ETV Bharat / state

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದು ಕೋರಿ ಶ್ರೀರಾಮುಲು ಸಲ್ಲಿಸಿದ್ದ ಅರ್ಜಿ ವಜಾ

author img

By ETV Bharat Karnataka Team

Published : Feb 23, 2024, 6:26 PM IST

ಹೈಕೋರ್ಟ್
ಹೈಕೋರ್ಟ್

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಹಾಜರಾಗದ ಮಾಜಿ ಸಚಿವ ಶ್ರೀರಾಮುಲು ಅವರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿರುವ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗದ ಮಾಜಿ ಸಚಿವ ಶ್ರೀರಾಮುಲು ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಶ್ರೀರಾಮುಲು ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನಡೆಸಿದರು. ಶ್ರೀರಾಮುಲು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮಂದೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.

ಜೊತೆಗೆ, ಮುಂದಿನ ವಿಚಾರಣೆ ದಿನಾಂಕವನ್ನು ಅರ್ಜಿದಾರರಿಗೆ ತಿಳಿಸಲು ಸೂಚನೆ ನೀಡಿದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ ಬಂಧನದ ಆದೇಶ ಹೊರಡಿಸಬೇಕಾಗುತ್ತದೆ ಎಂದು ತಿಳಿಸಿತು. ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರನ್ನು ಉದ್ದೇಶಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ನಿಮ್ಮ ಅರ್ಜಿದಾರರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗಿದ್ದಾರೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಇಲ್ಲ ಎಂದು ಉತ್ತರಿಸಿದರು. ಹಾಗಾದರೆ ವಿಚಾರಣಾ ನ್ಯಾಯಾಲಯ ನೋಟಿಸ್ ಅಥವಾ ಸಮನ್ಸ್ ಜಾರಿಗೊಳಿಸಲು ಆದೇಶಿಸಿಲ್ಲವೇ ಎಂದು ನ್ಯಾಯಪೀಠ ಮರು ಪ್ರಶ್ನಿಸಿತು. ಜಾರಿಗೊಳಿಸಿದೆ. ಆದರೆ, ನಮಗೆ ಸರ್ವ್ ಆಗಿಲ್ಲ ಎಂದು ಉತ್ತರಿಸಿದರು.

ಎಷ್ಟು ಬಾರಿ ಸಮನ್ಸ್ ಹೊರಡಿಸಲಾಗಿದೆ ಎಂದು ಪೀಠ ಮತ್ತೆ ಪ್ರಶ್ನಿಸಿದಾಗ ಸರ್ಕಾರಿ ವಕೀಲರು, ನಾಲ್ಕು ಬಾರಿ ಎಂದು ಉತ್ತರಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ಕೋರ್ಟ್​ಗಳು ಎಂದರೆ ನಿಮಗೆ ಅಷ್ಟೊಂದು ಸದರವೆ? ಅಲ್ಲಿ ಹೋಗಿ ಮ್ಯಾಜಿಸ್ಟ್ರೇಟ್ ಮುಂದೆ ನಿಂತುಕೊಳ್ಳಲು ನಿಮ್ಮ ಅರ್ಜಿದಾರರಿಗೆ ಯಾವ ಅಂತಸ್ತು ಅಡ್ಡಿಯಾಗಿದೆ? ಮ್ಯಾಜಿಸ್ಟ್ರೇಟ್ ಕೋರ್ಟ್​ಗಳು ಎಂದರೆ ಏನೆಂದುಕೊಂಡಿದ್ದೀರಿ? ವಿಚಾರಣಾ ಕೋರ್ಟ್ ನಾಲ್ಕು ಬಾರಿ ಸಮನ್ಸ್ ಹೊರಡಿಸಿದ್ದರೂ ಯಾಕೆ ಹಾಜರಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.

ಅಲ್ಲದೆ, ಸಚಿವರಿರಬಹುದು, ಮಾಜಿ ಸಚಿವ ಅಥವಾ ಯಾವುದೇ ಜನಪ್ರತಿನಿಧಿ ಇರಬಹುದು. ಸುಪ್ರೀಂ ಕೋರ್ಟ್‌ನಿಂದ ರಚಿಸಿರುವ ನ್ಯಾಯಪೀಠವಾಗಿದೆ. ಈ ರೀತಿಯಲ್ಲಿ ನಡೆದುಕೊಂಡೆ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

ಇದನ್ನೂ ಓದಿ : ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಬಿಡಿಎ ಹೊರಡಿಸಿದ್ದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.