ETV Bharat / state

ಶ್ರೀಕಿ‌ಗೆ ಲ್ಯಾಪ್​ಟಾಪ್ ಕೊಟ್ಟು ಬಿಟ್ ಕಾಯಿನ್ ವರ್ಗಾವಣೆ ಮಾಡಿಸಿಕೊಂಡ ಬಂಧಿತ ಇನ್ಸ್​ಪೆಕ್ಟರ್​

author img

By ETV Bharat Karnataka Team

Published : Jan 25, 2024, 9:05 PM IST

ಬಿಟ್​ ಕಾಯಿನ್​ ಹಗರಣ ಕುರಿತು  ಡಿಜಿ ಮಾಹಿತಿ
ಬಿಟ್​ ಕಾಯಿನ್​ ಹಗರಣ ಕುರಿತು ಡಿಜಿ ಮಾಹಿತಿ

ಬಿಟ್​ ಕಾಯಿನ್​ ಹಗರಣ ಕುರಿತು ಡಿಜಿ ಅಲೋಕ್ ಮೋಹನ್ ಮಾಧ್ಯಮಗಳಿಗೆ ಕೆಲ ಮಾಹಿತಿಗಳನ್ನು ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ ಬಿಟ್ ಕಾಯಿನ್ ಹಗರಣ ಸಂಬಂಧ ಇನ್ಸ್​​ಪೆಕ್ಟರ್​ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಸೇರಿ ಇಬ್ಬರನ್ನ ಬಂಧಿಸಿರುವ ಸಿಐಡಿ ವಿಶೇಷ ತನಿಖಾ ತಂಡ (ಎಸ್ಐಟಿ) ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡಿದೆ.

ಬಿಟ್​ ಕಾಯಿನ್ ಪ್ರಕರಣಕ್ಕೆ ಬೇಕಾಗಿದ್ದ ಡಿಜಿಟಲ್ ಸಾಕ್ಷ್ಯಾಧಾರ ನಾಶಪಡಿಸಿರುವುದು, ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಹಾಗೂ ಸಹಚರನಾಗಿದ್ದ ರಾಬಿನ್ ಖಂಡನ್ ವಾಲಾಗೆ ಅಕ್ರಮವಾಗಿ ಲ್ಯಾಪ್​ಟಾಪ್ ಖರೀದಿಸಿ ಕೊಟ್ಟು, ಒತ್ತಾಯಪೂರ್ವಕವಾಗಿ ಹ್ಯಾಕ್ ಮಾಡಿಸಿ 1.83 ಲಕ್ಷ ಮೌಲ್ಯದ ಬಿಟ್ ಕಾಯಿನ್​ಗಳನ್ನ ವರ್ಗಾಯಿಸಿಕೊಂಡ ಆರೋಪದಡಿ ಜೆಸಿಪಿಡಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಸಂತೋಷ್ ಕುಮಾರ್ ಹಾಗೂ ಪ್ರಕರಣದ ತಾಂತ್ರಿಕ ನೆರವು ನೀಡಲು ನಿಯೋಜನೆಗೊಂಡಿದ್ದ ಇನ್ಸ್​​ಪೆಕ್ಟರ್​ ಪ್ರಶಾಂತ್ ಬಾಬು ಅವರನ್ನ ನಿನ್ನೆ ಬಂಧಿಸಲಾಗಿತ್ತು.

ಶ್ರೀಕಿಯನ್ನ ವಿವಿಧ ಪ್ರಕರಣಗಳಲ್ಲಿ ವಿಚಾರಣೆಗೊಳಪಡಿಸಿದ್ದ ಇನ್ಸ್​​ಪೆಕ್ಟರ್​ಗಳಾದ ಲಕ್ಷ್ಮೀಕಾಂತಯ್ಯ, ಚಂದ್ರಾಧರ್ ಹಾಗೂ ಶ್ರೀಧರ್ ಪೂಜಾರ್ ವಿರುದ್ಧ ಸಿಐಡಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಎಸ್ಐಟಿ ಪ್ರಕರಣ ದಾಖಲಿಸಿಕೊಂಡಿದೆ. ಡ್ರಗ್ಸ್‌ ಪ್ರಕರಣದಲ್ಲಿ 2020ರಲ್ಲಿ ಕೆಂಪೇಗೌಡ ನಗರ ಪೊಲೀಸರಿಂದ ಬಂಧಿತನಾಗಿದ್ದ ಶ್ರೀಕಿ ಪ್ರಕರಣವನ್ನ ಸಿಸಿಬಿ ಅಂದಿನ ತನಿಖಾಧಿಕಾರಿ ಶ್ರೀಧರ್ ಪೂಜಾರಿ, ಅಲ್ಲದೇ ಕಾಟನ್​ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಲಕ್ಷ್ಮೀಕಾಂತಯ್ಯ ಹಾಗೂ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಇನ್ಸ್​​ಪೆಕ್ಟರ್​ ಚಂದ್ರಾಧರ್ 2020ರಲ್ಲಿ ವಿವಿಧ ದಿನಾಂಕಗಳಂದು ಪ್ರತ್ಯೇಕ ಪ್ರಕರಣಗಳಲ್ಲಿ ಶ್ರೀಕಿಯನ್ನು ಗೌಪ್ಯವಾಗಿ ಬಂಧಿಸಿ ಅಕ್ರಮವಾಗಿ ವಿಚಾರಣೆ ನಡೆಸಿದ್ದರು.

ಅನಧಿಕೃತವಾಗಿ ಕ್ರಿಪ್ಟೊ ವ್ಯಾಲೆಟ್ ಆಕ್ಸಿಸ್: ಈ ಅವಧಿಯಲ್ಲಿ‌ ಶ್ರೀಕಿಗೆ ಲ್ಯಾಪ್​ಟಾಪ್‌ ನೀಡಿ ಅನಧಿಕೃತವಾಗಿ ಕ್ರಿಪ್ಟೊ ವ್ಯಾಲೆಟ್ ಆಕ್ಸಿಸ್ ಮಾಡಿದ್ದರು. ಒತ್ತಾಯಪೂರ್ವಕವಾಗಿ ಹ್ಯಾಕಿಂಗ್ ಮಾಡಿಸಿ ಲಕ್ಷಾಂತರ ಮೌಲ್ಯದ ಬಿಟ್ ಕಾಯಿನ್​ಗಳನ್ನ ವರ್ಗಾವಣೆ ಮಾಡಿಸಿಕೊಂಡಿದ್ದರು. ಶ್ರೀಕಿ ವಿರುದ್ಧ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ತಾಂತ್ರಿಕ ಅಧಿಕಾರಿಯಾಗಿ ನಿಯೋಜನೆಯಾಗಿದ್ದ ಪ್ರಶಾಂತ್ ಬಾಬು ಅವರು ಎಚ್​ಎಚ್ಎಸ್ಆರ್ ಲೇಔಟ್​ನಲ್ಲಿರುವ ಜೆಸಿಪಿಡಿ ಟೆಕ್ನಾಲಜೀಸ್ ಸೆಂಟರ್​​​​ಗೆ ಆರೋಪಿಗಳನ್ನ ಕರೆದೊಯ್ದು, ನ್ಯಾಯಾಲಯದ ಅನುಮತಿಯಿಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷ್ಯಧಾರಗಳನ್ನ ನಾಶಪಡಿಸಿ, ಯೂಸರ್​ನೇಮ್, ಪಾಸ್​ವರ್ಡ್ ಬದಲಾಯಿಸುವಂತೆ ಸಂತೋಷ್ ಕುಮಾರ್​ಗೆ ಸೂಚಿಸಿದ್ದರು.

ಶ್ರೀಕಿ ಹಲವು ಬಾರಿ ಹ್ಯಾಕಿಂಗ್ ಮಾಡಲು ಅಮೆಜಾನ್ ಸರ್ವರ್​ಗಳಿಗೆ ಭೇಟಿ ನೀಡಿದರೂ ಪ್ರಕರಣದಲ್ಲಿ ಎಲ್ಲಿಯೂ ಮಾಹಿತಿ ನೀಡಿಲ್ಲ. ತನಿಖೆ ವೇಳೆ‌ ಅಕ್ರಮವಾಗಿ ಉಪಯೋಗಿಸಿದ್ದ ಎಂಎಸ್ಐ ಲ್ಯಾಪ್​ಟಾಪ್​ನಲ್ಲಿ ಬ್ಲ್ಯಾಕ್‌ ಹಿಸ್ಟರಿಯಲ್ಲಿ ಡಿಲೀಟ್ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಇಬ್ಬರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಜಿ ಅಲೋಕ್ ಮೋಹನ್, ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಡಿ ಇನ್ಸ್​​ಪೆಕ್ಟರ್​ ಒಳಗೊಂಡಂತೆ ಇಬ್ಬರನ್ನ ಬಂಧಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ನಿನ್ನೆ ಬಂಧಿಸಿ ಇಂದು ನ್ಯಾಯಾಲಯಕ್ಕೆ‌ ಹಾಜರುಪಡಿಸಿ ಜ.31 ರವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ತನಿಖಾ ದೃಷ್ಟಿಯಿಂದ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದರು.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಸಾಕ್ಷ್ಯವಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಎಸ್​​ಐಟಿ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.