ETV Bharat / state

ಬಿಬಿಎಂಪಿ, ಬಿಡಿಎ, ಕೆಐಎಡಿಬಿ ಕೆಟ್ಟ ದಾವೆದಾರರು: ಹೈಕೋರ್ಟ್ ಅಭಿಪ್ರಾಯ

author img

By ETV Bharat Karnataka Team

Published : Mar 12, 2024, 11:19 AM IST

High Court outraged against BBMP, BDA, KIADB
ಹೈಕೋರ್ಟ್

ಶಾಲೆಗಳ ಮೂಲ ಸೌಕರ್ಯ ಸುಧಾರಣೆ ಮಾಡುತ್ತಿಲ್ಲ. ದಶಕ ಕಳೆದರೂ ಬಿಬಿಎಂಪಿ ಶಾಲೆಗಳ ಸ್ಥಿತಿಗತಿ ವಿವರ ನೀಡಿಲ್ಲ. ಬಿಬಿಎಂಪಿ, ಬಿಡಿಎ, ಕೆಐಎಡಿಬಿ ಕೆಟ್ಟ ದಾವೆದಾರರು ಎಂದು ಹೈಕೋರ್ಟ್ ಹೇಳಿದೆ.

ಬೆಂಗಳೂರು: ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸ್ಥಿತಿಗತಿ ಕುರಿತು ವರದಿ ಸಲ್ಲಿಸದ ಹಿನ್ನೆಲೆ ಬಿಬಿಎಂಪಿ ವಿಳಂಬ ಧೋರಣೆಗೆ ಹೈಕೋರ್ಟ್ ಕಿಡಿಕಾರಿದೆ. ಬಹಳ ಬಡತನದಲ್ಲಿರುವ ಮಕ್ಕಳು ಬಿಬಿಎಂಪಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ನೀವು ಶಾಲೆಗಳ ಮೂಲ ಸೌಕರ್ಯ ಸುಧಾರಣೆ ಮಾಡುತ್ತಿಲ್ಲ. ದಶಕ ಕಳೆದರೂ ಬಿಬಿಎಂಪಿ ಶಾಲೆಗಳ ಸ್ಥಿತಿಗತಿ ವಿವರ ನೀಡಿಲ್ಲ. ಬಿಬಿಎಂಪಿ, ಬಿಡಿಎ, ಕೆಐಎಡಿಬಿ ಕೆಟ್ಟ ದಾವೆದಾರರು ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯಪಟ್ಟಿದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ‌ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಬಿಬಿಎಂಪಿ ಶಾಲೆಗಳ ಕುರಿತು ವರದಿ ಸಲ್ಲಿಸಲು ಮಾಹಿತಿ ಒದಗಿಸಲಾಗಿಲ್ಲ ಎಂದು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲರು ಪೀಠದ ಗಮನಸೆಳೆದರು. ಆಗ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲರು ಒಂದು ವಾರದಲ್ಲಿ ಎಂಟೂ ವಲಯಗಳಲ್ಲಿರುವ ಬಿಬಿಎಂಪಿ ಶಾಲೆಗಳ ಸ್ಥಿತಿಗತಿ ವರದಿಯನ್ನು ಸವಿವರವಾಗಿ ಸಲ್ಲಿಸಲಾಗುವುದು ಎಂದರು.

ಇದರಿಂದ ತೃಪ್ತರಾದ ನ್ಯಾಯಪೀಠ, ಬಿಬಿಎಂಪಿ ಶಾಲೆಯಲ್ಲಿ ಬಡವರ ಮಕ್ಕಳು ಕಲಿಯುತ್ತಾರೆಯೇ ವಿನಃ ಬೇರೆ ಶಾಲೆಗಳಲ್ಲಲ್ಲ. ಬಿಬಿಎಂಪಿ ನಡತೆಯ ಕುರಿತು ಪೀಠ ಕಿಡಿಕಾರಿದೆ. ನಮಗೆ ಬಿಬಿಎಂಪಿ, ಬಿಡಿಎ ಮತ್ತು ಕೆಐಡಿಬಿಯಲ್ಲಿ ತುಂಬಾ ಸಮಸ್ಯೆಗಳಿವೆ. ಅವರು ಕೆಟ್ಟ ದಾವೆದಾರರು ಎಂದು ಹೇಳದೆ ವಿಧಿಯಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಅಮಿಕಾಸ್ ಕ್ಯೂರಿ, ''ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿ 123 ಶಾಲೆಗಳಲ್ಲಿ ಒಂದೇ ಒಂದು ಶೌಚಾಲಯ ಅಥವಾ ಅದು ಇಲ್ಲವೇ ಇಲ್ಲ ಎಂದು ವಿವರಿಸಲಾಗಿದೆ. ಈ ಪೈಕಿ 69 ಶಾಲೆಗಳಲ್ಲಿ ಮಾತ್ರ ಶೌಚಾಲಯ ಸಮಸ್ಯೆ ಇದೆ ಎಂದು ಸರ್ಕಾರ ತನ್ನ ವರದಿಯಲ್ಲಿ ಹೇಳಿದೆ. ಆರ್​ಟಿಇ ಕಾಯಿದೆ ಅಡಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇರಬೇಕು. ಈ ಸಂಬಂಧ ವಿವರವಾದ ವರದಿಯನ್ನು ಸಿದ್ಧಪಡಿಸಲಾಗಿದೆ'' ಎಂದರು.

''ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಸಮೀಕ್ಷೆ ನಡೆದಿಲ್ಲ. ಬಿಬಿಎಂಪಿ ಶಾಲೆಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಇಮೇಲ್ ಕಳುಹಿಸಿದರು ಬಿಬಿಎಂಪಿ ಮಾಹಿತಿ ನೀಡುತ್ತಿಲ್ಲ'' ಎಂದು ತಿಳಿಸಿದರು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲರು, ಶಾಲೆಗಳಲ್ಲಿ ಏನೆಲ್ಲಾ ಸಮಸ್ಯೆಗಳು ಇವೆ ಎಂಬುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲಾಗುವುದು.
ಈ ಅಂಶಗಳನ್ನು ಆಲಿಸಿದ ಪೀಠ, ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಶಾಲೆಗಳಲ್ಲಿದ್ದು, ಸರ್ಕಾರ ಮತ್ತು ಬಿಬಿಎಂಪಿ ಕೈಗೊಂಡಿರುವ ಕ್ರಮದ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು. ಇದು ಕೊನೆಯ ಅವಕಾಶ ಎಂದು ಹೇಳಿ ವಿಚಾರಣೆ ಮಾರ್ಚ್ 27ಕ್ಕೆ ಮುಂದೂಡಿತು.

ಇದನ್ನೂ ಓದಿ: ಶರಾವತಿ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯ ಟೆಂಡರ್​ ಯಥಾಸ್ಥಿತಿಗೆ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.