ETV Bharat / state

17 ಅಭ್ಯರ್ಥಿಗಳ 2ನೇ ಪಟ್ಟಿ ಅಂತಿಮ, ಉಳಿದ ಕ್ಷೇತ್ರಗಳ ಬಗ್ಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಚರ್ಚೆ: ಡಿ.ಕೆ.ಶಿವಕುಮಾರ್

author img

By ETV Bharat Karnataka Team

Published : Mar 20, 2024, 10:54 PM IST

ಇಡೀ ದೇಶದಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಐವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು ಶೇ 50ರಷ್ಟು ಯುವಕರಿಗೆ ಅವಕಾಶ ನೀಡಿದ್ದೇವೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಇತಿಹಾಸದಲ್ಲಿ ದೊಡ್ಡ ಬದಲಾವಣೆ. ನಾವು ವಿದ್ಯಾವಂತ ಯುವಕರಿಗೆ ಅವಕಾಶ ನೀಡಿದ್ದೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

DCM DK Sivakumar
ದೆಹಲಿಯಲ್ಲಿ ಸಿಇಸಿ ಸಭೆ ಬಳಿಕ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಡಿ ಕೆ ಶಿವಕುಮಾರ್ ಚರ್ಚಿಸಿದರು.

ಬೆಂಗಳೂರು/ನವದೆಹಲಿ: 17 ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಅಂತಿಮವಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ದೆಹಲಿಯಲ್ಲಿ ಇಂದು ನಡೆದ ಸಿಇಸಿ ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಂತಿಮ ನಾಲ್ಕು ಕ್ಷೇತ್ರಗಳಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಬೇಕು. ನಾಳೆ, ಈ ಕ್ಷೇತ್ರಗಳ ಸ್ಥಳೀಯ ನಾಯಕರ ಸಭೆ ಕರೆಯಲಾಗಿದೆ. ನಾಡಿದ್ದು ಜೂಮ್ ಮೂಲಕ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಕೋಲಾರ ನಾಯಕರ ಭೇಟಿ ಬಗ್ಗೆ ಕೇಳಿದಾಗ, ರಾಜಕೀಯವಾಗಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪಕ್ಷ ಹೇಳಿದಂತೆ ಎಲ್ಲರೂ ಕೇಳುತ್ತಾರೆ" ಎಂದರು. ಬಾಗಲಕೋಟೆ ಟಿಕೆಟ್ ಸಿಗದ ಕಾರಣ ವೀಣಾ ಕಾಶಪ್ಪನವರ್ ಕಣ್ಣೀರು ಹಾಕಿರುವ ಬಗ್ಗೆ ಕೇಳಿದಾಗ, ಉಸ್ತುವಾರಿ ಸಚಿವರುಗಳು ಯಾರ ಹೆಸರನ್ನು ಸಲಹೆ ನೀಡಿದ್ದರೋ ಅವರ ಎಲ್ಲ ಹೆಸರುಗಳು ಸಿಇಸಿ ಸಭೆಯಲ್ಲಿ ಚರ್ಚೆ ಆಗಿದೆ" ಎಂದು ತಿಳಿಸಿದರು.

ಶೇ 50ರಷ್ಟು ಟಿಕೆಟ್ ಯುವಕರಿಗೆ ನೀಡಿದ್ದೇವೆ: ಸಚಿವರ ಕುಟುಂಬದವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಕೇಳಿದಾಗ, ರಾಜಕೀಯ ವ್ಯವಸ್ಥೆಯಲ್ಲಿ ಕೆಲಸ ಮಾಡಿರುವವರಿಗೂ ಹೊಸ ಅಭ್ಯರ್ಥಿಗಳನ್ನು ತರುವುದಕ್ಕೂ ವ್ಯತ್ಯಾಸವಿದೆ. ಇಡೀ ದೇಶದಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಐವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು ಶೇ 50ರಷ್ಟು ಯುವಕರಿಗೆ ಅವಕಾಶ ನೀಡಿದ್ದೇವೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಇತಿಹಾಸದಲ್ಲಿ ಇದು ದೊಡ್ಡ ಬದಲಾವಣೆ. ನಾವು ವಿದ್ಯಾವಂತ ಯುವಕರಿಗೆ ಅವಕಾಶ ನೀಡಿದ್ದೇವೆ. ಎಲ್ಲರೂ ಸಮರ್ಥರಿದ್ದು, ಎಲ್ಲರ ಮೇಲೂ ಹೊಣೆಗಾರಿಕೆ ಇದೆ" ಎಂದು ಹೇಳಿದರು.

ಸದಾನಂದ ಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಬಗ್ಗೆ ಕೇಳಿದಾಗ, "ಆ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ. ಬೇರೆ ಪಕ್ಷಗಳ ಬಗ್ಗೆ ಮಾತನಾಡಿಲ್ಲ. ಬಿಜೆಪಿಯಲ್ಲಿ ಅನೇಕರಿಗೆ ಅನ್ಯಾಯವಾಗಿದೆ ಎಂದು ಮಾಧ್ಯಮಗಳು ತೋರಿಸುತ್ತಿವೆ. ಮುಂದೆ ಕಾಲ ಉತ್ತರಿಸುತ್ತದೆ" ಎಂದರು.

ಹಳೇ ಫೋಟೋ ಇಟ್ಟುಕೊಂಡು ಮಾತನಾಡುತ್ತಿದ್ದಾರೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಕ್ಕರ್ ಹಂಚಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ನಾವು ಹಬ್ಬ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಜನರಿಗೆ ಅನೇಕ ಬಾರಿ ಸಹಾಯ ಮಾಡಿದ್ದೇವೆ. ಹಳೆಯ ಫೋಟೋ ಇಟ್ಟುಕೊಂಡು ಈಗ ನೀಡುತ್ತಿರಬಹುದು. ಅವರು ಬಹಳ ಪ್ರಾಮಾಣಿಕರು. ನಾನು ನನ್ನ ಮಗಳ ಮದುವೆ ಸಂದರ್ಭದಲ್ಲಿ ಎಲ್ಲರಿಗೂ ಸೀರೆ ಬಟ್ಟೆ ಕೊಟ್ಟಿದ್ದೇನೆ.

ಕನಕೊತ್ಸವ ಮಾಡಿದಾಗ ಸಿಹಿ ಹಂಚಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉಡುಗೊರೆ ನೀಡಿದ್ದೇವೆ. ಕೋವಿಡ್ ಸಮಯದಲ್ಲಿ ಆಹಾರ ಕಿಟ್ ನೀಡಿದ್ದೇವೆ. ಜನರಿಗೆ ನಾವು ಅನೇಕ ಬಾರಿ ಸಹಾಯ ಮಾಡಿದ್ದೇವೆ. ಚುನಾವಣಾ ನೀತಿ ಸಂಹಿತೆಗೂ ಮುನ್ನ ರಂಜಾನ್ ಹಬ್ಬದ ಸಂದರ್ಭದಲ್ಲಿ ನಾವು ಉಡುಗೊರೆ ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು. ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಕೇಳಿದಾಗ, ಅದು ಅವರ ಪಕ್ಷದ ತೀರ್ಮಾನ. ಅವರು ಎಲ್ಲಾದರೂ ಯಾವ ಪಕ್ಷದ ಚಿಹ್ನೆಯಿಂದಾದರೂ ನಿಲ್ಲಲಿ ಎಂದರು.

ಬಿಜೆಪಿ ಮೆಚ್ಚಿಸಲು ಕುಮಾರಸ್ವಾಮಿ ನನ್ನ ಬಗ್ಗೆ ಮಾತಾಡುತ್ತಿದ್ದಾರೆ: ಡಿ ಕೆ ಸಹೋದರರು ವಿಷ ಹಾಕಿದ್ದಾರೆ, ಸರ್ಕಾರ ಬೀಳುವುದಕ್ಕೆ ಅವರೇ ಕಾರಣ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ಸರ್ಕಾರ ಕೆಡವಿದವರಲ್ಲಿ ನನ್ನ ಪಾತ್ರ ಏನಾದರೂ ಇದ್ದರೆ ಆ ದೇವರು, ಮಂಜುನಾಥ ನನಗೆ ಶಿಕ್ಷೆ ನೀಡಲಿದ್ದಾರೆ.

ನನಗೂ ಅವರಿಗೂ ಅನೇಕ ಭಿನ್ನಾಭಿಪ್ರಾಯ ಇದ್ದರೂ ಹೈಕಮಾಂಡ್ ಸೂಚನೆ ಮೇರೆಗೆ ಸದನದಲ್ಲಿ ಅವರ ಬೆನ್ನಿಗೆ ನಿಂತು ಒಗ್ಗಟ್ಟಾಗಿ ನಿಂತಿದ್ದೇನೆ. ಇದು ರಾಜ್ಯದ ಜನರಿಗೂ ಗೊತ್ತು. ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಮರುದಿನ ಬಿಜೆಪಿ ನಾಯಕರ ಜತೆ ಚರ್ಚೆ ಮಾಡಿದ್ದಾರೆ. ಈಗ ಏನಾದರೂ ಹೇಳಬೇಕಲ್ಲ ಅದಕ್ಕೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಮೇಲೆ ಕೋಪ ತೋರಿಸಿ ಬಿಜೆಪಿ ಅವರಿಗೆ ಖುಷಿ ಪಡಿಸುವುದಾದರೆ ಮಾಡಲಿ. ನನ್ನ ಅಭ್ಯಂತರವಿಲ್ಲ. ಅವರಿಗೆ ಒಳ್ಳೆಯದಾಗಲಿ. ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಹೇಳಿದರು.

ಇದನ್ನೂಓದಿ:ರಾಜ್ಯದಲ್ಲಿ ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡ್ತಿದಿಯಾ?: ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.