ETV Bharat / state

ಧಾರವಾಡ ಲೋಕಸಭೆ ಕ್ಷೇತ್ರ: ಕೈ ಟಿಕೆಟ್​ಗಾಗಿ ಪೈಪೋಟಿ, ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ

author img

By ETV Bharat Karnataka Team

Published : Feb 21, 2024, 7:29 PM IST

Congress ticket aspirants
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು

ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ವೀಕ್ಷಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಸಭೆ ನಡೆಸಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕೆಪಿಸಿಸಿಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಬಳಿಕ ಅರ್ಧ ಡಜನ್​ಗಿಂತ ಹೆಚ್ಚು ಕಾಂಗ್ರೆಸ್ ಹೊಸಮುಖದ ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ‌ ಉಳಿದಿವೆ. ಇದರ ಮಧ್ಯೆ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್​ಗೆ ತೀವ್ರ ಪೈಪೋಟಿ ಶುರುವಾಗಿದ್ದು, ಲೋಕಸಭೆ ಟಿಕೆಟ್‌ಗಾಗಿ ಆಕಾಂಕ್ಷಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಅದರಲ್ಲಿಯೂ ಕೆಪಿಸಿಸಿ ಅಧ್ಯಕ್ಷ ಡಿ‌ ಕೆ‌ ಶಿವಕುಮಾರ್ ಅವರು ಹೊಸ ಮುಖ, ಯುವಕರು, ವಾಕ್​ಚಾತುರ್ಯ ಗಮನದಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡಲಾಗುವುದೆಂದು ಇತ್ತೀಚೆಗೆ ಹೇಳಿದ್ದರು. ಇದರನ್ವಯ ಧಾರವಾಡ ಜಿಲ್ಲೆಯಲ್ಲಿ ಲೋಕಸಭೆ ಟಿಕೆಟ್​ಗಾಗಿ ಕಾಂಗ್ರೆಸ್​ ಯುವಕರ ಪಡೆಯೊಳಗೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ವೀಕ್ಷಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಭೆ ನಡೆಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕೆಪಿಸಿಸಿಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಇನ್ನಷ್ಟು ಆಕಾಂಕ್ಷಿಗಳಲ್ಲಿ ಪೈಪೋಟಿ ಶುರುವಾಗಿದೆ.

ಆಕಾಂಕ್ಷಿಗಳು ಯಾರು?, ಅನಿಲ್ ಕುಮಾರ ಪಾಟೀಲ್, ಶಾಕಿರ್​ ಸನದಿ, ವಿನೋದ ಅಸೂಟಿ, ರಜತ್ ಉಳ್ಳಾಗಡ್ಡಿಮಠ, ರಾಜಶೇಖರ ಮೆಣಸಿನಕಾಯಿ, ಲೋಹಿತ ನಾಯ್ಕರ್, ಶರಣಪ್ಪ‌ ಕೊಟಗಿ ಸೇರಿದಂತೆ ಅರ್ಧ ಡಜನ್​ಗಿಂತ ಹೆಚ್ಚು ಕಾಂಗ್ರೆಸ್ ಹೊಸಮುಖಗಳು ಲೋಕಸಭೆ ಟಿಕೆಟ್​ಗಾಗಿ ಲಾಬಿ ಶುರು ಮಾಡಿವೆ.

ಆಕಾಂಕ್ಷಿ ಅಭ್ಯರ್ಥಿಗಳ ಸಾಮರ್ಥ್ಯ ಏನು: ಒಬ್ಬೊಬ್ಬ ಅಭ್ಯರ್ಥಿಯು ಒಂದೊಂದು ಸಾಮರ್ಥ್ಯ ಹೊಂದಿದ್ದಾರೆ.‌ ಅನಿಲಕುಮಾರ ಪಾಟೀಲ್ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.‌ ಇದಲ್ಲದೇ ಈ‌ ಹಿಂದೆ ಅವರು ಹುಬ್ಬಳ್ಳಿ- ಧಾರವಾಡ ಮಹಾನಗರ‌ ಪಾಲಿಕೆ ಮೇಯರ್ ಆಗಿ ಕೆಲಸ ಮಾಡಿರುವ ಅನುಭವ ಸಹ ಇದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನಾತ್ಮಕ ಕೆಲಸ ಮಾಡಿದ್ದಾರೆ.

ಯುವನಾಯಕ ಶಾಕಿರ್​ ಸನದಿ ಸಹ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಇವರು ಹಿಂದೆ ಮೂರು ಬಾರಿ ಧಾರವಾಡ ಸಂಸದರಾಗಿದ್ದ ಪ್ರೊ. ಐ ಜಿ ಸನದಿಯವರ ಪುತ್ರ. ಹಲವು ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ಕೆಪಿಸಿಸಿ ‌ಪ್ರಧಾನ ಕಾರ್ಯದರ್ಶಿ ಆಗಿರುವ ಅವರಿಗೆ ದೆಹಲಿ ಹೈಕಮಾಂಡ್​ ಮಟ್ಟದಲ್ಲಿ ಉತ್ತಮ ಸಂಪರ್ಕ ಇದೆ.

ರಜತ್ ಉಳ್ಳಾಗಡ್ಡಿಮಠ ಅವರು ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯನಾಗಿದ್ದು, ಪ್ರಸ್ತುತ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ‌ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಟಿಕೆಟ್​ಗಾಗಿ ಭಾರಿ ಪೈಪೋಟಿ ‌ನಡೆಸಿದ್ದರು. ಆದ್ರೆ ಕೊನೆ ಗಳಿಗೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಲಭಿಸಿತ್ತು.

ವಿನೋದ ಅಸೂಟಿ, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಟಿಕೆಟ್ ರೇಸ್‌ನಲ್ಲಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನವಲಗುಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷದ ನಾಯಕರ ‌ಮಾತಿಗೆ ಮಣಿದು ಎನ್ ಹೆಚ್ ಕೋನರೆಡ್ಡಿ ಗೆಲುವಿಗೆ ಶ್ರಮಿಸಿದ್ದರು.

ಇನ್ನುಳಿದಂತೆ ಮಾಜಿ ಸಂಸದ ಡಿ‌ ಕೆ ನಾಯ್ಕರ್ ಪುತ್ರ ಲೋಹಿತ್ ನಾಯ್ಕರ್, ರಾಜಶೇಖರ ಮೆಣಸಿನಕಾಯಿ, ಶರಣಪ್ಪ ಕೊಟಗಿ ಅವರ ಹೆಸರುಗಳು ಸಹ ಕೇಳಿ ಬರುತ್ತಿವೆ. ಆದ್ರೆ ಇವರೆಲ್ಲ ನಾಯಕರು ತಮ್ಮ ತಮ್ಮ ವೈಯಕ್ತಿಕ ವರ್ಚಸ್ಸು ಹಾಗೂ ತಮ್ಮ ತಮ್ಮ ನಾಯಕರ ಮೂಲಕ ಟಿಕೆಟ್​ಗಾಗಿ ಪ್ರಯತ್ನಿಸುತ್ತಿದ್ದಾರೆ. ಆದ್ರೆ ಅವರಲ್ಲಿ ಯಾರಿಗಾದ್ರೂ ಒಬ್ಬರಿಗೆ ಟಿಕೆಟ್ ಸಿಗುತ್ತೋ‌ ಅಥವಾ ಅಚ್ಚರಿ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡುತ್ತೋ‌ ಎನ್ನುವ ಕುತೂಹಲ ‌ಕಾಂಗ್ರೆಸ್ ವಲಯದಲ್ಲಿದೆ.

ಇದನ್ನೂಓದಿ:ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಮತದಾರರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕೃತಘ್ಞತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.