ETV Bharat / state

ಶಾಸಕ ಉದಯ್ ಗರುಡಾಚಾರ್​​ಗೆ​​ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್ - Uday Garudachar

author img

By ETV Bharat Karnataka Team

Published : Apr 24, 2024, 10:56 PM IST

mla-uday-garudachar
ಶಾಸಕ ಉದಯ್ ಗರುಡಾಚಾರ್​​

ಶಾಸಕ ಬಿ.ಜಿ.ಉದಯ್‌ ಗರುಡಾಚಾರ್​ ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದು ಮಾಡಿದೆ.

ಬೆಂಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮ್ಮ ಮೇಲಿನ ಕ್ರಿಮಿನಲ್‌ ಪ್ರಕರಣದ ಮಾಹಿತಿ ನೀಡದ ಆರೋಪದ ಮೇಲೆ ವಿಚಾರಣಾ ನ್ಯಾಯಾಲಯವು ಚಿಕ್ಕಪೇಟೆ ಶಾಸಕ ಬಿ.ಜಿ.ಉದಯ್‌ ಗರುಡಾಚಾರ್‌ ಅವರಿಗೆ ಎರಡು ತಿಂಗಳು ಸಾಧಾರಣ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಉದಯ್‌ ಗರುಡಾಚಾರ್‌ ಸಲ್ಲಿಸಿದ್ದ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಪೀಠವು ಈ ಆದೇಶ ಮಾಡಿದೆ. ಅಪರಾಧ ಪ್ರಕರಣ ಸಂಬಂಧ ದೋಷಾರೋಪಗಳನ್ನು ಹೊರಿಸಿದ ಮತ್ತು ಆ ಸಂಬಂಧ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡ ಸಂದರ್ಭದಲ್ಲಿ ತಮ್ಮ ಮೇಲಿನ ಆರೋಪಗಳ ಕುರಿತು ಮಾಹಿತಿಯನ್ನು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯು ತಿಳಿಸಬೇಕಾಗುತ್ತದೆ. ಆ ಆರೋಪಗಳನ್ನು ಪರಿಗಣಿಸಬೇಕಾಗುತ್ತದೆ. ಅವರನ್ನು ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಯ ಎಂಬುದಾಗಿ ವ್ಯಾಖ್ಯಾನಿಸಬಹುದಾಗಿದೆ. ಎಫ್‌ಐಆರ್‌ ಅಥವಾ ಖಾಸಗಿ ದೂರು ದಾಖಲಾದ ಮಾತ್ರಕ್ಕೆ ಆರೋಪಿಯಾಗಿ ದೃಢಪಟ್ಟು, ಚುನಾವಣಾ ಪ್ರಮಾಣಪತ್ರದಲ್ಲಿ ಪ್ರಕರಣದ ಮಾಹಿತಿ ನೀಡಬೇಕು ಎಂದರ್ಥವಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣವೊಂದರ ಸಂಬಂಧ ದೂರು ದಾಖಲಾಗಿತ್ತು. ಆದರೆ, ನಾಮಪತ್ರ ಸಲ್ಲಿಕೆಯ ಸಂದರ್ಭದ ವೇಳೆಗೆ ಆ ದೂರಿನ ಸಂಬಂಧ ಅರ್ಜಿದಾರರ ವಿರುದ್ಧ ದೋಷಾರೋಪಣೆ ಹೊರಿಸಲಾಗಿರಲಿಲ್ಲ. ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್‌ ತೆಗೆದುಕೊಂಡಿರಲಿಲ್ಲ. ಹೀಗಿದ್ದರೂ ಚುನಾವಣೆಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅರ್ಜಿದಾರರು ತಮ್ಮ ಮೇಲಿನ ಕ್ರಿಮಿನಲ್‌ ಪ್ರಕರಣದ ಮಾಹಿತಿ ಮರೆಮಾಚಿದ್ದಾರೆ ಎಂದೇಳಿ ಅವರನ್ನು ದೋಷಿಯಾಗಿ ಪರಿಗಣಿಸಿದ ಹಾಗೂ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದು ಪೀಠ ಹೇಳಿದೆ.

ಅಲ್ಲದೆ, ಪ್ರಕರಣದಲ್ಲಿ ಅವರಿಗೆ ಸಂಪೂರ್ಣವಾಗಿ ಕ್ಲೀನ್‌ ಚಿಟ್‌ ನೀಡಬೇಕಿದೆ. ಈ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಯಿಂದ ಅರ್ಜಿದಾರರು ಸಾಕಷ್ಟು ಯಾತನೆ ಹಾಗೂ ಹೇಳಲಾಗದ ಕಷ್ಟ ಅನುಭವಿಸಿದ್ದಾರೆ ಎಂದು ಹೇಳಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿದೆ. ಜೊತೆಗೆ, ಆ ತೀರ್ಪು ಪ್ರಕಟವಾದ ನಂತರ ಅರ್ಜಿದಾರರು ದಂಡ ಮೊತ್ತವನ್ನು ಪಾವತಿ ಮಾಡಿದ್ದರೆ, ಅದನ್ನು ಕೂಡಲೇ ಹಿಂದಿರುಗಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಶಾಸಕ ಉದಯ್ ಗರುಡಾಚಾರ್ 2018ರಲ್ಲಿ ಚಿಕ್ಕಪೇಟೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣದ ಹಾಗೂ ಪತ್ನಿಯ ಬ್ಯಾಂಕ್‌ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿ ಹೆಚ್‌.ಜಿ.ಪ್ರಶಾಂತ್‌ ಎಂಬುವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ನಗರದ 42ನೇ ಎಸಿಎಂಎಂ (ಜನ ಪ್ರತಿನಿಧಿಗಳ ವಿಶೇಷ ಕೋರ್ಟ್‌), ನ್ಯಾಯಾಲಯವು ಚುನಾವಣಾ ಅಪರಾಧದ ಅಡಿಯಲ್ಲಿ ಎರಡು ತಿಂಗಳ ಸಾಧಾರಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ 2022ರ ಅ.13ರಂದು ತೀರ್ಪು ಹೊರಡಿಸಿತ್ತು.

ಈ ಆದೇಶವನ್ನು ಪುರಸ್ಕರಿಸಿ 2023ರ ಸೆ.11ರಂದು ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿತ್ತು. ಈ ಎರಡು ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ಉದಯ ಗರುಡಾಚಾರ್‌ ಅವರು ಹೈಕೋರ್ಟ್‌ಗೆ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಕೆಎಂಸಿಯಲ್ಲಿ ಅನಧಿಕೃತ ಪದಾಧಿಕಾರಿಗಳಿಂದ ಕಾರ್ಯನಿರ್ವಹಣೆ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.