ETV Bharat / state

ಮೋದಿ ಕಾಂಗ್ರೆಸ್​ಗೆ ಬೈದಷ್ಟು ಒಳ್ಳೆಯದಾಗುತ್ತದೆ: ಮಲ್ಲಿಕಾರ್ಜುನ ಖರ್ಗೆ - Mallikarjuna kharge

author img

By ETV Bharat Karnataka Team

Published : Apr 30, 2024, 7:54 AM IST

ಮೋದಿ ಕಾಂಗ್ರೆಸ್​ಗೆ ಬೈದಷ್ಟು ಒಳ್ಳೆಯದಾಗುತ್ತದೆ: ಮಲ್ಲಿಕಾರ್ಜುನ ಖರ್ಗೆ
ಮೋದಿ ಕಾಂಗ್ರೆಸ್​ಗೆ ಬೈದಷ್ಟು ಒಳ್ಳೆಯದಾಗುತ್ತದೆ: ಮಲ್ಲಿಕಾರ್ಜುನ ಖರ್ಗೆ

ಸೇಡಂನಲ್ಲಿ ನಡೆದ ಮತಯಾಚನೆ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಹಾಗೂ ನಾಯಕರನ್ನು ಬೈಯುವುದೇ ಕೆಲಸ ಮಾಡಿಕೊಂಡಿದ್ದಾರೆ. ಅವರು ಬೈದಷ್ಟು ನಮಗೆ ಒಳ್ಳೆಯದಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸೋಮವಾರ ಸೇಡಂ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಹಾಗೂ ನನಗೆ ಬೈಯುತ್ತಲೇ ಇರುತ್ತಾರೆ. ನಮಗೆ ಬೈಯುವ ಬದಲು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಮೋದಿ ವಿವರಿಸಲಿ ಎಂದರು.

ಆರ್ಟಿಕಲ್ 371 (J) ಜಾರಿಗೆ ತರಲು 330 ಸದಸ್ಯರ ಬೆಂಬಲ ಬೇಕಾಗಿತ್ತು. ನಾನು ಎಲ್ಲ ಸದಸ್ಯರ ಮನೆಗೆ ವೈಯಕ್ತಿಕ ಭೇಟಿ ನೀಡಿ ಅವರ ಬೆಂಬಲ ಕೋರಿದ್ದೆ. ಅವರೆಲ್ಲರ ಸಹಕಾರದಿಂದ ಅದು‌ ಜಾರಿಯಾಗಿತ್ತು. ಈ ಪ್ರಮುಖ ಯೋಜನೆಯ ಜೊತೆಗೆ ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್​ಐಸಿ, ಜವಳಿ ಪಾರ್ಕ್, ರೇಲ್ವೆ ಕೋಚ್ ಫ್ಯಾಕ್ಟರಿ ಮುಂತಾದ ಯೋಜನೆಗಳು ನಮ್ಮ ಕಾಲದಲ್ಲಿ ಆಗಿದ್ದವು. ಇಂತಹ ಯಾವುದಾದರೂ ಯೋಜನೆಯನ್ನು ಮೋದಿ ನಮ್ಮ ಜಿಲ್ಲೆಗೆ ಕೊಟ್ಟಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದ ಖರ್ಗೆ, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ಐದು ಪ್ರಮುಖ ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ ಎಂದು ಭರವಸೆ ನೀಡಿದರು. 50 ವರ್ಷದಲ್ಲೇ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ, ಸ್ವಾತಂತ್ರ್ಯಾ ನಂತರ ನೆಹರು ಅವರು ಪ್ರಜಾತಂತ್ರ ವ್ಯವಸ್ಥೆಯನ್ನು‌ ಉಳಿಸದಿದ್ದರೆ ಹಾಗೂ ಅಂಬೇಡ್ಕರ್ ಸಂವಿಧಾನ ತರದಿದ್ದರೆ ನೀವು ಪ್ರದಾನಿಯಾಗುತ್ತಿರಲಿಲ್ಲ ಹಾಗೂ ಅಮಿತ್ ಶಾ ಗೃಹ ಸಚಿವರಾಗುತ್ತಿರಲಿಲ್ಲ ಎಂದು ಟಾಂಗ್ ನೀಡಿದರು.

"ನಾರಿ ನ್ಯಾಯ, ಯುವನ್ಯಾಯ, ರೈತನ್ಯಾಯ, ಶ್ರಮಿಕ್ ನ್ಯಾಯ, ಜಾತಿ ನ್ಯಾಯ ಎನ್ನುವ ನ್ಯಾಯಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದ್ದು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಮೋದಿ ಸುಳ್ಳಿನ‌ ಸರದಾರ. ನಮ್ಮ ಪ್ರಣಾಳಿಕೆಯನ್ನು ಟೀಕಿಸಿ ಕಾಂಗ್ರೆಸ್ ಮಂಗಳಸೂತ್ರ ಕಿತ್ತುಕೊಳ್ಳುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹರಿಹಾಯ್ದ ಅವರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ರೇವಂತ್​ ರೆಡ್ಡಿ ವಾಗ್ದಾಳಿ: ಇದೇ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮಾತನಾಡಿ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ನೀಡಿ ಮೋದಿ ಸರ್ಕಾರವನ್ನು ಕೆಳಗೆ ಇಳಿಸಲು ಸಹಕರಿಸಿ ಎಂದರು. ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ದೋರಣೆ ಅನುಸರಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ಮಾಡುವಂತೆ ಸನ್ನಿವೇಶ ನಿರ್ಮಾಣವಾಗಿತ್ತು. ನಂತರ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ಮೊರೆ‌ ಹೋಗಬೇಕಾಯಿತು.

ಬಿಜೆಪಿ 400 ಸೀಟು ಗೆದ್ದಲ್ಲಿ ಎಸ್​ಸಿ‌, ಎಸ್​ಟಿ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸುತ್ತದೆ. ಹಾಗಾಗಿ, ನೀವೆಲ್ಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಬಿಜೆಪಿ ಹುನ್ನಾರ ವಿಫಲಗೊಳಿಸಿ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಕ್ಕೆ ದೆಹಲಿ ಪೊಲೀಸರು ಹೈದರಾಬಾದ್​​ನ ನನ್ನ ಮನೆಗೆ ನೋಟಿಸು ಕೊಡಲು ಬಂದಿದ್ದಾರಂತೆ. ಮೋದಿಯವರೇ ಇ.ಡಿ, ಐ.ಡಿ ಯನ್ನು ಕಳಿಸುತ್ತೀರಿ ಈಗ ದಿಲ್ಲಿ ಪೊಲೀಸರನ್ನು ಕಳಿಸಿದ್ದೀರಿ ನಾನು ಇದಕ್ಕೆಲ್ಲ ಹೆದರುವುದಿಲ್ಲ‌ ಎಂದು ವಾಗ್ದಾಳಿ ನಡೆಸಿದರು.

ಪ್ರಿಯಾಂಕಾ ಗಾಂಧಿ‌ ವಾಗ್ದಾಳಿ: ಸಭೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಗಾಂಧಿ‌‌ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ನಮ್ಮ ದೇಶದಲ್ಲಿ‌ ನಿರುದ್ಯೋಗ ತಾಂಡವವಾಡುತ್ತಿದೆ.‌ ಶಿಕ್ಷಣ ಪಡೆದವರಿಗೆ ಉದ್ಯೋಗ ಇಲ್ಲದೇ ದೂರದ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಸಲ ಬಿಜೆಪಿಗೆ 400 ಸೀಟು ಸಿಕ್ಕರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಂವಿಧಾನದಿಂದ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಅವಕಾಶ ಹಾಗೂ ಹಕ್ಕು‌ಸಿಗುತ್ತದೆ. ಆದರೆ, ಸಂವಿಧಾನ ಬದಲಾದರೆ ಎಲ್ಲ ಅವಕಾಶಗಳು ಕಳೆದು ಹೋಗಲಿವೆ ಎಂದರು.

ಇದನ್ನೂ ಓದಿ: 'ಕರ್ನಾಟಕವನ್ನು ವಸೂಲಿ ಗ್ಯಾಂಗ್ ಆಳುತ್ತಿದೆ': ಬಾಗಲಕೋಟೆಯಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ - PM Modi Campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.