ETV Bharat / state

ತೀರ್ಪು ಬಂದು ಆರು ವರ್ಷವಾದ್ರೂ ಅನುಷ್ಠಾನಗೊಳ್ಳದ ಮಹದಾಯಿ ಯೋಜನೆ: ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಗೆ ಜನರ ಹಿಡಿಶಾಪ

author img

By ETV Bharat Karnataka Team

Published : Feb 27, 2024, 7:09 PM IST

Mahadayi project  Supreme Court verdict  not implemented  ಮಹದಾಯಿ ಯೋಜನೆ  ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ
ಹೋರಾಟಗಾರರ ಹೇಳಿಕೆ

ತೀರ್ಪು ಬಂದು ಆರು ವರ್ಷವಾದ್ರೂ ಮಹದಾಯಿ ಯೋಜನೆ ಮಾತ್ರ ಇನ್ನು ಅನುಷ್ಠಾನಕ್ಕೆ ಬರಲಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಗೆ ಇಡೀ ಉತ್ತರ ಕರ್ನಾಟಕ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಹೋರಾಟಗಾರರ ಹೇಳಿಕೆ

ಬೆಳಗಾವಿ: ದೇವರು ವರ ಕೊಟ್ಟರು ಪೂಜಾರಿ ಕೊಡೊದಿಲ್ಲ ಎಂಬ ಮಾತಿಗೆ ಮಹದಾಯಿ ಯೋಜನೆ ನೆನೆಗುದಿಗೆ ಬಿದ್ದಿರುವುದೇ ಸಾಕ್ಷಿಯಾಗಿದೆ. ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿಯ ಕಳಸಾ ನಾಲಾದಲ್ಲಿ ಯೋಜನೆ ಸ್ಥಗಿತಗೊಂಡಿದೆ. ಆ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.

ಹೌದು, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಉತ್ತರಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಆಗಿದೆ. ಉತ್ತರ ಕರ್ನಾಟಕದ 4 ಜಿಲ್ಲೆ 13 ತಾಲೂಕಿಗೆ ನೀರು ಹಂಚುವ ಯೋಜನೆ ಇದಾಗಿದೆ. ಈ ಭಾಗದ ಜನರ ಹಲವು ದಶಕಗಳ ಕೂಗು, ಸಾಕಷ್ಟು ಹೋರಾಟ, ಉಪವಾಸ ಸತ್ಯಾಗ್ರಹ, ವಿಭಿನ್ನ ಚಳವಳಿ, ಅನೇಕ ಹೋರಾಟಗಾರರ ಜೀವ ಬಲಿ‌ ಕೊಟ್ಟರೂ ಆಳುವ ಸರ್ಕಾರಗಳು ಮಾತ್ರ ನಿರ್ಲಕ್ಷ್ಯ ಭಾವನೆ ತಾಳಿ ರಾಜಕೀಯ ದಾಳವಾಗಿ ಈ ಯೋಜನೆಯನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪಗಳಿವೆ. ಪ್ರತಿ ಚುನಾವಣೆ ಬಂದಾಗಲೂ ಮಹದಾಯಿ ಚುನಾವಣೆಯ ಅಸ್ತ್ರ ಆಗೋದು ಸಾಮಾನ್ಯವಾಗಿ ಬಿಟ್ಟಿದೆ.

ರಾಜಕೀಯ ಪಕ್ಷಗಳ ಬದ್ಧತೆ ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಸದ್ಯ ಇಡೀ ದೇಶ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದು, ರಾಜ್ಯದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕದ ಈ ನೀರಾವರಿ ಯೋಜನೆ ಮತ್ತೆ ಚರ್ಚೆಯ ವಿಷಯವಾಗಿದೆ. ರಾಜಕೀಯ ಕೆಸರೆರಚಾಟಕ್ಕೆ ದಾಳವಾಗಿರುವ ಕಳಸಾ ಬಂಡೂರಿ ಯೋಜನೆ ಕುರಿತು ಮಹದಾಯಿ ನ್ಯಾಯಾಧೀಕರಣದಿಂದ 2018ರ ಆಗಸ್ಟ್ 14 ರಂದು ತೀರ್ಪು ಪ್ರಕಟವಾಗಿದೆ. ತೀರ್ಪಿನಲ್ಲಿ 13.42 ಟಿಎಂಸಿ ನೀರು ರಾಜ್ಯಕ್ಕೆ ಹಂಚಿಕೆಯಾಗಿದ್ದು, ಕಳಸಾ- 1.72 ಟಿಎಂಸಿ, ಬಂಡೂರಿ ನಾಲಾದಿಂದ 2.18 ಟಿಎಂಸಿ ನೀರು ಹಂಚಿಕೆ ಆಗಿದೆ. ಕಳಸಾ ನಾಲಾಗೆ ಕಣಕುಂಬಿ ಬಳಿ ಈಗಾಗಲೇ 5 ಕಿ.ಮೀ. ಟನಲ್ ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ ಕಳಸಾ ನೀರು ಬಳಕೆಗೆ ಕಳಸಾ, ಹಲತಾರ ಡ್ಯಾಂ ನಿರ್ಮಾಣದ ಅವಶ್ಯಕತೆ ಇದೆ. ಡ್ಯಾಂ ನಿರ್ಮಾಣದ ಜಮೀನು ಅರಣ್ಯ ‌ಪ್ರದೇಶದ ವ್ಯಾಪ್ತಿಯಲ್ಲಿ ಇದೆ. ಹೀಗಾಗಿ ಕೇಂದ್ರ ‌ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ಸಿಕ್ಕಿಲ್ಲ. ಜತೆಗೆ ಗೋವಾ ಸರ್ಕಾರ ಪರಿಸರದ ನೆಪವೊಡ್ಡಿ ಪದೆ ಪದೇ ಅಡ್ಡಿ ಮಾಡುತ್ತಿದೆ.

Mahadayi project  Supreme Court verdict  not implemented  ಮಹದಾಯಿ ಯೋಜನೆ  ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ
ಆರು ವರ್ಷವಾದ್ರೂ ಅನುಷ್ಠಾನಕ್ಕೆ ಬಾರದ ಮಹದಾಯಿ ಯೋಜನೆ

ಇನ್ನು‌‌, 2022ರ ಡಿಸೆಂಬರ್ 29 ರಂದು ಕೇಂದ್ರ ಜಲ ಆಯೋಗ ಮಹದಾಯಿ ಯೋಜನೆ ಡಿಪಿಆರ್​ಗೆ ಅನುಮೋದನೆ ನೀಡಿದೆ. ಅನುಮೋದನೆ ನೀಡಿದರು ಮಹದಾಯಿ ಕಾಮಗಾರಿಗೆ ಟೈಗರ್ ಕಾರಿಡಾರ್ ಅನುಮತಿ ಸಿಕ್ಕಿಲ್ಲ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟದ ಕೆಲವು ಭಾಗ ಮಹದಾಯಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರಲಿದೆ. ಇದೇ ಭಾಗದಲ್ಲಿ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆ ನಡೆಯುತ್ತಿದೆ. ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದ್ರೆ ಯೋಜನೆಗೆ ಮತ್ತಷ್ಟು ಅಡ್ಡಿಯಾಗುವ ಸಾಧ್ಯತೆಗಳಿವೆ.

''ಕೋರ್ಟ್ ಆದೇಶವಾಗಿ 6 ವರ್ಷಗಳು ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ. ಸರ್ವಪಕ್ಷ ನಿಯೋಗದ ಮೂಲಕ ಈ ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಬೇಕಾದ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಹಿರಿಯ ಕನ್ನಡ ಹೋರಾಟಗಾರ ಮೆಹಬೂಬ್ ಮಕಾನದಾರ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಮಹದಾಯಿ, ಕಳಸಾ ಬಂಡೂರಿ ನಮ್ಮ ಪಾಲಿನ ವರದಾನ.. ಅದಕ್ಕಾಗಿ ಸಿಎಂ, ಡಿಸಿಎಂ ಮಾಡಿ ಶ್ರಮದಾನ.. ಉತ್ತರಕರ್ನಾಟಕ ಜನ ಎಂದರೆ ತಬ್ಬಲಿಗಳೇನು..? ಯಾಕೆ ನಿಮಗೆ ನಮ್ಮ ಬಗ್ಗೆ ತಾತ್ಸಾರ ಭಾವನೆ. ತೀರ್ಪು ಬಂದ ಬಳಿಕ ಪೇಡೆ ಹಂಚಿ ವಿಜಯೋತ್ಸವ ಮಾಡಿದೀರಿ. ಆದ್ರೆ ನೀರು ಮಾತ್ರ ಬರಲಿಲ್ಲ. ನೈಸರ್ಗಿಕವಾಗಿ ಬರುತ್ತಿದ್ದ ನೀರನ್ನು ತಡೆಹಿಡಿದಿದ್ದೀರಿ. ತೀರ್ಪು ಬಂದ ಬಳಿಕ ಯೋಜನೆ ಅನುಷ್ಠಾನಕ್ಕೆ ತರಲು ಏನು ಸಮಸ್ಯೆ..? ಗೋವಾ ಸರ್ಕಾರ ನಿರ್ಮಿಸಿರುವ ತಡೆಗೋಡೆ ತೆರವುಗೊಳಿಸಿ, ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ತನ್ನಿ'' ಎಂದು ಕೈ ಮುಗಿದು ಮನವಿ ಮಾಡಿಕೊಂಡರು.

ಹಿರಿಯ ಪತ್ರಕರ್ತ ರಾಮಚಂದ್ರ ಸುಣಗಾರ ಮಾತನಾಡಿ, ''ಈ ಹಿಂದೆ ಗೋವಾ, ಕರ್ನಾಟಕ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗಲೂ ಇಚ್ಛಾಶಕ್ತಿ ತೋರಲಿಲ್ಲ. ಈಗಿರುವ ಕಾಂಗ್ರೆಸ್ ಸರ್ಕಾರ ಸರ್ವಪಕ್ಷ ನಿಯೋಗ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು. ಭೀಕರ ಬರಗಾಲದಿಂದ ಉತ್ತರಕರ್ನಾಟಕ ಜನ ತೀವ್ರ ಸಂಕಷ್ಟದಲ್ಲಿದ್ದು, ನೀರಿಗಾಗಿ ಹಾಹಾಕಾರ ಏಳುವ ಸ್ಥಿತಿಯಿದೆ. ಈಗಲಾದ್ರೂ ರಾಜಕಾರಣಿಗಳು ತಮ್ಮ ಬದ್ಧತೆ ಪ್ರದರ್ಶಿಸಲಿ'' ಎಂದು ಆಗ್ರಹಿಸಿದರು.

ಒಟ್ಟಾರೆ ರಾಜಕೀಯ ಸುಳಿಗೆ ಸಿಲುಕಿದರೆ ಹೇಗೆ ಯೋಜನೆಗಳೆಲ್ಲಾ ವಿಳಂಬ ಆಗುತ್ತವೆ ಎಂಬುದಕ್ಕೆ ಕಳಸಾ-ಬಂಡೂರಿ ಯೋಜನೆ ತಾಜಾ ಉದಾಹರಣೆ ಆಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತ್ತೆ ಆಶ್ವಾಸನೆ ಜೊತೆ ಜನರ ಬಳಿ ಹೋಗಲು ಸಜ್ಜಾಗಿದ್ದಾರೆ. ಈಗಲಾದರೂ ನೆಪಗಳನ್ನು ಹೇಳದೆ ಈ ಭಾಗದ ಜನರ ಕೂಗಿಗೆ ಸ್ಪಂದಿಸಬೇಕಿದೆ.

ಓದಿ: ಕಳಸಾ ಬಂಡೂರಿ‌ ಹೋರಾಟ: ಪ್ರಹ್ಲಾದ್ ಜೋಶಿಗೆ ಘೇರಾವ್ ಹಾಕಿ ರೈತರಿಂದ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.