ETV Bharat / state

ಕನ್ನಡಿಗರಿಗೆ ಇಷ್ಟೆಲ್ಲಾ ಅನ್ಯಾಯವಾದರೂ ಬಿಜೆಪಿಯ ಸಂಸದರು ಈ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆಯೇ ?: ಸಿಎಂ - CM Siddaramaiah

author img

By ETV Bharat Karnataka Team

Published : Apr 14, 2024, 8:36 PM IST

cm-siddaramaiah
ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ

ತುಮಕೂರು : ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾದರೂ ಒಂದು ದಿನ ಬಿಜೆಪಿಯ ಸಂಸದರು ಈ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆಯೇ? ಮಾತನಾಡದಿದ್ದರೆ ಇವರು ಲೋಕಸಭೆಗೆ ಯಾಕೆ ಹೋಗಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಅವರು ಇಂದು ತುಮಕೂರು ಲೋಕಸಭಾ ಚುನಾವಣೆಯ ತಮ್ಮ ಪಕ್ಷದ ಅಭ್ಯರ್ಥಿಯಾದ ಮುದ್ದಹನುಮೇಗೌಡ ಅವರ ಪರ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ನಂತರ ತಮ್ಮ ಅಭ್ಯರ್ಥಿಯ ಪರ ಮತಯಾಚನೆ ಮಾಡಿ ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸದಸ್ಯರು ಆಯ್ಕೆಯಾಗಿದ್ದರು. ಅದರಲ್ಲಿ ಬಸವರಾಜ್ ಕೂಡ ಒಬ್ಬರು. ಈಗ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್​ನಿಂದ ಗೆದ್ದ ಪ್ರಜ್ವಲ್​ಗೌಡ ಸೇರಿ 27 ಜನ ಆಗಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವಾಗಿದೆ. ಬರಗಾಲ ಬಂದರೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ಹಣವನ್ನೂ ಕೊಡಲಿಲ್ಲ. ಅವರೇ ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಒಂದು ರೂಪಾಯಿ ಕೊಡಲಿಲ್ಲ ಎಂದರು.

ಸೋಮಣ್ಣ ಒಂದೇ ಒಂದು ಮನೆ ಬಡವರಿಗೆ ಹಂಚಿಕೆ ಮಾಡಿದ ನಿದರ್ಶನವಿದ್ದರೆ ಹೇಳಲಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಡಪಾಯಿ ಪುಟ್ಟರಂಗಶೆಟ್ಟಿ ಹಾಗೂ ನನ್ನ ವಿರುದ್ಧ ಸೋತ ಸೋಮಣ್ಣ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ. ಸೋಮಣ್ಣ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ಮನೆಯನ್ನು ಬಡವರಿಗೆ ಹಂಚಿಕೆ ಮಾಡಿದ ನಿದರ್ಶನವಿದ್ದರೆ ಹೇಳಲಿ ನೋಡೋಣ. ಒಂದು ಮನೆ ಕೊಡಲಿಲ್ಲ. ನಮ್ಮ ಅವಧಿಯಲ್ಲಿ 14.46 ಲಕ್ಷ ಮನೆಗಳನ್ನು ಕಟ್ಟಿಸಿದ್ದೇವೆ. ಸೋಮಣ್ಣ ಒಂದೇ ಒಂದು ಮನೆ ಬಡವರಿಗೆ ಕಟ್ಟಿಸಿದ್ದ ನಿದರ್ಶನವಿದ್ದರೆ ಅದನ್ನು ಬಡವರ ಮುಂದಿಟ್ಟು ಕೆಲಸಗಾರ ಎಂದು ಹೇಳಲಿ ಎಂದು ಸವಾಲು ಹಾಕಿದರು.

ನರೇಂದ್ರ ಮೋದಿ ಅವರ ಮುಂದೆ ನಿಲ್ಲಲು ಧೈರ್ಯ ಇದೆಯೇ? : ಸೋಮಣ್ಣನವರನ್ನು ಲೋಕಸಭೆಗೆ ಕಳಿಸಿದರೆ, ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪ ಮಾಡುತ್ತಾರೆಯೇ?. ನಿಮ್ಮ ಪರವಾಗಿ ಧ್ವನಿ ಎತ್ತುತ್ತಾರೆಯೇ?. ನರೇಂದ್ರ ಮೋದಿ ಅವರ ಮುಂದೆ ನಿಲ್ಲಲು ಧೈರ್ಯ ಇದೆಯೇ?. ಎಲ್ಲಾ ಸಂಸದರು ನರೇಂದ್ರ ಮೋದಿಯವರನ್ನು ಕಂಡರೆ ಗಡ ಗಡ ಎಂದು ನಡುಗುತ್ತಾರೆ. ಇಂಥವರನ್ನು ಲೋಕಸಭೆಗೆ ಕಳಿಸಿದರೆ ಸಮಸ್ಯೆಗೆ ಪರಿಹಾರ ಸಿಗುವುದೇ? ಎಂದು ಪ್ರಶ್ನಿಸಿಕೊಳ್ಳಬೇಕು. 27 ಜನ ಸಂಸದರಿಂದ ಕರ್ನಾಟಕದ ಜನರ ಹಿತವನ್ನು ರಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸೋಮಣ್ಣ ಅವರನ್ನು ಯಾವ ಕಾರಣಕ್ಕೂ ಬೆಂಬಲಿಸಬಾರದು ಎಂದರು.

ಬಾಯಿ ಬಿಡದವರನ್ನು ಕಳಿಸಬೇಕಾ ಎಂದು ತೀರ್ಮಾನ ಮಾಡಿ : ಮುದ್ದಹನುಮೇಗೌಡರು 2014 ರಿಂದ 2019 ರವರೆಗೆ ಲೋಕಸಭಾ ಸದಸ್ಯರಾಗಿದ್ದರು. ಜನರ ಧ್ವನಿಯಾಗಿ ನಿಮ್ಮ ಧ್ವನಿಯಾಗಿ ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಕೊಬ್ಬರಿ, ರೈತರು ಹಾಗೂ ಎಲ್ಲರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಕರ್ನಾಟಕದ ಅಭಿವೃದ್ಧಿ ಬಗ್ಗೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ, ಪರಿಹಾರ ಕೊಡಿಸುವ ಕೆಲಸವನ್ನು ಮುದ್ದಹನುಮೇಗೌಡರು ಮಾಡಿದ್ದರು ಎನ್ನುವುದು ಇತಿಹಾಸ. ಇಂಥವರನ್ನು ಕಳಿಸಬೇಕೋ ಅಥವಾ ಬಾಯಿ ಬಿಡದವರನ್ನು ಕಳಿಸಬೇಕೋ ಎಂದು ತೀರ್ಮಾನ ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಸಮಾನತೆ ಎಲ್ಲರಿಗೂ ದೊರಕಬೇಕು : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವಾದ ಇಂದು ಅವರನ್ನು ಸ್ಮರಿಸಿದ್ದೇವೆ. ಅಂಬೇಡ್ಕರ್ ಅವರು ಹೆಣ್ಣುಮಕ್ಕಳ ಪ್ರಗತಿಯಾಗದೆ ಈ ಸಮಾಜದಲ್ಲಿ ಪ್ರಗತಿ ಸಾಧ್ಯವಿಲ್ಲ. ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಬೇಕು. ರೈತರಿಗೆ, ಹಿಂದುಳಿದವರಿಗೆ, ಅಸಮಾನತೆಯಿಂದ ನರಳುವ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದಿದ್ದರು.

ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ನಮ್ಮ ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗೆ ಸರಿಹೊಂದುವ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ ತತ್ವಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಸಮಾನತೆ ಎಲ್ಲರಿಗೂ ದೊರಕಬೇಕು. ಎಲ್ಲರೂ ಒಂದು ತಾಯಿಯ ಮಕ್ಕಳಂತೆ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಇದನ್ನೇ ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂದು ಹೇಳಿದ್ದರು ಎಂದರು.

ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದು ಕಾಂಗ್ರೆಸ್ ಪಕ್ಷ : ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಸಂಪತ್ತು, ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಕೆಲವರ ಕೈಯಲ್ಲೇ ಅಧಿಕಾರವಿರಬಾರದು. ದೇಶದ ಅಧಿಕಾರ ಬಲಾಢ್ಯರ ಕೈಯಲ್ಲಿ ಸಿಲುಕಿದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ. ದೌರ್ಜನ್ಯ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಸಾಲದು, ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅವರ ಆದರ್ಶ, ತತ್ವ ಹಾಗೂ ಧ್ಯೇಯೋದ್ದೇಶಗಳನ್ನು ಈಡೇರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.

ನುಡಿದಂತೆ ನಡೆದಿದ್ದೇವೆ : ನಾವು ಹಿಂದೆ ಅಧಿಕಾರದಲ್ಲಿದ್ದಾಗ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಜೊತೆಗೆ 30 ಕಾರ್ಯಕ್ರಮಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಈ ಬಾರಿ ನಾನು ಮತ್ತು ಡಿ.ಕೆ. ಶಿವಕುಮಾರ್ ಅವರು 50 ಗ್ಯಾರಂಟಿಗಳಿಗೆ ಸಹಿ ಮಾಡಿ ಕೊಟ್ಟಿದ್ದೆವು. ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿ ಇದನ್ನು ಟೀಕಿಸಿತ್ತು. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದಿದ್ದರು ಎಂದು ತಿಳಿಸಿದರು.

ಗ್ಯಾರಂಟಿ ಪದವನ್ನು ಮೋದಿ ಕದ್ದಿದ್ದಾರೆ : ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ, ಅವುಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಮೂದಲಿಸಿದ್ದ ಪ್ರಧಾನಿ ಮೋದಿಯವರೇ ಇಂದು ಗ್ಯಾರಂಟಿ ಎಂಬ ಪದವನ್ನು ಕದ್ದಿದ್ದು, ಈಗ ಎಲ್ಲಿ ಭಾಷಣ ಮಾಡಿದರೂ ‘ಮೋದಿ ಗ್ಯಾರಂಟಿ’ ಎನ್ನುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಪ್ರಧಾನಿ ಮೋದಿ ಜನರ ಮೂಲ ಸಮಸ್ಯೆಗಳನ್ನು ನಿವಾರಿಸಿಲ್ಲ : ಪ್ರತಿ ಜನರ ಖಾತೆಗೆ 15 ಕೋಟಿ, 2 ಕೋಟಿ ಉದ್ಯೋಗ ಸೃಷ್ಟಿ ಭರವಸೆಗಳನ್ನು ಹುಸಿಗೊಳಿಸಿದ್ದು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆಗಳು ಇಳಿದೇ ಇಲ್ಲ. ತಮ್ಮ ಹತ್ತು ವರ್ಷದ ಅಧಿಕಾರವಾಧಿಯಲ್ಲಿ ಜನರ ಮೂಲ ಸಮಸ್ಯೆಗಳನ್ನು ನಿವಾರಿಸಲು ಮೋದಿಯವರಿಗೆ ಸಾಧ್ಯವಾಗದೇ, ಯಾವ ಮುಖವಿಟ್ಟುಕೊಂಡು ಜನರ ಬಳಿ ಓಟು ಕೇಳಲು ಬರುತ್ತೀರಿ? ಎಂದು ಸಿಎಂ ಪ್ರಶ್ನಿಸಿದರು.

ಮುದ್ದಹನುಮೇಗೌಡರು ಪ್ರಾಮಾಣಿಕ ವ್ಯಕ್ತಿ: ಬಿಜೆಪಿಯವರ ಮನೆದೇವರೇ ಸುಳ್ಳು. 2019 ರಿಂದ 2023ರವರೆಗೆ ಬಿಜೆಪಿಯ ಸರ್ಕಾರ ಕೇವಲ ಲೂಟಿ ಮಾಡಿದ್ದಾರೆ. ಬಡವರಿಗೆ ಮನೆ ಕಟ್ಟಿಕೊಡಲು ವಿಫಲವಾದ ಬಿಜೆಪಿಯ ವಿ. ಸೋಮಣ್ಣ ಲೋಕಸಭೆಯಲ್ಲಿ ಏನು? ಮಾಡುತ್ತಾರೆ. ಮುದ್ದಹನುಮೇಗೌಡರು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಹಿಂದುಳಿದ, ದಲಿತರ, ರೈತರ ಹಾಗೂ ಬಡವರ ಪರ ನಾಯಕರಾಗಿದ್ದಾರೆ. ರಾಜ್ಯದ ಧ್ವನಿಯಾಗಿ ಲೋಕಸಭೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮುದ್ದಹನುಮಗೌಡರನ್ನು ಜನ ಗೆಲ್ಲಿಸಬೇಕೆಂದು ಕೋರಿದರು.

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ಸಚಿವರಾದ ಜಿ. ಪರಮೇಶ್ವರ್, ಕೆ. ಎನ್ ರಾಜಣ್ಣ, ಮಾಜಿ ಶಾಸಕರು, ಷಡಕ್ಷರಿ, ವಾಸು, ರಾಜೇಂದ್ರ, ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮೋದಿ ಹುಟ್ಟಿಸಿದ ಭ್ರಮೆಗಳೆಲ್ಲಾ ಬೆತ್ತಲಾಗಿವೆ, ನೀವಿನ್ನೂ ಮೋದಿ ಭ್ರಮೆಯಲ್ಲಿದ್ದೀರಾ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.