ETV Bharat / state

ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಆಹ್ವಾನ ಬಂದಿದ್ದು ನಿಜ, ಸ್ಪರ್ಧೆಗೆ ನಿರಾಕರಿಸಿದ್ದೆ: ಸಿ ಟಿ ರವಿ ಸ್ಪಷ್ಟನೆ - CT Ravi Clarification

author img

By ETV Bharat Karnataka Team

Published : Mar 25, 2024, 5:24 PM IST

Updated : Mar 25, 2024, 7:05 PM IST

ಸಿಟಿ ರವಿ ಸ್ಪಷ್ಟನೆ
ಸಿಟಿ ರವಿ ಸ್ಪಷ್ಟನೆ

ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಆಹ್ವಾನ ಬಂದಿದ್ದು ನಿಜ. ಆದರೆ, ಸ್ಪರ್ಧೆಗೆ ನಿರಾಕರಿಸಿದ್ದೆ ಎಂದು ಸಿ ಟಿ ರವಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಆಹ್ವಾನ ಬಂದಿದ್ದು ನಿಜ. ಆದರೆ, ಸ್ಥಳೀಯರಿಗೆ ಅವಕಾಶ ನೀಡಿ ಎಂದಿದ್ದೆ. ತಾವು ಸ್ಥಳೀಯವಾಗಿಯೂ ಸಾಕಷ್ಟು ಆಕಾಂಕ್ಷಿಗಳಿದ್ದರೂ ಕೂಡ ಮಾಜಿ ಸಚಿವ ಸುಧಾಕರ್ ಅವರಿ​ಗೆ ಟಿಕೆಟ್ ಸಿಕ್ಕಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ನನ್ನ ಹೆಸರು ಕೇಳಿಬಂದಿದ್ದ ವಿಚಾರ ಸತ್ಯ. ನನ್ನನ್ನ ಚಿಕ್ಕಬಳ್ಳಾಪುರದಲ್ಲಿ ನಿಲ್ಲಿ ಅಂತ ಕೇಳಿದ್ದರು. ಆದರೆ, ನಾನು ನಿಲ್ಲಲ್ಲ ಅಂತ ಹೇಳಿದ್ದೆ. ಹಾಗಾಗಿ, ಈಗ ನನ್ನ ಸ್ಪರ್ಧೆಯ ವಿಚಾರದ ಪ್ರಶ್ನೆಯೇ ಬರಲ್ಲ. ಚಿಕ್ಕಬಳ್ಳಾಪುರದಲ್ಲಿ ಸ್ಥಳೀಯರನ್ನು ಆರಿಸಿ ಅಂತ ಹೇಳಿದ್ದೆ. ಸುಧಾಕರ್ ಹಾಗೂ ಅಲೋಕ್ ವಿಶ್ವನಾಥ್ ಸೇರಿದಂತೆ ಅನೇಕರು ಆಕಾಂಕ್ಷಿಗಳಿದ್ದರು. ಆದರೆ, ಸುಧಾಕರ್​ಗೆ ಪಕ್ಷ ಟಿಕೆಟ್ ನೀಡಿದೆ. ಈಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸಿಗರು ಹತಾಶರಾಗಿದ್ದಾರೆ. ತಮ್ಮ ಸ್ಥಾನದ ಅರಿವು ಇಲ್ಲದೇ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಬಿಜೆಪಿ ಮನೆ ಹಾಳಾಗಲಿ ಅಂದಿದ್ದಾರೆ. ಮನೆ ಹಾಳು ಮಾಡುವ ಮನಸ್ಥಿತಿ ಇರೋರು ದೇಶ ಹಾಳು ಮಾಡ್ತಾರೆ. 47 ಕೋಟಿ ಜನ ಬಿಜೆಪಿಗೆ ಮತ ಹಾಕಿದ್ದಾರೆ. ಅಷ್ಟು ಜನರ ಮನೆ ಹಾಳಾಗಲಿ ಅಂತಾರಾ? ದೇಶ ಹಾಳಾಗಲಿ ಅಂತಾರಾ? ಈ ಮನಸ್ಥಿತಿಯಿಂದ ಕಾಂಗ್ರೆಸ್ ಹೊರಗೆ ಬರದಿದ್ದರೆ ಅವರು ಉದ್ಧಾರ ಆಗಲ್ಲ. ಕಾಂಗ್ರೆಸಿಗರು ಬುದ್ಧಿ ಭ್ರಮಣೆ ಆದವರಂತೆ ಮಾತನಾಡುತ್ತಿದ್ದಾರೆ. ಮನೆ ಹಾಳರು, ದೇಶ ಹಾಳು ಮಾಡೋರು ಇಬ್ಬರೂ ಒಂದೇ ಎಂದ ಸಿ ಟಿ ರವಿ, ಇದೇ ವೇಳೆ ಮೋದಿ ಮೋದಿ ಅನ್ನೋರಿಗೆ ಕಪಾಳಮೋಕ್ಷ ಮಾಡಿ ಅನ್ನೋ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಶಿವರಾಜ್ ತಂಗಡಗಿ ಸಂಸ್ಕೃತಿ ಏನು ಅನ್ನೋದೇ ಗೊತ್ತಿಲ್ಲ, ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆ ಕೊಟ್ಟಿದ್ದಾರೆ. ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರ. ತಂಗಡಗಿಗೆ ಧೈರ್ಯ ಇದ್ರೆ ಹೊಡಿ ಅಂತ ಹೇಳೋಣ ಅಂತ ಇದ್ದೆ. ಆದರೆ, ಹಾಗೆ ನಾನು ಮಾತನಾಡಲ್ಲ. ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಪಮಾನ, ಯೋಗ್ಯತೆ ಇದ್ದವರು, ಸಿಎಂ‌ ಆದವರು ಸಂಪುಟದಲ್ಲಿ ಇಂತಹ ವ್ಯಕ್ತಿಯನ್ನು ಇಟ್ಟುಕೊಳ್ಳಲ್ಲ ಎಂದರು.

ಇದನ್ನೂ ಓದಿ: ಅಸಮಾಧಾನಿತರ ಸಭೆಗೆ ರೇಣುಕಾಚಾರ್ಯ, ರವೀಂದ್ರನಾಥ್ ಗೈರು: ನಾಳೆ ದಾವಣಗೆರೆಗೆ ತೆರಳಿ ಸಂಧಾನ ಸಭೆ ನಡೆಸಲು ಬಿಎಸ್​ವೈ ನಿರ್ಧಾರ - BS Yeddyurappa Meeting

Last Updated :Mar 25, 2024, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.