ETV Bharat / state

ನನಗೆ ಬೆಂಬಲ ನೀಡಿದರೆ ಮುಂದೆ ನಿಮಗೆ ಸಹಕಾರ : ಜೆಡಿಎಸ್​ನವರಿಗೆ​ ಶೋಭಾ ಕರಂದ್ಲಾಜೆ ಭರವಸೆ

author img

By ETV Bharat Karnataka Team

Published : Mar 18, 2024, 7:16 PM IST

bjp-candidate-shobha-karandlaje-requested-jds-workers-for-cooperation
ನನಗೆ ಬೆಂಬಲ ನೀಡಿದರೆ ಮುಂದೆ ನಿಮಗೆ ಸಹಕಾರ ನೀಡುತ್ತೇನೆ: ಜೆಡಿಎಸ್​ನವರಿಗೆ​ ಶೋಭಾ ಕರಂದ್ಲಾಜೆ ಭರವಸೆ

ಲೋಕಸಭಾ ಚುನಾವಣೆಯಲ್ಲಿ ನನಗೆ ಸಹಕಾರ ನೀಡುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನನಗೆ ಸಹಕಾರ ನೀಡಿ, ಸಹಾಯ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ನಿಮಗೆ ಸಹಕಾರ ನೀಡುತ್ತೇನೆ ಎಂದು ಜೆಡಿಎಸ್ ನಾಯಕ ಜವರಾಯಿಗೌಡ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ಚುನಾವಣೆ ನಂತರ ಎರಡೂ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಅಭಯ ನೀಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಜೆಡಿಎಸ್ ನಾಯಕರ ನಿವಾಸಕ್ಕೆ ಭೇಟಿ ನೀಡಿ, ನಾಯಕರ ಸಹಕಾರ ಕೋರುತ್ತಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಂದು ಜೆಡಿಎಸ್ ಮುಖಂಡ ಜವರಾಯಿಗೌಡ ಮನೆಗೆ ತೆರಳಿದ್ದರು. ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮಾಗಮವಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ''ಈ ಕಾರ್ಯಕ್ರಮದ ಕೇಂದ್ರ ಬಿಂದು ನಾನಲ್ಲ, ಜವರಾಯಿಗೌಡರು. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರು ದೆಹಲಿಗೆ ಬಂದಾಗ ನಮ್ಮನ್ನು ಭೇಟಿ ಮಾಡಿ, ದೇಶಕ್ಕೆ‌ ಮೋದಿ ಅವರಿಂದ ಗೌರವ ಬಂದಿದೆ. ಹಾಗಾಗಿ ನಮ್ಮ ಬೆಂಬಲ ಮೋದಿಗೆ ಅಂತ ಸ್ಪಷ್ಟಪಡಿಸಿದ್ದರು. ಅನಾರೋಗ್ಯಕ್ಕೆ ಒಳಗಾದಾಗಲೂ ದೇವೇಗೌಡರು ಮೋದಿ ಅವರನ್ನು ಭೇಟಿಯಾಗಿದ್ದರು. ಇಬ್ಬರೂ ಪರಸ್ಪರ ಗೌರವ ಕೊಡುವ ಕೆಲಸ ಮಾಡಿದ್ದಾರೆ'' ಎಂದರು.

ಬಿಜೆಪಿ, ಜೆಡಿಎಸ್‌ ಒಟ್ಟಿಗೆ ಸೇರಿದರೆ ಮತಗಳು ಹಚ್ಚಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ವೋಟು 1,70,000, ಜವರಾಯಿಗೌಡರು ಪಡೆದ ವೋಟು 1,50,000. ಆದರೆ ಕಾಂಗ್ರೆಸ್ ಪಡೆದಿದ್ದು ಕೇವಲ 20 ಸಾವಿರ ಮತ ಮಾತ್ರ. ಆದರೂ ನಮ್ಮ ನಾಯಕರು ಕಾಂಗ್ರೆಸ್​​ಗೆ ಅಡ್ಡ ಮತದಾನ ಮಾಡಿದ್ದಾರೆ. ಕೇಳಿದರೆ ನನ್ನ ಸ್ವಂತ ಬಲ ಅಂತಾರೆ. ಸ್ವಂತ ಬಲ ಏನು ಅಂತ ಮುಂದೆ ಗೊತ್ತಾಗಲಿದೆ. ಬಿಜೆಪಿ-ಜೆಡಿಎಸ್ ಸೇರಿದರೆ ಭೀಮ ಬಲ, ಒಟ್ಟಿಗೆ ಹೋದರೆ ನಮ್ಮ ಶಕ್ತಿ ಡಬಲ್ ಆಗಲಿದೆ. ನಮ್ಮ ಗುರಿ ಎರಡೂ ಪಕ್ಷದ ಮತಗಳ ಕ್ರೋಢೀಕರಣ. ನಮ್ಮದೇ ಪಕ್ಷದಲ್ಲಿ ಗೆದ್ದು, ನಮಗೇ ದ್ರೋಹ ಬಗೆದವರಿಗೆ ಪಾಠ ಕಲಿಸುವುದಾಗಿರಬೇಕು'' ಎಂದು ಪರೋಕ್ಷವಾಗಿ ಎಸ್​​.ಟಿ. ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರ್ಯಕರ್ತರಿಗೆ ಅನ್ಯಾಯವಾಗಲ್ಲ: ದೇಶದ ಅಭಿವೃದ್ಧಿ, ಗೌರವ, ಭಾರತೀಯರು ತಲೆ ಎತ್ತಿ ನಿಲ್ಲುವಂತೆ ಮಾಡಿರುವುದು ಮೋದಿ ಅವರ ಶಕ್ತಿ. ಎಲ್ಲರೂ ಬಂದು ಎನ್‌ಡಿಎ ಸೇರಿದ್ದಾರೆ. ಬರುವ ದಿನದಲ್ಲಿ ಲೋಕಸಭಾ ಚುನಾವಣೆ ಬಳಿಕ ಏನಾಗಲಿದೆಯೋ ಗೊತ್ತಿಲ್ಲ. ನಾನು ಎಂಎಲ್‌ಎ ಇದ್ದಾಗ ಎಂದೂ ಇತರೆ ಪಕ್ಷದ ನಾಯಕರಿಗೆ ದರ್ಪ ತೋರಲಿಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದೆ‌. ಗೋಪಾಲಯ್ಯ ಅವರು ಮೊದಲೇ ಬಂದರು. ಈಗ ದೇವೇಗೌಡರು, ಕುಮಾರಣ್ಣ ಹಾಗೂ ರೇವಣ್ಣ ಎಲ್ಲರೂ ಬಂದಿದ್ದಾರೆ. ಮುಂದೆ ನಾನು ಜವರಾಯಿಗೌಡರ ಪರ ನಿಲ್ಲುತ್ತೇನೆ. ನೀವು ನಮಗೆ ಸಹಕಾರ ಕೊಟ್ಟರೆ, ನಾವು ನಿಮಗೆ ಸಹಕಾರ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಎರಡೂ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಕಾರ್ಯಕರ್ತರ ನಡುವೆ ಯಾವುದೇ ವೈಷಮ್ಯ ಇರಬಹುದು. ಅವರನ್ನು ಒಗ್ಗೂಡಿಸೋ ಕೆಲಸ ನೀವು ಮಾಡಬೇಕು. ಹೆಚ್ಚು ಮತಗಳನ್ನು ಕ್ರೋಢೀಕರಿಸಬೇಕು. ನಾವೆಲ್ಲರೂ ಒಟ್ಟಾಗಿ ದುಡಿಯಬೇಕಿದೆ ಎಂದು ಕರಂದ್ಲಾಜೆ ಕರೆ ನೀಡಿದರು.

ಜೆಡಿಎಸ್ ಮುಖಂಡ ಜವರಾಯಿಗೌಡ ಮಾತನಾಡಿ, ''10 ವರ್ಷಗಳ ಹಿಂದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದ ಶಾಸಕಿಯಾಗಿ ಅನೇಕ ಜನಪ್ರಿಯ ಕೆಲಸ ಮಾಡಿ, ಕ್ಷೇತ್ರ ಬೇರೆಯವರ ಕೈಗೆ ಕೊಟ್ಟು ಹೋದರು. ಇದರಿಂದ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ. ನೀವು ಯಾವತ್ತೂ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನ್ಯಾಯ ಮಾಡಲಿಲ್ಲ. ನಾನು ಸೋತಿರಬಹುದು. 2013ರಲ್ಲಿ ಅವರು ಕೆಜೆಪಿಗೆ ಹೋಗದಿದ್ದರೆ, ನಾನು ಅಥವಾ ಅವರು ಗೆಲ್ಲುತ್ತಿದ್ದೆವೆ ಹೊರತು ಅವನು ಗೆಲ್ತಿರಲಿಲ್ಲ. ನಿಮ್ಮದೇ ಪಕ್ಷಕ್ಕೆ ಬಂದು, ನಿಮಗೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾನೆ'' ಎಂದು ಹೆಸರೇಳದೆ ಎಸ್.ಟಿ. ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.

''ಇಲ್ಲಿ ಬಂದಿರುವ ಕಾರ್ಯಕರ್ತರು ಪ್ರಾಮಾಣಿಕರು. ನಾನು ಸೋತರೂ ನನ್ನ ಕೈ ಬಿಟ್ಟಿಲ್ಲ. ಬಿಜೆಪಿ ಕಾರ್ಯಕರ್ತರು ಕೂಡ ಗಟ್ಟಿಯಾಗಿ ಉಳಿದಿರೋರು ಇಲ್ಲಿದ್ದಾರೆ. ಹಗಲಿರುಳು ದುಡಿದು ನಿಮ್ಮನ್ನು ಖಂಡಿತ ಗೆಲ್ಲಿಸುತ್ತೇವೆ. ಗೆದ್ದ ಮೇಲೆ ನಮ್ಮ ಕಾರ್ಯಕರ್ತರ ಕೈಬಿಡಬಾರದು. ಸೋಮಶೇಖರ್ ಗೆದ್ದು ಅವರ ಕಾರ್ಯಕರ್ತರಿಗೆ ಮಾತ್ರ ಸಹಾಯ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಸಹಾಯ ಮಾಡಿಲ್ಲ. ನೀವು ಎಂದೂ ಆ ರೀತಿ ಮಾಡಿಲ್ಲ‌. ನೀವು ಗೆದ್ದ ಮೇಲೆ ನಮ್ಮ ಕಾರ್ಯಕರ್ತರಿಗೆ ಕನಿಷ್ಠ ಆಗುವ ಕೆಲಸಗಳನ್ನು ಮಾಡಿಕೊಡಿ'' ಎಂದು ಜವರಾಯಿಗೌಡ, ಶೋಭಾ ಕರಂದ್ಲಾಜೆ ಗೆಲ್ಲಿಸಿ ಅಂತ ಕಾರ್ಯಕರ್ತರಿಗೆ ಕರೆ ನೀಡಿದರು.

ಇದನ್ನೂ ಓದಿ: ನಾಳೆ ಮಹತ್ವದ ಸುದ್ದಿಗೋಷ್ಟಿ ಕರೆದ ಸದಾನಂದ ಗೌಡ: ಮುಂದಿನ ರಾಜಕೀಯ ನಿರ್ಧಾರ ಪ್ರಕಟ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.