ETV Bharat / state

ಮಂಗಳೂರು: ಮತೀಯ ದ್ವೇಷದಿಂದ ವ್ಯಕ್ತಿ ಕೊಲೆ; ನಾಲ್ವರಿಗೆ ಜೀವಾವಧಿ ಶಿಕ್ಷೆ - Life Imprisonment

author img

By ETV Bharat Karnataka Team

Published : May 1, 2024, 11:34 AM IST

life-imprisonment
ಮಂಗಳೂರು: ಮತೀಯ ದ್ವೇಷದಿಂದ ವ್ಯಕ್ತಿ ಕೊಲೆ; ನಾಲ್ವರಿಗೆ ಜೀವಾವಧಿ ಶಿಕ್ಷೆ

ವ್ಯಕ್ತಿಯೋರ್ವನನ್ನು ದುರುದ್ದೇಶದಿಂದ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಮಂಗಳೂರು: ಮತೀಯ ದ್ವೇಷದಿಂದ ದಾರಿ ಕೇಳುವ ನೆಪದಲ್ಲಿ ರಿಕ್ಷಾವನ್ನು ಅಡ್ಡಗಟ್ಟಿ ಪ್ರಯಾಣಿಕರೊಬ್ಬರ ಕೊಲೆ ಮಾಡಿದ ಆರೋಪ ಸಾಬೀತಾಗಿದ್ದು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಂಟ್ವಾಳ ಮಂಚಿ ನಿವಾಸಿ ವಿಜೇತ್ ಕುಮಾರ್ (22), ಬಡಗ ಉಳಿಪ್ಪಾಡಿ ನಿವಾಸಿ ಕಿರಣ್ ಪೂಜಾರಿ (24), ವಾಮಂಜೂರು ತಿರುವೈಲ್ ನಿವಾಸಿ ಅನೀಶ್ (23), ಮಂಚಿಗುತ್ತು ನಿವಾಸಿ ಅಭಿಜಿತ್ (24) ಶಿಕ್ಷೆಗೊಳಗಾದ ಅಪರಾಧಿಗಳು. ನಾಸಿರ್ ಎಂಬುವರ ಕೊಲೆ ಮಾಡಲಾಗಿತ್ತು.

2015ರ ಆ.6ರಂದು ಮುಹಮ್ಮದ್ ಮುಸ್ತಫಾ ಅವರು ತನ್ನ ಅತ್ತೆಯನ್ನು ರಿಕ್ಷಾದಲ್ಲಿ ಬಂಟ್ವಾಳ ಆಸ್ಪತ್ರೆಗೆ ಬಿಟ್ಟು ರಾತ್ರಿ ಹಿಂತಿರುಗುತ್ತಿದ್ದರು. ಬಳಿಕ ಮೆಲ್ಕಾರ್ ಸಮೀಪ ನಾಸಿ‌ರ್ ತನ್ನ ಪತ್ನಿಯ ಜೊತೆ ರಿಕ್ಷಾವನ್ನೇರಿ ಮುಡಿಪು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ 2 ಬೈಕ್‌ನಲ್ಲಿ ನಾಲ್ವರು ಬಂದಿದ್ದು, ರಿಕ್ಷಾದವರಲ್ಲಿ ಬೊಳ್ಳಾಯಿಗೆ ಹೋಗುವ ರಸ್ತೆ ಕುರಿತು ವಿಚಾರಿಸಿದ್ದಾರೆ. ದಾರಿ ತೋರಿಸಿ ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿದಾಗ ಆರೋಪಿಗಳು ವಾಹನವನ್ನು ಹಿಂಬಾಲಿಸಿದ್ದರು.

ರಾತ್ರಿ 10.45ರ ವೇಳೆ ಮುಡಿಪು ಮಾರ್ನಬೈಲು ಸಮೀಪದ ಕೊಳಕೆ ಕಂದೂರು ಎಂಬಲ್ಲಿಗೆ ತಲುಪಿದಾಗ ಆಟೋರಿಕ್ಷಾವನ್ನು ಓವರ್ ಟೇಕ್ ಮಾಡಿ ನಿಲ್ಲಿಸಿದ್ದರು. ಮತ್ತೆ ದಾರಿ ಕೇಳುವ ನೆಪದಲ್ಲಿ ಆರೋಪಿ ವಿಜೇತ್ ಕುಮಾರ್ ತಲವಾರಿನಿಂದ ನಾಸಿರ್​ ಮೇಲೆ ಹಲ್ಲೆ ನಡೆಸಿ, ತೀವ್ರ ಗಾಯಗೊಳಿಸಿದ್ದ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ, ಆ.7ರಂದು ಮೃತಪಟ್ಟಿದ್ದರು. ನಾಲ್ವರು ಆರೋಪಿಗಳು ಕೃತ್ಯವೆಸಗಿದ ಸಂದರ್ಭ ಹಾಕಿದ್ದ ಬಟ್ಟೆಯನ್ನು ರಕ್ತ ಕಲೆಗಳಿದ್ದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಗೆ ಎಸೆದು ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿದ್ದರು.

ಕೊಲೆಗೆ ದ್ವೇಷದ ಹಿನ್ನೆಲೆ: ಆರೋಪಿಗಳ ಪೈಕಿ ವಿಜೇತ್ ಕುಮಾರ್ ಮತ್ತು ಅಭಿಜಿತ್‌ಗೆ ಕೊಲ್ನಾಡ್ ಅಲಬೆ ಎಂಬಲ್ಲಿ 2015ರ ಆ.5ರಂದು ರಾತ್ರಿ 10.45ಕ್ಕೆ ಐವರು ಯುವಕರು ಹಲ್ಲೆ ನಡೆಸಿದ್ದರು. ಬಳಿಕ ಮರುದಿನ ರಾತ್ರಿ ದುರುದ್ದೇಶದಿಂದ ಆ.6ರಂದು ಕಿರಣ್ ಮತ್ತು ಅನೀಶ್‌ರನ್ನು ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕರೆಸಿಕೊಂಡು ಸಂಚಿನ ಪ್ರಕಾರ ನಾಸಿರ್ ಕೊಲೆ ಮಾಡಿದ್ದರು.

ಬಳಿಕ ಪೊಲೀಸ್ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಒಟ್ಟು 29 ಸಾಕ್ಷಿದಾರರ ವಿಚಾರಣೆ ನಡೆಸಲಾಗಿದ್ದು, 40 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಹೆಚ್.ಎಸ್. ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಒಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.

ನಾಲ್ವರ ಶಿಕ್ಷೆಯ ಪ್ರಮಾಣ: ನಾಲ್ವರು ಆರೋಪಿಗಳಿಗೆ ಕಲಂ 302 ಹಾಗೂ 120 (ಬಿ) ಅನ್ವಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದಲ್ಲಿ 1 ವರ್ಷ ಸಾದಾ ಸಜೆ, ಕಲಂ 307 ಹಾಗೂ 120 (ಬಿ) ಅಡಿ 5 ವರ್ಷ ಕಠಿಣ ಸಜೆ ಮತ್ತು ತಲಾ 5 ಸಾವಿರ ರೂ. ವಿಧಿಸಿ ಆದೇಶಿಸಲಾಗಿದೆ.

ದಂಡದ ಮೊತ್ತ 1.20 ಲಕ್ಷ ರೂ.ಗಳನ್ನು ಮೃತ ನಾಸಿರ್ ಪತ್ನಿ ರಮ್ಲತ್ ಅವರಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿ ಮೃತರ ಪತ್ನಿ ಮತ್ತು ಫಿರ್ಯಾದಿದಾರ ಮುಸ್ತಫಾ ಅವರಿಗೆ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ - Rameswaram Cafe Blast Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.