ಲದೇ, ಈಗಾಗಲೇ ಎರಡು ವರ್ಷ ಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ ಸಮುದಾಯ ಸೇವೆ ಸಲ್ಲಿಸುವಂತೆ ಆದೇಶಿಸಲಾಗುತ್ತಿದೆ ಎಂದು ಕೋರ್ಟ್ ತಿಳಿಸಿದೆ.

ಅಲ್ಲದೇ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಸಂಪಾಜೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆ, ತೋಟಗಾರಿಕೆ ಮುಂತಾದ ಸಮಾಜ ಸೇವೆಗಳನ್ನು ಮಾಡುವಂತೆ ಕೋರ್ಟ್ ನಿರ್ದೇಶನ ನೀಡಿದೆ. 2017ರ ಮಾರ್ಚ್ ನಲ್ಲಿ ಕೊಡಗಿನ ವಿಚಾರಣಾ ನ್ಯಾಯಾಲಯ ಆರೋಪಿ ಅನಿಲ್​ನನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ, ಸರ್ಕಾರ ಹೈಕೋರ್ಟ್​ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ: ಭ್ರೂಣ ಹತ್ಯೆ ಆರೋಪ: ವೈದ್ಯರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ - Fetus Killing

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ತನಿಖಾಧಿಕಾರಿ ಪ್ರಕಾರ ಆರೋಪಿ ಅನಿಲ್ ಕುಡಿತದ ಚಟಕ್ಕೆ ಬಿದ್ದಿದ್ದರು. 2015ರ ಏಪ್ರಿಲ್ 4 ರಂದು ಘಟನೆ ನಡೆದ ದಿನ ಕುಡಿದು ಮನೆಗೆ ಬಂದಿದ್ದರು. ಇದಕ್ಕೆ ಆಕ್ಷೇಪಿಸಿದ ತಾಯಿ ಗಂಗಮ್ಮ ಕುಡಿದು ಮನೆಗೆ ಬರಬೇಡ. ಯಾವುದಾದರೂ ಕೆಲಸಕ್ಕೆ ಹೋಗು ಎಂದು ತಾಕೀತು ಮಾಡಿದ್ದರು. ಇದೇ ಕಾರಣದಿಂದ ತಾಯಿಯ ಮೇಲೆ ಹಲ್ಲೆ ನಡೆಸಿದ್ದರು. ಆರೋಪಿಗೆ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದ್ದರು. ಆದರೆ, ಆರೋಪಿ ಮಾರಣಾಂತಿಕ ರೀತಿಯಲ್ಲಿ ಹಲ್ಲೆ ಮಾಡಿದ್ದು, ಗಂಗಮ್ಮ ಸಾವಿಗೆ ಕಾರಣವಾಗಿತ್ತು ಎಂದು ವಿವರಿಸಿದ್ದರು

ಘಟನೆ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಗಂಗಮ್ಮ, ಮಗ ಹಲ್ಲೆ ಮಾಡಿರುವ ಸಂಬಂಧ ಹೇಳಿಕೆಗಳನ್ನು ನೀಡಿದ್ದರು. ಆದರೆ, ಇದಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದ ಕಾರಣಕ್ಕಾಗಿ ಮರಣ ಘೋಷಣೆಯನ್ನು ನಂಬಲು ಕಷ್ಟವಾಗಿದೆ ಎಂದು ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತ್ತು.

ಇದನ್ನೂ ಓದಿ: ಶೋಕಾಸ್ ನೋಟಿಸ್ ನೀಡದೇ ಕಪ್ಪು ಪಟ್ಟಿಗೆ ಸೇರಿಲಾಗದು: ಹೈಕೋರ್ಟ್ - High Court on Black list

ETV Bharat Logo

Copyright © 2024 Ushodaya Enterprises Pvt. Ltd., All Rights Reserved.