ETV Bharat / state

ರಾಜ್ಯದ ಪಾಲಿನ ಹಣ ಖರ್ಚು ಮಾಡದ ಕಾರಣ ಕೇಂದ್ರದ ಅನುದಾನ ಬಿಡುಗಡೆ ಆಗಿಲ್ಲ: ಕೈ ಸರ್ಕಾರಕ್ಕೆ ಬಿಜೆಪಿ ತಿರುಗೇಟು

author img

By ETV Bharat Karnataka Team

Published : Feb 20, 2024, 4:39 PM IST

Updated : Feb 20, 2024, 5:41 PM IST

ವಿಧಾನ ಪರಿಷತ್ ಕಲಾಪ
ವಿಧಾನ ಪರಿಷತ್ ಕಲಾಪ

ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎನ್ನುವ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ಸದಸ್ಯ ನವೀನ್, ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪನ್ನು ಹೇಳಬೇಕೆ ಹೊರತು ಕೇಂದ್ರದ ಮೇಲೆ ಆರೋಪ ಮಾಡಬಾರದು ಎಂದಿದ್ದಾರೆ.

ಬಿಜೆಪಿ ಸದಸ್ಯ ನವೀನ್

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಖರ್ಚು ಮಾಡದೇ ಇರುವ ಕಾರಣದಿಂದಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 5300 ಕೋಟಿ ಅನುದಾನ ಬಿಡುಗಡೆ ಆಗಿಲ್ಲ. ಈ ವಿಷಯವನ್ನು ಮುಚ್ಚಿಟ್ಟು ಅನುದಾನ ಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರವು ಕೇಂದ್ರವನ್ನು ಟೀಕಿಸುತ್ತಿದೆ ಎಂದು ಕೈ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯ ನವೀನ್ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ಕಲಾಪದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ಎಐಬಿಪಿ ಕೇಂದ್ರ ಪ್ರಾಯೋಜಿತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ದೇವೇಗೌಡರು. ಆಗ ಕೇಂದ್ರದ ಪಾಲು ಶೇ.75, ರಾಜ್ಯದ ಪಾಲು ಶೇ.25 ಅಂತಾ ಇತ್ತು. 2012 ರಲ್ಲಿ ಯುಪಿಎ ಸರ್ಕಾರ ಹೊಸ ನಿಯಮ ತಂದು ಕೇಂದ್ರ ಮತ್ತು ರಾಜ್ಯದ ಪಾಲನ್ನು 50-50 ರಂತೆ ಮಾರ್ಪಡಿಸಿತು. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಗಳು ಮೊದಲೇ ತಮ್ಮ ಪಾಲಿನ ಹಣ ಖರ್ಚು ಮಾಡಿದ್ದರೆ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ. 50 ಹಣ ಬಿಡುಗಡೆ ಮಾಡುವ ಷರತ್ತು ಹಾಕಿದರು. ಈಗ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ 5300 ಕೋಟಿ ನಮಗೆ ಬರಬೇಕಾದ ಹಣ ಎನ್ನುತ್ತಿದ್ದಾರೆಯೇ ಹೊರತು ರಾಜ್ಯ ಸರ್ಕಾರದ ವೆಚ್ಚದ ಪ್ರಮಾಣಪತ್ರ ಕೇಂದ್ರದ ಮುಂದೆ ಮಂಡನೆ ಮಾಡುವ ಕೆಲಸ ಆಗಿಲ್ಲ. ಹಾಗಾಗಿ, ಹಣ ಬಿಡುಗಡೆ ಆಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಖರ್ಚು ಮಾಡಿದರೆ ನಂತರ ಕೇಂದ್ರ ತನ್ನ ಪಾಲಿನ ಹಣ ಬಿಡುಗಡೆ ಮಾಡಲಿದೆ ಎಂದು ಕೇಂದ್ರದ ಮೇಲೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಆರೋಪದ ಕುರಿತು ಸ್ಪಷ್ಟವಾಗಿ ವಿವರಣೆ ನೀಡಿ ಕಾಂಗ್ರೆಸ್​ಗೆ ತಿರುಗೇಟು ನೀಡಿದರು.

ನಾನು ಸಿಎಂ ರೀತಿ ಜನರ ಮುಂದೆ ಹೋಗಿ ಭಾಷಣ ಮಾಡಲ್ಲ. ಎಲ್ಲ ದಾಖಲೆ ನನ್ನ ಬಳಿ ಇವೆ. ಬೇಕಾದರೆ ಸದನದಲ್ಲಿ ಬಿಡುಗಡೆ ಮಾಡಲು ಸಿದ್ಧ. ಚಿತ್ರದುರ್ಗ ಜಿಲ್ಲೆಗೆ 2012 ರಲ್ಲಿ ಮೆಡಿಕಲ್ ಕಾಲೇಜನ್ನು ಬಿಜೆಪಿ ಸರ್ಕಾರದಲ್ಲಿ ಕೊಡಲಾಯಿತು. ಆದರೆ, 2013-18 ರ ವರೆಗೆ ಕಡತ ಹಿಂದೆ ಹಾಕಿದರು. ಬೇರೆ ಜಿಲ್ಲೆಗಳಲ್ಲಿ ಕಾಲೇಜೇ ಆರಂಭವಾದರೂ ನಮ್ಮ ಕಡತ ಬಾಕಿ ಇತ್ತು. ನಮ್ಮ ಸರ್ಕಾರ ಮತ್ತೆ ಬಂದ ನಂತರ ಕಡತ ಮುಂದಕ್ಕೆ ತರಿಸಲಾಯಿತು. ಆದರೆ, 500 ಕೋಟಿ ಯೋಜನೆಗೆ ಇವರು ಬಿಡುಗಡೆ ಮಾಡಿದ್ದು 30 ಕೋಟಿ ಮಾತ್ರ, ಇಷ್ಟರಲ್ಲಿ ಇದು ಯಾವಾಗ ಮುಗಿಯಬೇಕು? ಇಷ್ಟು ಕಡಿಮೆ ಕೊಟ್ಟರೆ ಯೋಜನೆ ಪ್ರಾರಂಭ ಯಾವಾಗ? ಮುಗಿಯುವುದು ಯಾವಾಗ? ಇಂತಹ ಧೋರಣೆ ಸರಿಯಲ್ಲ. ಇದು ತಪ್ಪು ಎಂದು ಸಿದ್ದರಾಮಯ್ಯ ನಿಲುವನ್ನು ಟೀಕಿಸಿದರು.

ಇವರು ಪೋಸ್ ಕೊಟ್ಟರು, ನಮ್ಮ ತೆರಿಗೆ ನಮ್ಮ ಹಕ್ಕು ಎಂದರು. ಕರ್ನಾಟಕದಿಂದ 4,30,000 ಕೋಟಿ ಹಣವನ್ನು ಕೇಂದ್ರಕ್ಕೆ ಕೊಟ್ಟರೆ 12-13 ಪರ್ಸೆಂಟ್ ಮಾತ್ರ ಕೇಂದ್ರದಿಂದ ಬಂದಿದೆ ಎನ್ನುತ್ತಿದ್ದಾರೆ. ಆದರೆ, ಒಕ್ಕೂಟ ಸ್ಥಿತಿಯಲ್ಲಿನ ಹೊಂದಾಣಿಕೆ ಗೊತ್ತಿಲ್ಲವಾ? ಕೇಂದ್ರದ ಪಾಲು, ರಾಜ್ಯದ ಪಾಲು ಯಾರಿಗೆ ಹೋಗಲಿದೆ ಎನ್ನುವ ತಾಳ್ಮೆ, ಸಮಾಧಾನ ಸಿದ್ದರಾಮಯ್ಯ ಅವರಿಗೆ ಇಲ್ಲವಾ? 14-15ನೇ ಹಣಕಾಸು ಆಯೋಗದ ನಡುವೆ ಇರುವ ವತ್ಯಾಸವನ್ನು ಸಿದ್ದರಾಮಯ್ಯ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ರಾಜ್ಯದ ತೆರಿಗೆ ಸಂಗ್ರಹದಲ್ಲಿ ಬೆಂಗಳೂರು ನಗರದ್ದು ಶೇ. 68 ರಷ್ಟು ಪಾಲಿದೆ. ತಾವು ಬಜೆಟ್​ನಲ್ಲಿ ಬೆಂಗಳೂರಿಗೆ ಎಷ್ಟು ಕೊಟ್ಟಿದ್ದೀರಿ? ಶೇ.1 ರಷ್ಟೂ ಇಲ್ಲ. ನಾಳೆ ಬೆಂಗಳೂರಿನ ಜನ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಬಂದರೆ ನಮ್ಮ ಕಲ್ಯಾಣ ಕರ್ನಾಟಕದ ಕಥೆ ಏನು? ಎಂದು ಪ್ರಶ್ನಿಸಿ ನಮ್ಮ ತೆರಿಗೆ ನಮ್ಮ ಹಕ್ಕು ಘೋಷಣೆಗೆ ತಿರುಗೇಟು ನೀಡಿದರು.

ಬೆಂಗಳೂರಿಗರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಬಂದರೆ ಎನ್ನುವ ಮಾತಿಗೆ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಯಾಕೆ ವಿಭಜಿಸಲು ಹೊರಟಿದ್ದೀರಿ? ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ನಮ್ಮ ಹಕ್ಕು ಕೇಳುತ್ತಿದ್ದೇವೆ, ರಾಜ್ಯ ವಿಭಜಿಸುವ ಮಾತು ಯಾಕೆ? ನೀವು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.

ನಂತರ ಗದ್ದಲದ ನಡುವೆಯೇ ಮಾತು ಮುಂದುವರೆಸಿದ ನವೀನ್, ರಾಜ್ಯ, ದೇಶ ಚನ್ನಾಗಿರಬೇಕು ಎನ್ನುವ ಮಾನಸಿಕತೆ ಕರ್ನಾಟಕದವರದ್ದಾಗಿದೆ. ಹಾಗಾಗಿ ಎರಡನೇ ದೊಡ್ಡ ಜಿಎಸ್ಟಿ ನಮ್ಮದಾಗಿದೆ. ರಾಜ್ಯ ಮುನ್ನಡೆಸಿದ ಮುಖ್ಯಮಂತ್ರಿಗಳ ನೆನಪಿಸಿಕೊಳ್ಳಬೇಕು. ಬಹಳಷ್ಟು ಸಿಎಂಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ಇಂದು ಬಂಗಾರದ ಮೊಟ್ಟೆ ಇಡುವ ಕೋಳಿಯಂತಾಗಿದೆ ಕರ್ನಾಟಕದ ಪರಿಸ್ಥಿತಿ. ಕರ್ನಾಟಕದ ಕುತ್ತಿಗೆ ಹಿಸುಕಿ ಆರ್ಥಿಕ ಸಂಕಷ್ಟಕ್ಕೆ ತಳ್ಳುವ ಕೆಲಸ ನಡೆಯುತ್ತಿದೆ. ನಮ್ಮ ಮಕ್ಕಳ ಮೇಲೆ ಎಷ್ಟು ಸಾಲು ಹೊರಿಸಬಹುದು? 2008-13 ರವರೆಗೆ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಕಾಲದಲ್ಲಿ 46 ಸಾವಿರ ಕೋಟಿ ಸಾಲ ಮಾಡಲಾಗಿತ್ತು. 2013-18 ರ ಅವಧಿಯಲ್ಲಿ ಸಿದ್ದರಾಮಯ್ಯ 1,36,000 ಕೋಟಿ‌ ಸಾಲ ಮಾಡಿದ್ದರು, 2018 ರಲ್ಲಿ ಕುಮಾರಸ್ವಾಮಿ 46000 ಕೋಟಿ ಸಾಲ ಮಾಡಿದ್ದರು,‌ ನಂತರ ಮೂರು ವರ್ಷ 50 ಸಾವಿರ ಸಾಲದ ಮಿತಿ ದಾಟಿಲ್ಲ. ಅಧಿಕಾರದ ಕೊನೆಯ ಬಜೆಟ್​ನಲ್ಲಿ 64 ಸಾವಿರ ಕೋಟಿ ಸಾಲವನ್ನು ಬೊಮ್ಮಾಯಿ ಮಾಡಿದ್ದರು. ಆದರೂ, ಉಳಿತಾಯ ಬಜೆಟ್ ಆಗಿತ್ತು. ಆದರೆ, ಸಿದ್ದರಾಮಯ್ಯ ಎತ್ತುವಳಿ ಸಾಲ 85 ಸಾವಿರ ಕೋಟಿ ಕಳೆದ ಬಾರಿಯಾದರೆ ಈ ಬಾರಿ, 1,05,000 ಕೋಟಿ ಸಾಲ ಮಾಡಿದ್ದಾರೆ. ಬಡ್ಡಿ ಕಟ್ಟಲು ಸಾಲ ಮಾಡುವ ಕೆಟ್ಟ ಪರಿಸ್ಥಿಗೆ ಬಂದಿದ್ದೇವೆ ಎಂದು ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪನ್ನು ಹೇಳಬೇಕೆ ಹೊರತು ಕೇಂದ್ರದ ಮೇಲೆ ಆರೋಪ ಮಾಡಬಾರದು. ನಾವು ಇಷ್ಟು ಸಾಲ ಮಾಡಿದ್ದೇವೆ ಎಂದು ಜನರಿಗೆ ಇವರು ಹೇಳಬೇಕು. ರಾಜ್ಯದ ಜನರ ಅಭಿವೃದ್ಧಿಗೆ 31 ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಏನು ಮಾಡಿದ್ದೇವೆ ಎನ್ನಬೇಕು. ನಾವು ಮಾಡಿದ ತಪ್ಪಿನಿಂದ‌ ಮುಂದಿನ ಪೀಳಿಗೆ ಕಣ್ಣೀರಲ್ಲಿ ಕೈತೊಳೆಯುವಂತಾದರೆ ಅದರ ಶಾಪ ಎಲ್ಲರಿಗೂ ತಟ್ಟಲಿದೆ. ಲೋಕಸಭೆ ಚುನಾವಣೆಗಾಗಿ ಬಜೆಟ್ ಮಂಡನೆ ಮಾಡಿರುವುದನ್ನು ಬಿಡಿ, ಮೋದಿ ಮತ್ತೆ ಪಿಎಂ ಆಗಲು ಜನ ಮತ ಹಾಕುತ್ತಾರೆ. ನೀವು ಏನೇ ಯೋಜನೆ ಕೊಟ್ಟರೂ ಮೋದಿಗೇ ಮತ ಹಾಕಲಿದ್ದೇವೆ. 10 ವರ್ಷದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಮೋದಿ ಸರ್ಕಾರ ಮಾಡಿದೆ ಎಂದರು.

ಕೇಂದ್ರ ಪ್ರಾಯೋಜಕತ್ವದ ಹಲವು ಯೋಜನೆ ಕೊಡುತ್ತಿದ್ದರೂ ರಾಜ್ಯದ ಪಾಲಿನ ಹಣ ಖರ್ಚು ಮಾಡದ ಕಾರಣ ಅನುದಾನ ರಾಜ್ಯಕ್ಕೆ ಬರುತ್ತಿಲ್ಲ. ತುಮಕೂರು-ದಾವಣಗೆರೆ ರೈಲು ಮಾರ್ಗ 17 ವರ್ಷ ಆದರೂ ಕಾರ್ಯಗತವಾಗಿಲ್ಲ ಎಂದರೆ ರಾಜ್ಯದ ಅನುದಾನ ಬಳಕೆ ಹೇಗಿದೆ ಎಂದು ಗೊತ್ತಾಗಲಿದೆ. ಇಂದು ಕೂಡ ಸರ್ಕಾರ ಬಜೆಟ್​​ನಲ್ಲಿ ಈ ಯೋಜನೆಗೆ ಹಣ ಕೊಟ್ಟಿಲ್ಲ. ಈ ರೀತಿಯ ಬಜೆಟ್ ಇತಿಹಾಸದಲ್ಲಿ ಯಾವ ಸಿಎಂ ಮಂಡನೆ ಮಾಡಿರಲಿಲ್ಲ. 22 ಸಾವಿರ ಕೋಟಿ ವಿತ್ತೀಯ ಕೊರತೆ, ಇದನ್ನು ಕಡಿಮೆ ಮಾಡದೇ ಇದ್ದರೆ ದಿವಾಳಿ ರಾಜ್ಯದ ಪಟ್ಟಿಯಲ್ಲಿ ಕರ್ನಾಟಕ ಕೂಡ ಬರಲಿದೆ. ಈಗಲಾದರೂ ಸರ್ಕಾರ ಸರಿಯಾದ ರೀತಿ ಬಂಡವಾಳ ಹೂಡಬೇಕು. ಅಭಿವೃದ್ಧಿ ಕಾರ್ಯ ಮಾಡಬೇಕು. ಕಳೆದ ಬಾರಿಯ ಆದಾಯ ಸಂಗ್ರಹವನ್ನು ಸದನದಲ್ಲಿ ವಿವರಿಸಬೇಕು ಎನ್ನುವ ಆಗ್ರಹ ಮಾಡಿದರು.

ಇದನ್ನೂ ಓದಿ: ಸದನದಲ್ಲಿ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ಪರ ವಕಾಲತ್ತು: ಸಿಎಂ ಸಿದ್ದರಾಮಯ್ಯ ತಿರುಗೇಟು

Last Updated :Feb 20, 2024, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.