ETV Bharat / state

ಕಾನೂನುಬಾಹಿರವಾಗಿ ಮನೆ ತೆರವು: ₹ 15 ಲಕ್ಷ ಪರಿಹಾರ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

author img

By ETV Bharat Karnataka Team

Published : Feb 17, 2024, 8:46 PM IST

Etv Bharat
Etv Bharat

ಮನೆಯನ್ನು ಅಕ್ರಮವಾಗಿ ತೆರವುಗೊಳಿಸಿರುವ ಸಂಬಂಧ ಮಹಿಳೆಗೆ 15 ಲಕ್ಷ ರೂ. ಪಾವತಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಸೂಚಿಸಿದೆ.

ಬೆಂಗಳೂರು: ಮಹಿಳೆಯೊಬ್ಬರು ನಿರ್ಮಿಸಿಕೊಂಡಿದ್ದ ಮನೆಯನ್ನು ಅಕ್ರಮವಾಗಿ ತೆರವುಗೊಳಿಸಿದ್ದ ಬಿಬಿಎಂಪಿ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಮಹಿಳೆಗೆ 15 ಲಕ್ಷ ರೂ. ಪಾವತಿಸಿಸಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಿದೆ.

ನಗರದ ಕೆ.ಆರ್‌. ಪುರಂ ಹೋಬಳಿಯ ದೊಡ್ಡನೆಕುಂದಿಯ ನಾರಾಯಣರೆಡ್ಡಿ ಬಡಾವಣೆಯ ನಿವಾಸಿ ಕವಿತಾ ಪೊಡ್ವಾಲ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಅರ್ಜಿದಾರರಿಗೆ ನೋಟಿಸ್‌ ನೀಡದೆ ಮನೆ ತೆರವುಗೊಳಿಸಿರುವುದು ಅಕ್ರಮ ಹಾಗೂ ಕಾನೂನು ಬಾಹಿರ. ಅರ್ಜಿದಾರರ ಮನೆಯಲ್ಲಿನ ವಸ್ತುಗಳಿಗೆ ಹಾನಿ ಆಗಿರುವುದರಿಂದ ಮನೆ ತೆರವುಗೊಳಿಸಿರುವುದರಿಂದ ಪಾಲಿಕೆ ಅವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಬಿಬಿಎಂಪಿ ಮುಖ್ಯ ಆಯುಕ್ತರು ಆ 10 ಲಕ್ಷ ರೂ.ಗಳನ್ನು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಅವರಿಂದ ವಸೂಲು ಮಾಡಿಕೊಳ್ಳಬೇಕು. ಅಲ್ಲದೆ, ಪಾಲಿಕೆಯ ಕಾನೂನುಬಾಹಿರ ಕೃತ್ಯದಿಂದ ಅರ್ಜಿದಾರರಿಗೆ ಆಗಿರುವ ಮಾನಸಿಕ ಆಘಾತಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದೆ.

ಅಲ್ಲದೆ, ಲೋಕೋಪಯೋಗಿ ಇಲಾಖೆಯ ವಲಯ ಕಾರ್ಯಕಾರಿ ಎಂಜಿನಿಯರ್‌ ಮನೆ ತೆರವು ಮಾಡಿರುವುದಕ್ಕೆ ಕಾರಣವನ್ನು ಪತ್ತೆ ಹಚ್ಚಿ, 45 ದಿನಗಳಲ್ಲಿ ವರದಿಯನ್ನು ಸಲ್ಲಿಸಬೇಕು. ಆನಂತರ ಮುಖ್ಯ ಆಯುಕ್ತರು ಪರಿಹಾರ ಹಣವನ್ನು ನೀಡಬೇಕು. ಅರ್ಜಿದಾರರು ಮೊದಲು ಮನೆ ಇದ್ದ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುವವರೆಗೆ 2016ರ ಏಪ್ರಿಲ್‌ 25ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳಿಗೆ 10 ಸಾವಿರ ರೂ.ಗಳನ್ನು ಪರಿಹಾರದ ರೂಪದಲ್ಲಿ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಬಿಬಿಎಂಪಿ ಕೆಎಂಸಿ ಕಾಯ್ದೆ ಸೆಕ್ಷನ್‌ 321(2)ರ ಅನ್ವಯ ಷೋಕಾಸ್‌ ನೋಟಿಸ್‌ ಅಥವಾ ತಾತ್ಕಾಲಿಕ ಅದೇಶವನ್ನು ಹಾಗೂ ಸೆಕ್ಷನ್‌ 321(3)ರ ಅನ್ವಯ ಅಂತಿಮ ಆದೇಶನ ಅರ್ಜಿದಾರರಿಗೆ ತಲುಪಿಯೇ ಇಲ್ಲ. ಹಾಗಾಗಿ ಮನೆ ತೆರವು ಕಾನೂನು ಬಾಹಿರ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ, ಕೋರ್ಟ್‌ ಇಂತಹ ಪ್ರಕರಣಗಳಲ್ಲಿಬಿಬಿಎಂಪಿ ಅಧಿಕಾರಿಗಳು ಯಾವ್ಯಾವ ಕ್ರಮಗಳನ್ನು ಪಾಲಿಸಬೇಕು ಎಂದು ಹಲವು ನಿರ್ದೇಶನಗಳನ್ನು ನೀಡಿದೆ.

  • ಅಕ್ರಮ ಕಟ್ಟಡಗಳ ಬಗ್ಗೆ ದೂರು ಬಂದಾಗ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ನೋಟಿಸ್‌ ನೀಡಬಾರದು.
  • ನೋಟಿಸ್‌ ನೀಡುವ ಮುನ್ನ ಸ್ಥಳ ಪರಿಶೀಲನೆ ನಡೆಸಬೇಕು.
  • ನಕ್ಷೆ ಮಂಜೂರಾಗಿದೆಯೇ ಇಲ್ಲವೇ ಎಂಬುದರ ಕುರಿತಂತೆ ಖಚಿತಪಡಿಸಿಕೊಳ್ಳಬೇಕು ಹಾಗೂ ಮಂಜೂರಾದ ನಕ್ಷೆಯಲ್ಲಿ ಯಾವುದಾದರೂ ಉಲ್ಲಂಘನೆಗಳು ಆಗಿವೆಯೇ ಎಂಬುದನ್ನು ಪರಿಶೀಲಿಸಬೇಕು.
  • ಸೆಟ್‌ ಬ್ಯಾಕ್‌(ಅಕ್ಕ ಪಕ್ಕ ಜಾಗ ಬಿಡುವುದು), ಕಟ್ಟಡದ ಎತ್ತರ, ಎಫ್‌ಎಆರ್‌ ಮತ್ತಿತರ ಉಪ ನಿಯಮ(ಬೈಲಾ) ಪಾಲಿಸಲಾಗಿದೆಯೇ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
  • ಯಾವ ಯಾವ ನಿಯಮಗಳು ಉಲ್ಲಂಘನೆಯಾಗಿದೆ ಎಂಬುದನ್ನು ಪಟ್ಟಿ ಮಾಡಬೇಕು. ಆನಂತರವೇ ನಿರ್ದಿಷ್ಟ ಉಲ್ಲಂಘನೆಗಳು ಕಂಡು ಬಂದರೆ ಮಾತ್ರ ನೋಟಿಸ್‌ ನೀಡಿ, ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ಜರುಗಿಸತಕ್ಕದ್ದು ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಬೆಂಗಳೂರು ನಗರದ ಪೂರ್ವ ತಾಲೂಕಿನ ಕೆ.ಆರ್‌.ಪುರಂ ಹೋಬಳಿಯ ದೊಡ್ಡನೆಕುಂದಿಯ ನಾರಾಯಣರೆಡ್ಡಿ ಬಡಾವಣೆಯಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ಆದರೆ, ಅವರು ಅಕ್ರಮವಾಗಿ ಮನೆಯನ್ನು ನಿರ್ಮಾಣ ಮಾಡಿದ್ದಾರೆಂಬ ದೂರು ಬಂದಿತ್ತು. ನಿಯಮದಂತೆ ಬಿಬಿಎಂಪಿ ಅವರಿಗೆ ನೋಟಿಸ್‌ ನೀಡಿ, ಅವರ ಉತ್ತರ ಪಡೆದು ಆನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ತಮಗೆ ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಮನೆ ತೆರವುಗೊಳಿಸಲಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: ಹಳೇ ಹುಬ್ಬಳ್ಳಿ ‌ಗಲಭೆ ಪ್ರಕರಣ : 111 ಜನರಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.