ETV Bharat / state

ಹಾವೇರಿ: ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ; ಜನರನ್ನು ಆಕರ್ಷಿಸುತ್ತಿರುವ ಫಲಪುಷ್ಪ ಪ್ರದರ್ಶನ

author img

By ETV Bharat Karnataka Team

Published : Jan 20, 2024, 5:48 PM IST

Updated : Jan 20, 2024, 11:08 PM IST

ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ
ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ

ಹಾವೇರಿಯಲ್ಲಿ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ಆರಂಭವಾಗಿದೆ. ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.

ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ

ಹಾವೇರಿ: ಉತ್ತರ ಕರ್ನಾಟಕದ ಆರಂಭಿಕ ಜಾತ್ರೆ ಎಂದು ಕರೆಸಿಕೊಳ್ಳುವ ಹಾವೇರಿ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ಆರಂಭವಾಗಿದೆ. ಭಾನುವಾರದಂದು (ನಾಳೆ) ಜಾತ್ರಾ ಮಹೋತ್ಸವದ ನಿಮಿತ್ತ ಲಿಂಗೈಕ್ಯ ಶಿವಬಸವ ಶಿವಲಿಂಗ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಜಾತ್ರೆ ಐದು ದಿನಗಳ ಇರುವ ಮುನ್ನ ಹುಕ್ಕೇರಿ ಮಠದಲ್ಲಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಹುಕ್ಕೇರಿಮಠ ಮತ್ತು ತೋಟಗಾರಿಕಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಾವೇರಿ ಹುಕ್ಕೇರಿಮಠದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ದಾಸೋಹ ಮಂದಿರದ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಹೂವು ಹಣ್ಣುಗಳ ಲೋಕವನ್ನೇ ಅನಾವರಣಗೊಳಿಸಿದೆ. ನವಧಾನ್ಯಗಳಿಂದ ನಿರ್ಮಿಸಿರುವ ಬಸವೇಶ್ವರನ ಮೂರ್ತಿ ಫಲಪುಷ್ಪ ಪ್ರದರ್ಶನಕ್ಕೆ ಬರುವವರನ್ನ ಕೈಬೀಸಿ ಕರೆಯುತ್ತದೆ.

ಪ್ರದರ್ಶನ ಆವರಣಕ್ಕೆ ಕಾಲಿಡುತ್ತಿದ್ದಂತೆ ಏಲಕ್ಕಿಯಲ್ಲಿ ಮಾಡಿದ ಗಣೇಶನ ಮೂರ್ತಿ ಆಕರ್ಷಣೀಯವಾಗಿದೆ. ತೋಟಗಾರಿಕಾ ಇಲಾಖೆ ಪುಷ್ಪಗಳಲ್ಲಿ ಇಸ್ರೋ ಲೋಗೋ, ಚಂದ್ರಯಾನ 3 ಮತ್ತು ಚಂದ್ರನ ಮೇಲೆ ಇಳಿದ ವಿಕ್ರಮ ಲ್ಯಾಂಡರ್ ನಿರ್ಮಿಸಿದೆ. ಈ ಮೂರು ಪುಷ್ಪ ಕಲಾಕೃತಿಗಳು ವೀಕ್ಷಕರಿಗೆ ಇಸ್ರೋ ಮೈಲಿಗಲ್ಲುಗಳ ಪರಿಚಯಿಸುತ್ತಿವೆ. ಪುಷ್ಪಗಳಲ್ಲಿ ಕರ್ನಾಟಕದ ನಕ್ಷೆ ರಚಿಸಲಾಗಿದ್ದು, ಹಳದಿ ಮತ್ತು ಕುಂಕುಮ ಬಣ್ಣಗಳ ಪುಷ್ಪಗಳ ಅಲಂಕಾರ ಗಮನ ಸೆಳೆಯುತ್ತಿದೆ. ಪುಷ್ಪಗಳಲ್ಲಿ ಗೋಡಂಬಿ, ಹಣ್ಣಿನ ಪ್ರತಿಕೃತಿ ರಚಿಸಿದ್ದು, ಸೆಲ್ಪಿಸ್ಪಾಟ್ ಮಾಡಲಾಗಿದೆ. ಐದು ತರದ ಪುಷ್ಪಗಳಿಂದ ರಚಿಸಲ್ಪಟ್ಟ ಪುಷ್ಪ ಗಡಿಯಾರ ಕಣ್ಮನ ಸೆಳೆಯುತ್ತೆ.

ವಿವಿಧ ಪುಷ್ಪಗಳಲ್ಲಿ ಮೈದಳೆದಿರುವ ಈಶ್ವರನ ಮೂರ್ತಿಯಂತೂ ಆಕರ್ಷಣೀಯವಾಗಿದೆ. ಕಲ್ಲಂಗಡಿ, ಕುಂಬಳಕಾಯಿ, ಬದನೆಕಾಯಿ, ಹಾಗಲಕಾಯಿ, ಸೋರೆಕಾಯಿ, ಕ್ಯಾರಟ್‌ಗಳಲ್ಲಿ ಪ್ರಾಣಿಪ್ರಪಂಚವನ್ನೇ ಕಲಾವಿದರು ಅನಾವರಣಗೊಳಿಸಿದ್ದಾರೆ. ಕಲ್ಲಂಗಡಿಯಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್, ಬುದ್ದ, ಬಸವೇಶ್ವರ ಸ್ವಾಮಿ ವಿವೇಕಾನಂದ ಮೂರ್ತಿಗಳು ಗಮನ ಸೆಳೆಯುತ್ತವೆ. ಫಲಪುಷ್ಪ ಪ್ರದರ್ಶನದ ಪ್ರಮುಖ ಹೈಲೈಟ್ ಅಂದರೆ ರಾಮಮಂದಿರ ಮತ್ತು ರಾಮನ ಚಿತ್ರಗಳು.

ಬಾಳೆದಿಂಡು ಮತ್ತು ಕ್ಯಾರೆಟ್‌ಗಳಿಂದ ಅಯೋಧ್ಯಾ ಶ್ರೀರಾಮಮಂದಿರನ ಪ್ರತಿಕೃತಿ ರಚಿಸಲಾಗಿದೆ. ಅಯೋಧ್ಯಾ ಶ್ರೀರಾಮಮಂದಿರ ಪ್ರತಿಕೃತಿ ಮುಂದೆ ನಿಂತು ವೀಕ್ಷಕರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕಲ್ಲಂಗಡಿಗಳಲ್ಲಿ ಧನುರ್ಧಾರಿ ಶ್ರೀರಾಮಚಂದ್ರ, ಸೀತೆ, ರಾಮಾಂಜನೇಯ ಮತ್ತು ಶ್ರೀರಾಮಮಂದಿರದ ಚಿತ್ರಗಳು ವೀಕ್ಷಕರನ್ನ ಮನಸೊರೆಗೊಳಿಸುತ್ತಿವೆ. ಇನ್ನು ಮಹಾತ್ಮಾ ಗಾಂಧೀಜಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿವಿಧ ಗಣ್ಯರ ಚಿತ್ರಗಳು ಆಕರ್ಷಣೀಯವಾಗಿದ್ದವು. ಇನ್ನು ಕುಂಬಳಕಾಯಿಗಳಲ್ಲಿ ವೀಣೆ. ತಬಲಾ ಸೇರಿದಂತೆ ವಿವಿದ ಕಲಾಕೃತಿಗಳನ್ನು ರಚಿಸಲಾಗಿದೆ.

ಹಾಗಲಕಾಯಿಯಲ್ಲಿ ಮೊಸಳೆ, ಹೂಕೋಸುಗಳಲ್ಲಿ ನವಿಲಿನ ಪ್ರತಿಕೃತಿಗಳು, ಕ್ಯಾರೆಟ್‌ನಲ್ಲಿ ವಿವಿಧ ಕಲಾಕೃತಿಗಳು ಗಮನ ಸೆಳೆದವು. ಜಿಲ್ಲೆಯ ರೈತರು ಬೆಳೆದ ಉತ್ಕೃಷ್ಣ ಬೆಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಫಲಪುಷ್ಪಪ್ರದರ್ಶನದಲ್ಲಿ ಸುಮಾರು 10 ಕ್ಕೂ ಅಧಿಕ ಪುಷ್ಪ ತಳಿ 20 ಕ್ಕೂ ಅಧಿಕ ತರಕಾರಿ ಮತ್ತು 10 ಕ್ಕೂ ಅಧಿಕ ಹಣ್ಣುಗಳ ತಳಿಗಳನ್ನು ಬಳಿಸಲಾಗಿತ್ತು. ಹಾವೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಫಲಪುಷ್ಪ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಗೂ ಬಾಗಲಕೋಟೆಗೂ ಇದೆ ನಂಟು: ಸೀತಿಮನಿ ಗ್ರಾಮದಲ್ಲಿದೆ ದೇಶದ ಏಕೈಕ ಸೀತಾಮಾತೆಯ ದೇವಸ್ಥಾನ

Last Updated :Jan 20, 2024, 11:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.