ETV Bharat / state

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ; ಇಬ್ಬರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​ - rape case

author img

By ETV Bharat Karnataka Team

Published : Apr 18, 2024, 7:15 PM IST

rape-case
ಅತ್ಯಾಚಾರ ಪ್ರಕರಣ

ಪ್ರೀತಿ ಹೆಸರಲ್ಲಿ ಅಣ್ಣ ಹಾಗೂ ಮತ್ತೊಬ್ಬ ವಿವಾಹಿತನು ಬ್ಲಾಕ್ ಮೇಲ್ ಮಾಡಿ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆ ಚಾಮರಾಜನಗರ ಜಿಲ್ಲಾ ವಿಶೇಷ ಪೊಕ್ಸೋ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ಚಾಮರಾಜನಗರ: ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿರುವ ಪ್ರಕರಣ ಸಾಬೀತಾದ ಹಿನ್ನೆಲೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ಪೊಕ್ಸೋ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿದೆ.

ಚಾಮರಾಜನಗರ ತಾಲೂಕಿನ ಇಬ್ಬರು ಕಾಮುಕರು ಶಿಕ್ಷೆಗೊಳಗಾದ ಅಪರಾಧಿಗಳು. ಇವರಿಬ್ಬರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಈ ಹಿನ್ನೆಲೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ಪೊಕ್ಸೋ ನ್ಯಾಯಾಧೀಶ ಎನ್ ಆರ್ ಲೋಕಪ್ಪ ಅವರು 20 ವರ್ಷ ಕಠಿಣ ಶಿಕ್ಷೆ, 55 ಸಾವಿರ ರೂ. ದಂಡ ವಿಧಿಸಿದ್ದಾರೆ.

ಏನಿದು ಪ್ರಕರಣ; ವರಸೆಯಲ್ಲಿ ಸ್ವಂತ ತಂಗಿ ಎಂದು ಗೊತ್ತಿದ್ದರೂ, ಓರ್ವ ಅಪರಾಧಿ ಅಪ್ರಾಪ್ತೆಯನ್ನು ಅಪಹರಿಸಿ ಮದುವೆ ಮಾಡಿಕೊಳ್ಳುವೆ ಎಂದು ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಇದಕ್ಕೂ ಮುನ್ನ ಇವರಿಬ್ಬರ ಪ್ರೀತಿ ವಿಚಾರ ತಿಳಿದಿದ್ದ ಇನ್ನೋರ್ವ ವಿವಾಹಿತ ವ್ಯಕ್ತಿ ಬಾಲಕಿಗೆ ಬ್ಲಾಕ್​ಮೇಲ್ ಮಾಡಿ ಅತ್ಯಾಚಾರ ಎಸಗಿದ್ದನು. ಮೊದಲ ಆರೋಪಿಯಾಗಿದ್ದ ಬಾಲಕಿಯ ಸಂಬಂಧಿಯನ್ನು ಬಂಧಿಸಿದ ಬಳಿಕ ಆಪ್ತ ಸಮಾಲೋಚನೆಯಲ್ಲಿ ನೊಂದ ಬಾಲಕಿ ಬ್ಲಾಕ್ ಮೇಲ್ ವಿಚಾರವನ್ನು ಬಹಿರಂಗಪಡಿಸಿದ್ದಳು. ಇದು ಪೊಲೀಸರ ಗಮನಕ್ಕೆ ಬಂದ ಬಳಿಕ ಅವರು ಆರೋಪ ಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಿದ್ದರು.

ಸದ್ಯ ಇಬ್ಬರು ಅಪರಾಧಿಗಳಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂ.‌ ಪರಿಹಾರ ಕೊಡುವಂತೆ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ವಾದ ಮಂಡಿಸಿದ್ದರು.

ಇದನ್ನೂಓದಿ:ಮಂಡ್ಯ: ಐಸ್ ಕ್ರೀಮ್ ತಿಂದ ಬಳಿಕ ಅವಳಿ ಮಕ್ಕಳ ಸಾವು, ತಾಯಿ ಆಸ್ಪತ್ರೆಗೆ ದಾಖಲು - Twins Died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.