ETV Bharat / state

ಬೆಂಗಳೂರು: ಸಂಪಂಗಿ ಕೆರೆಯಂಗಳದಲ್ಲಿ ಇಂದು ರಾತ್ರಿ ಹಸಿ ಕರಗ ಮಹೋತ್ಸವ - Bengaluru Karaga

author img

By ETV Bharat Karnataka Team

Published : Apr 21, 2024, 11:50 AM IST

Sampangi Lake  Bengaluru  Karaga Mahotsava
ಸಂಪಂಗಿ ಕೆರೆಯಂಗಳದಲ್ಲಿ ಇಂದು ಅದ್ಧೂರಿ ಕರಗ ಮಹೋತ್ಸವ

ಸಂಪಂಗಿ ಕೆರೆಯಂಗಳದಲ್ಲಿ ಅದ್ಧೂರಿಯಾಗಿ ಹಸಿ ಕರಗ ನಡೆಯಲಿದೆ.

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕರಗೋತ್ಸವ ಏ.15ರಿಂದ ಆರಂಭವಾಗಿದ್ದು, ಭಾನುವಾರ ಸಂಪಂಗಿ ಕೆರೆಯಂಗಳದಲ್ಲಿ ರಾತ್ರಿ 3 ಗಂಟೆಗೆ ವಿಜೃಂಭಣೆಯಿಂದ ಹಸಿ ಕರಗ ಕಾರ್ಯಕ್ರಮ ನಡೆಯಲಿದೆ.

ಏ.23ರಂದು ಚೈತ್ರ ಪೌರ್ಣಮಿಯ ದಿನ ರಾತ್ರಿ 12.30ಕ್ಕೆೆ ಕರಗ ಶಕ್ತ್ಯೋತ್ಸವ ನಡೆಯಲಿದೆ. 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ.ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ. ಏಪ್ರಿಲ್ 24ರಂದು ದೇವಸ್ಥಾನದಲ್ಲಿ ಗಾವು ಪೂಜೆ, ಏ.25ಕ್ಕೆೆ ಕೊನೆಯ ದಿನದ ವಸಂತೋತ್ಸವ ಧ್ವಜಾವರೋಹಣ ನಡೆಯಲಿದೆ.

ಈ ವರ್ಷ ಸುಮಾರು 3,000 ವೀರ ಕುಮಾರರು ಕರಗದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಬಾರಿ ಕೋವಿಡ್ ಹಿನ್ನೆೆಲೆಯಲ್ಲಿ ಸಾಧಾರಣವಾಗಿ ಆಚರಿಸಲಾಗಿದ್ದ ಕರಗವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುವ ಸಾಧ್ಯತೆಯಿದೆ. ಕರಗದ ದಿನ ರಾತ್ರಿ ಧರ್ಮರಾಯಸ್ವಾಮಿ ದೇಗುಲದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ನೆರವೇರಿಸಲಾಗುತ್ತದೆ. ನಡುರಾತ್ರಿಯ ವೇಳೆಗೆ ಕಳಸದ ಆಕೃತಿಗೆ ಮಲ್ಲಿಗೆ ಹೂವಿನಿಂದ ಶೃಂಗಾರ ಮಾಡಿ ಕರಗವನ್ನು ಸಿದ್ಧಪಡಿಸಲಾಗುತ್ತದೆ.

ಸಂಪಂಗಿರಾಮನಗರದ ಬಳಿಯಿಂದ ಕರಗಕ್ಕೆೆ ಪೂಜೆ ಸಲ್ಲಿಸಲಾಗುತ್ತದೆ. ಕರಗದ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಂಗೋಲಿ ಹಾಕಲಾಗುತ್ತದೆ. ಮನೆಗಳ ಮುಂಭಾಗವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗುತ್ತದೆ. ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಸ್ಥಾನಗಳಲ್ಲಿ ಕರಗಧಾರಿಗಳು ಸಂಚರಿಸಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ಗುಡಿಗೆ ಬರುತ್ತಾರೆ.

ಕರಗಧಾರಿಗಳು ಮೊದಲು ಮಸ್ತಾನ್​ ಸಾಬ್ ದರ್ಗಾಕ್ಕೆೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಿದ ನಂತರ ನಗರ ಪ್ರದಕ್ಷಿಣೆಗೆ ಹೊರಡುತ್ತಾರೆ. ಇದು ಭಾವೈಕ್ಯತೆಯ ಸಂಕೇತ ಎಂದು ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ: ಏ. 22ರ ವರೆಗೆ ಮಳೆ‌ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ - rain

ETV Bharat Logo

Copyright © 2024 Ushodaya Enterprises Pvt. Ltd., All Rights Reserved.