ETV Bharat / state

ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಸಂತೋಷ್​ ರಾವ್​ಗೆ ಹೈಕೋರ್ಟ್ ನೋಟಿಸ್​

author img

By ETV Bharat Karnataka Team

Published : Feb 3, 2024, 4:03 PM IST

high-court-notice-to-beltangadi-student-rape-and-murder-case-accused
ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಸಂತೋಷ್​ ರಾವ್​ಗೆ ಹೈಕೋರ್ಟ್ ನೋಟಿಸ್​

ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಆರೋಪಿಗೆ ಹೈಕೋರ್ಟ್​ ನೋಟಿಸ್​ ಜಾರಿಗೊಳಿಸಿದೆ.

ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯ ಖುಲಾಸೆಗೊಳಿಸಿದ್ದ ವಿಶೇಷ ನ್ಯಾಯಾಲಯದ ಅದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ಸಂಬಂಧ ಆರೋಪಿ ಸಂತೋಷ್​ ರಾವ್​ಗೆ ಹೈಕೋರ್ಟ್​ ನೋಟಿಸ್​ ಜಾರಿ ಮಾಡಿದೆ.

ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್ ಮತ್ತು ವಿಜಯಕುಮಾರ್‌ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಅಲ್ಲದೆ, ಪ್ರಕರಣ ಸಂಬಂಧ ನೋಟಿಸ್​ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಸಂತೋಷ್ ರಾವ್‌ ಅವರನ್ನು 2023ರ ಜೂನ್ 16 ರಂದು ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.

ಪ್ರಕರಣದ ಹಿನ್ನೆಲೆ: 2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಕಾಲೇಜು ವಿದ್ಯಾರ್ಥಿನಿ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿತ್ತು. ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2013 ರ ನವೆಂಬರ್ 6 ರಂದು ಸರ್ಕಾರವು ಸಿಬಿಐಗೆ ತನಿಖೆಗೆ ಆದೇಶಿಸಿತ್ತು. ತನಿಖಾಧಿಕಾರಿಗಳು ಕಾರ್ಕಳ ಮೂಲದ ಸಂತೋಷ್ ರಾವ್ ಎಂಬಾತನನ್ನು ಆರೋಪಿಯಾಗಿ ಗುರುತಿಸಿದ್ದರು.

ಆದರೆ, ಪ್ರಕರಣದ ವಿಚಾರಣೆಯ ನಂತರ ಸಿಬಿಐ ವಿಶೇಷ ನ್ಯಾಯಾಲಯವು 2023 ರ ಜುಲೈ 16 ರಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದರಿಂದ ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಹೀಗಾಗಿ, ಮರು ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠವು ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದಿತ್ತು. ಈ ನಡುವೆ ವಿಶೇಷ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.

ಇದನ್ನೂ ಓದಿ: ವಿಚಾರಣೆ ಸಂದರ್ಭದಲ್ಲಿ ಥಳಿತ ಆರೋಪ: ಇಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.