ETV Bharat / state

ರಾಜಧಾನಿ ಬೆಂಗಳೂರು ನಗರದ 28 ಪಶು ವೈದ್ಯ ಕೇಂದ್ರಗಳ ಕಾರ್ಯ ಮುಂದುವರೆಸಲು ಹೈಕೋರ್ಟ್ ನಿರ್ದೇಶನ

author img

By ETV Bharat Karnataka Team

Published : Feb 22, 2024, 9:52 PM IST

High Court
ಹೈಕೋರ್ಟ್

ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿ ಇರುವ 28 ಪಶುವೈದ್ಯ ಕೇಂದ್ರಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಸರ್ಕಾರ ಮತ್ತು ಬಿಬಿಎಂಪಿ ಮುಂದಾಗಿರುವುದನ್ನು ಪ್ರಶ್ನಿಸಿ ಅನಿಮಲ್ ರೈಟ್ಸ್ ಫಂಡ್​ ಪದಾಧಿಕಾರಿಗಳು​ ಹೈಕೋರ್ಟ್​ಗೆ​ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಜಿಲ್ಲೆಯ ವಿವಿಧೆಡೆ ಇರುವ 28 ಪಶುವೈದ್ಯ ಕೇಂದ್ರ ಸ್ಥಳಾಂತರ ಮಾಡುವುದಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, 28 ಪಶು ವೈದ್ಯಕೀಯ ಕೇಂದ್ರಗಳು ಕೂಡಲೇ ಕಾರ್ಯ ನಿರ್ವಹಿಸಬೇಕು ಹಾಗೂ ಅವುಗಳಿಗೆ ಸಿಬ್ಬಂದಿ ಹಾಗೂ ವೈದ್ಯರನ್ನು ಮರು ನಿಯೋಜನೆ ಮಾಡಬೇಕು ಎಂದು ನಿರ್ದೇಶಿಸಿದೆ.

ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿ 28 ಪಶುವೈದ್ಯ ಕೇಂದ್ರಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಸರ್ಕಾರ ಮತ್ತು ಬಿಬಿಎಂಪಿ ಮುಂದಾಗಿರುವುದನ್ನು ಪ್ರಶ್ನಿಸಿ ಅನಿಮಲ್ ರೈಟ್ಸ್ ಫಂಡ್ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಸೇರಿದಂತೆ ಮತ್ತಿತರರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಈ ನಿರ್ದೇಶನ ನೀಡಿದೆ. ಅಲ್ಲದೇ ಈ 28 ಪಶುವೈದ್ಯಕೀಯ ಕೇಂದ್ರಗಳ ಬಾಗಿಲುಗಳನ್ನು ಮುಚ್ಚಲಾಗಿದೆ. ಸದ್ಯ ಅವುಗಳ ಬಾಗಿಲು ತೆರೆದು ಕಾರ್ಯನಿರ್ವಹಣೆ ಮಾಡಬೇಕು. ಅವುಗಳ ಸಿಬ್ಬಂದಿ ಮತ್ತು ವೈದ್ಯರನ್ನು ಬೇರಡೆಗೆ ಸ್ಥಳಾಂತರ ಮಾಡಲಾಗಿದೆ. ಅವರನ್ನು ಈ ಕೇಂದ್ರಗಳಿಗೆ ಮರು ನಿಯೋಜನೆ ಮಾಡಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ಸೂಚಿಸಿದೆ.

ನಗರದಲ್ಲಿ ಪ್ರತಿ ನಿತ್ಯ 600-700 ಸಾಕು ಪ್ರಾಣಿಗಳು ಅನಾರೋಗ್ಯಕ್ಕೊಳಾಗುತ್ತವೆ. ಅವುಗಳಿಗೆ ಅಗತ್ಯವಾಗಿ ಚಿಕಿತ್ಸೆ ನೀಡಬೇಕು. ಹೀಗಿರುವಾಗ ಪಶು ವೈದ್ಯಕೀಯ ಆಸ್ಪತ್ರೆ ಸ್ಥಳಾಂತರಕ್ಕೆ ಮುಂದಾಗಿರುವ ನಿರ್ಧಾರದಿಂದ ಸ್ಥಳೀಯ ರೈತರು ತಮ್ಮ ಪಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಸ್ಥಿತಿ ಬಂದೊದಗಲಿದೆ. ಇದು ಸಾಮಾನ್ಯ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತದೆ ಎಂದು ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದ ಪರಿಗಣಿಸಿದ ನ್ಯಾಯಪೀಠ ಈ ಆದೇಶ ಮಾಡಿದೆ.

ರಾಜ್ಯ ಸರ್ಕಾರವು 2022-23ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಕೇಂದ್ರಗಳ ಪ್ರಾರಂಭಕ್ಕೆ ನಿರ್ಧರಿಸಿದ್ದು, 2022ರ ಮೇ 17ರಂದು ಆದೇಶ ಹೊರಡಿಸಿದೆ. ಮೊದಲ ಹಂತದ ಭಾಗವಾಗಿ 20 ಪಶು ವೈದ್ಯಕೀಯ ಕೇಂದ್ರಗಳನ್ನು ಪ್ರಾರಂಭಿಸಿದೆ. ಈ ಆದೇಶ ಜಾರಿ ಮಾಡುವುದಕ್ಕೂ ಮುನ್ನ ಪಶು ವೈದ್ಯಕೀಯ ಆಸ್ಪತ್ರೆ ಸ್ಥಳಾಂತರಕ್ಕೆ ಮುಂದಾಗಿರುವ ನಿರ್ಧಾರದಿಂದ ಸ್ಥಳೀಯ ರೈತರು ತಮ್ಮ ಪಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಸ್ಥಿತಿ ಬಂದೊದಗಲಿದೆ. ಈ ಕಾರಣಕ್ಕಾಗಿ ಪಶು ಚಿಕಿತ್ಸಾಲಯ ಸ್ಥಳಾಂತರ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಇದನ್ನೂಓದಿ:ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲಿ ಹೆದ್ದಾರಿ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.