ETV Bharat / state

'ಕುಮಾರಸ್ವಾಮಿ ಈಗ ಜನರಿಗೆ ಊಟ ಹಾಕುತ್ತಿದ್ದಾರೆ, ಕೋವಿಡ್ ಸಮಯದಲ್ಲಿ ಏನೂ ಮಾಡಲಿಲ್ಲ' - D K Shivakumar

author img

By ETV Bharat Karnataka Team

Published : Apr 10, 2024, 4:38 PM IST

Updated : Apr 10, 2024, 6:10 PM IST

DCM DK Shivakumar spoke to the media.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ಕುಮಾರಸ್ವಾಮಿ ಈಗಲಾದರೂ ಮುಂದೆ ಬಂದು ಜನರಿಗೆ ಊಟ ಹಾಕುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಏನೂ ಮಾಡಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಸದಾಶಿವನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ತೋಟದಮನೆಯಲ್ಲಿ ಭೋಜನ ಕೂಟದ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣಾ ನೀತಿ ಸಂಹಿತೆ ಬಗ್ಗೆ ಚುನಾವಣಾ ಆಯೋಗ ತಲೆಕೆಡಿಸಿಕೊಳ್ಳಬೇಕು. ಆಯೋಗ ನಿಜವಾಗಲೂ ಕಾರ್ಯಪ್ರವೃತ್ತವಾಗಿದ್ದರೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಮಠ ಇಬ್ಭಾಗ ಮಾಡಿದವರು: ಇನ್ನು, ಮೈತ್ರಿ ಪಕ್ಷಗಳ ನಾಯಕರು ಆದಿಚುಂಚನಗಿರಿ ಮಠದ ಶ್ರೀಗಳನ್ನು ಭೇಟಿಯಾಗಿರುವ ವಿಚಾರಕ್ಕೆ, ಸ್ವಾಮೀಜಿಗಳು ಬುದ್ಧಿವಂತರಿದ್ದಾರೆ. ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ. ಜನತಾದಳದವರು ಮಠವನ್ನು ಇಬ್ಭಾಗ ಮಾಡಿರುವ ಬಗ್ಗೆ ಸ್ವಾಮೀಜಿಗಳಿಗೆ ಅರಿವಿದೆ. ನಮ್ಮ ಜನ ಕೂಡ ಇದನ್ನು ಗಮನಿಸುತ್ತಾರೆ ಎಂದು ಹೇಳಿದರು.

8 ಮಂದಿ ಒಕ್ಕಲಿಗರಿಗೆ ಲೋಕಸಭಾ ಟಿಕೆಟ್ ನೀಡಿದ್ದೇವೆ. ನಾನು ಡಿಸಿಎಂ ಮತ್ತು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾವೆಲ್ಲಾ ಸಮಾಜದ ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ತಯಾರಿದ್ದೇವೆ. ಭವಿಷ್ಯದ ಬಗೆಗಿನ ಮಾತುಗಳು ನಮಗೇಕೆ?.‌ ನಮ್ಮ ಸಮಾಜದವರು ದಡ್ಡರಲ್ಲ ಎಂದು ತಿಳಿಸಿದರು.

ಒಕ್ಕಲಿಗ ನಾಯಕರನ್ನು ಒಗ್ಗೂಡಿಸುತ್ತೇವೆ ಎಂಬ ಹೆಚ್‌ಡಿಕೆ ಹೇಳಿಕೆಗೆ, ಎಲ್ಲರೂ ಅವರವರ ಬದುಕು ನೋಡಿಕೊಳ್ಳುತ್ತಾರೆ. ನಾವು ಈಗಾಗಲೇ ಅಧಿಕಾರದಲ್ಲಿದ್ದೇವೆ. ಅದಾದ ನಂತರ ಮುಂದಿನ ಐದು ವರ್ಷವೂ ನಾವೇ ಇರುತ್ತೇವೆ. ಮುಂದೆ ನಾವು ಗೆಲ್ಲುವುದಿಲ್ಲ ಎಂದು ಈ ರೀತಿ ಹೇಳುತ್ತಿದ್ದಾರೆ. ನಮ್ಮಿಂದಾಗಿ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ಧಾಂತವನ್ನೇ ಅವರು ಮಾರಿಕೊಂಡಿದ್ದಾರೆ. ಹಾಗಾಗಿ ಅವರ ವಿಚಾರ ಬಿಡಿ. ಆದರೆ ದೇವೇಗೌಡರಿಗೆ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸುವ ಪರಿಸ್ಥಿತಿ ಬರಬಾರದಿತ್ತು. ಅವರ ಸ್ಥಿತಿ ನೋಡಿ ಬೇಸರವಾಗುತ್ತದೆ ಎಂದು ವ್ಯಂಗ್ಯವಾಡಿದರು.

ಮೈತ್ರಿ ಸರ್ಕಾರ ಬೀಳಿಸಿದವರು ಬಿಜೆಪಿಯವರಲ್ಲ ಕಾಂಗ್ರೆಸಿಗರು ಎಂಬ ಹೆಚ್‌ಡಿಕೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರು ವಿಶ್ವನಾಥ್, ನಾರಾಯಣ ಗೌಡರನ್ನು ಭೇಟಿ ಮಾಡಿದ್ದಾರೆ. ಯೋಗೇಶ್ವರ್, ಅಶ್ವತ್ಥ್ ನಾರಾಯಣ, ಯಡಿಯೂರಪ್ಪರನ್ನು ತಬ್ಬಾಡುತ್ತಿದ್ದಾರೆ. ಜನಕ್ಕೆ ಇದಕ್ಕಿಂತ ಸಾಕ್ಷಿ ಬೇರೇನು ಬೇಕು?. ಕುಮಾರಸ್ವಾಮಿ ಆಗ ಏನು ಮಾತನಾಡಿದ್ದರು ಎಂದು ಕೇಳಿದರು.

ನಾನು ಪಾದಯಾತ್ರೆ ಮಾಡಿದ್ದು ನಿಜವಲ್ಲವೇ?: ಮೇಕೆದಾಟು ಪಾದಯಾತ್ರೆ ವೇಳೆ ತೂರಾಡಿದರು ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರು ಏನಾದರೂ ಹೇಳಿಕೊಳ್ಳಲಿ. ಜನಕ್ಕೆ ಎಲ್ಲವೂ ಗೊತ್ತಿದೆ. ನಾನು ಪಾದಯಾತ್ರೆ ಮಾಡಿದ್ದೇನೆ ತಾನೆೇ, ಅವರೂ ಮಾಡಲಿ. ನಾನು ಪಾದಯಾತ್ರೆಯಲ್ಲಿ ನಡೆದು ಸುಸ್ತಾಗಿ ತೂರಾಡಿದ್ದೇನೆ ಅಷ್ಟೇ ಎಂದರು.

ಬೆಂಗಳೂರಿನ ಎಲ್ಲಾ ಕೆರೆಗಳಿಗೆ ಶುದ್ಧೀಕರಿಸಿದ ನೀರು: ಬೆಂಗಳೂರು ನಗರದಲ್ಲಿ ಎದುರಾಗಿರುವ ನೀರಿನ ಅಭಾವಕ್ಕೆ ಪರಿಹಾರವಾಗಿ ಮುಂದೆ ಇಲ್ಲಿನ ಎಲ್ಲಾ ಕೆರೆಗಳಿಗೆ ಶುದ್ಧೀಕರಿಸಿದ ನೀರು ತುಂಬಿಸಲು ಚಿಂತನೆ ನಡೆಸುತ್ತಿದ್ದೇವೆ. ಆ ಮೂಲಕ ಕೆರೆ ಉಳಿಸಿ ಅಂತರ್ಜಲ ಹೆಚ್ಚಿಸಲು ಮುಂದಾಗಿದ್ದೇವೆ. ಈ ಬಾರಿ 6,900 ಕೊಳವೆ ಬಾವಿ ಬತ್ತಿ ಹೋಗಿದ್ದು, ಈ ಪರಿಸ್ಥಿತಿ ಸುಧಾರಿಸಬೇಕಿದೆ. ಮುಂದಿನ ಕೆಲವು ದಿನಗಳಲ್ಲಿ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದರು.

ರಾಮನಗರದಲ್ಲಿ ಗಿಫ್ಟ್ ಕೂಪನ್ ಹಂಚಲಾಗುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, ನಾನು ಗಿಫ್ಟ್, ಚಾಕೊಲೆಟ್ ಹಂಚಿದ್ದೇನೆಯೇ, ಬಿಟ್ಟೆನೇ ಆ ವಿಚಾರ ಬೇರೆ. ಅವರುಗಳು ಏನೂ ಮಾಡಿಲ್ಲವೇ? ಎಂದರು.

ಇದನ್ನೂಓದಿ: ದಿಂಗಾಲೇಶ್ವರ್​​ ಶ್ರೀ ಸ್ಪರ್ಧೆ, ಕಾಂಗ್ರೆಸ್​​​ ಬೆಂಬಲ ವಿಚಾರದ ಚರ್ಚೆ: ಸಚಿವ ಸಂತೋಷ್​ ಲಾಡ್​ ಹೇಳಿದ್ದೇನು? - Santosh lad

Last Updated :Apr 10, 2024, 6:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.