ETV Bharat / state

ಧಾರವಾಡ: ಹಣ ಪಡೆದು ಗ್ರಾಹಕರಿಗೆ ಸೈಟ್ ನೀಡದ ಡೆವಲಪರ್ಸ್​ಗೆ ಗ್ರಾಹಕರ ಪರಿಹಾರ ಆಯೋಗದಿಂದ ದಂಡ

author img

By ETV Bharat Karnataka Team

Published : Feb 28, 2024, 7:56 AM IST

Consumer Compensation Commission
ಗ್ರಾಹಕರ ಪರಿಹಾರ ಆಯೋಗ

ಗ್ರಾಹಕರಿಬ್ಬರಿಂದ ಸೈಟ್​ ಖರೀದಿಗೆ ಹಣ ಪಡೆದುಕೊಂಡು 12 ವರ್ಷಗಳಾದರು ಸೈಟ್​ ನೀಡದೇ ಪಾವತಿಸಿದ ಹಣವನ್ನು ಹಿಂದಿರುಗಿಸದೇ ಇದ್ದ ಸೈಟ್ ಡೆವಲಪರ್ಸ್​ಗೆ ಧಾರವಾಡ ಗ್ರಾಹಕರ ಪರಿಹಾರ ಆಯೋಗ ತೀರ್ಪು ನೀಡಿ ದಂಡ ವಿಧಿಸಿದೆ.

ಧಾರವಾಡ: ಗ್ರಾಹಕರಿಗೆ ಸೈಟ್​ ನೀಡದ ಹುಬ್ಬಳ್ಳಿಯ ಆಶೀರ್ವಾದ ಡೆವಲಪರ್ಸ್​ಗೆ 5 ಲಕ್ಷದ 62 ಸಾವಿರ ರೂ. ದಂಡ ವಿಧಿಸಿ ಗ್ರಾಹಕರ ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ಆದೇಶಿಸಿದೆ.

ಹಾವೇರಿ ಜಿಲ್ಲಾ ಗುಡ್ಡದ ಬೇವಿನಹಳ್ಳಿ ನಿವಾಸಿ ಸುರೇಶ ದೊಡ್ಡನಾಗಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಗುಡ್ಡದೇನಹಳ್ಳಿ ನಿವಾಸಿ ಚಂದ್ರಶೇಖರ ಮಹೇಶಪ್ಪ ಎಂಬುವವರು 2010ರಲ್ಲಿ ಆಶೀರ್ವಾದ ಡೆವಲಪರ್ಸ್ ಅವರು ಧಾರವಾಡದ ಸತ್ತೂರು ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಲೇಔಟ್​ನಲ್ಲಿ ಸೈಟಗಳನ್ನು ಖರೀದಿಸಲು ಇಚ್ಛಿಸಿದ್ದರು.

ಅದರಂತೆ ಇಬ್ಬರು ದೂರುದಾರರು ತಮ್ಮ ಸೈಟಿಗೆ ತಗಲುವ ಎಲ್ಲ ಹಣವನ್ನು ಡೆವಲಪರ್ಸ್​ ಪಾಲುದಾರರಿಗೆ 2010ರಲ್ಲಿ ಒಟ್ಟು ರೂ.4,41,560 ಹಣವನ್ನು ಸಂದಾಯ ಮಾಡಿದ್ದರು. ಆಗ ಇಬ್ಬರು ರಿಯಲ್​ ಎಸ್ಟೇಟ್​​ನವರು ಜಮೀನಿನ ಖರೀದಿ ಪತ್ರ ನೋಂದಾಯಿಸಿ ಕೊಡುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಅವರು ದೂರುದಾರರಿಗೆ ಖರೀದಿ ಕರಾರು ಪತ್ರಗಳನ್ನು ಬರೆದುಕೊಟ್ಟಿದ್ದರು. ಮಾತುಕತೆಯಾಗಿ ಸುಮಾರು 12 ವರ್ಷ ಕಳೆದರೂ ರಿಯಲ್​ ಎಸ್ಟೇಟ್​​ನವರು ಲೇಔಟ್​ ನಿರ್ಮಾಣ ಮಾಡಿಲ್ಲ ಮತ್ತು ತಮಗೆ ಪ್ಲಾಟ್​ ಖರೀದಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ದೂರುದಾರರು ತಮ್ಮ ಹಣ ವಾಪಸ್​ ನೀಡುವಂತೆ ವಿನಂತಿಸಿದ್ದರು.

ಆದರೆ ಇವರ ಮನವಿಗೆ ಡೆವಲಪರ್ಸ್​ ಸೊಪ್ಪು ಹಾಕಿರಲಿಲ್ಲ. ಇದರಿಂದ ದೂರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಿದೆ ಎಂದು ಆಶೀರ್ವಾದ ಡೆವಲಪರ್ಸ್​ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.14-08-2023 ರಂದು ದೂರು ಸಲ್ಲಿಸಿದ್ದರು.

ದೂರುಗಳ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ ಕೂಲಂಕಷವಾಗಿ ವಿಚಾರಣೆ ನಡೆಸಿದರು. '2010 ರಲ್ಲಿ ಇಬ್ಬರು ದೂರುದಾರರಿಂದ ಸೈಟ್​ ಖರೀದಿ ಬೆಲೆ ಒಟ್ಟು ರೂ.4,41,560 ಹಣ ರಿಯಲ್​ ಎಸ್ಟೇಟ್​​ನವರು ಪಡೆದುಕೊಂಡಿದ್ದಾರೆ. ಆ ಬಗ್ಗೆ ಅವರು ದೂರುದಾರರಿಗೆ ಖರೀದಿ ಕರಾರು ಪತ್ರ ಬರೆದು ಕೂಡಕೊಟ್ಟಿದ್ದಾರೆ. ಆದರೆ ನಿಗದಿತ ಅವಧಿಯಲ್ಲಿ ಲೇಔಟ್​​ ನಿರ್ಮಾಣದ ಕೆಲಸ ಮುಗಿಸಿ ಪ್ಲಾಟ್​ ಖರೀದಿ ಮಾಡಿಕೊಡುವುದಾಗಿ ದೂರುದಾರರಿಗೆ ಭರವಸೆ ಕೊಟ್ಟಿದ್ದರು. ಆದರೆ 12 ವರ್ಷ ಕಳೆದರೂ ಡೆವಲಪರ್ಸ್​ ಲೇಔಟ್​ ನಿರ್ಮಾಣ ಮುಗಿಸಿಲ್ಲ. ದೂರುದಾರರಿಗೆ ಪ್ಲಾಟಗಳನ್ನು ಖರೀದಿ ಮಾಡಿಕೊಡದೇ ಅವರ ಹಣವನ್ನು ತಮ್ಮ ಅಭಿವೃದ್ಧಿಯ ಕೆಲಸಕ್ಕೆ ಉಪಯೋಗಿಸಿಕೊಂಡಿರುವುದು ಸ್ಪಷ್ಟವಾಗಿ ರುಜುವಾತು ಆಗಿದೆ' ಎಂದು ಆಯೋಗ ಅಭಿಪ್ರಾಯಪಟ್ಟು ಆದೇಶ ನೀಡಿದೆ.

ಜತೆಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರು ಸಂದಾಯ ಮಾಡಿದ ರೂ.4,41,560 ಮತ್ತು ಅದರ ಮೇಲೆ ಶೇ.8% ರಂತೆ ಬಡ್ಡಿ ಕೂಡ ಪಾವತಿ ಮಾಡುವಂತೆ ಡೆವಲಪರ್ಸ್​ಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ತಲಾ ರೂ.50 ಸಾವಿರ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಆಶೀರ್ವಾದ ಡೆವಲಪರ್ಸ್ ಮತ್ತು ಅದರ ಪಾಲುದಾರರಿಗೆ ಆಯೋಗ ನಿರ್ದೇಶಿಸಿದೆ.

ಇದನ್ನೂ ಓದಿ: ಪಾಕ್ ಪರ ಘೋಷಣೆ ಆರೋಪ: ಸರ್ಕಾರ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.