ETV Bharat / state

ಗೈಡೆನ್ಸ್ ವ್ಯಾಲ್ಯೂ ಆಧಾರದಲ್ಲಿ ತೆರಿಗೆ ಸಂಗ್ರಹದ ಬಿಬಿಎಂಪಿ ಬಿಲ್​ಗೆ ವಿಧಾನ ಪರಿಷತ್ ಅಂಗೀಕಾರ

author img

By ETV Bharat Karnataka Team

Published : Feb 22, 2024, 3:52 PM IST

ತೆರಿಗೆ ಸಂಗ್ರಹದ ಬಿಬಿಎಂಪಿ ಬಿಲ್​ಗೆ ವಿಧಾನ ಪರಿಷತ್ ಅಂಗೀಕಾರ
ತೆರಿಗೆ ಸಂಗ್ರಹದ ಬಿಬಿಎಂಪಿ ಬಿಲ್​ಗೆ ವಿಧಾನ ಪರಿಷತ್ ಅಂಗೀಕಾರ

ವಿಧಾನ ಪರಿಷತ್ ಶಾಸಕ ರಚನೆ ಕಲಾಪದಲ್ಲಿ ಬಿಬಿಎಂಪಿ ತಿದ್ದುಪಡಿ ವಿಧೇಯಕ-2024ನ್ನು ಅಂಗೀಕರಿಸಲಾಯಿತು

ತೆರಿಗೆ ಸಂಗ್ರಹದ ಬಿಬಿಎಂಪಿ ಬಿಲ್​ಗೆ ವಿಧಾನ ಪರಿಷತ್ ಅಂಗೀಕಾರ

ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ)ವಿಧೇಯಕ-2024ಕ್ಕೆ ಒಂದೂವರೆ ಗಂಟೆಗಳ ಸುದೀರ್ಘ ಚರ್ಚೆಯ ನಂತರ ವಿಧಾನ ಪರಿಷತ್ ಅಂಗೀಕಾರ ನೀಡಿತು.

ವಿಧಾನ ಪರಿಷತ್ ಶಾಸಕ ರಚನೆ ಕಲಾಪದಲ್ಲಿ ವಿಧೇಯಕ ಮಂಡಿಸಿದ ಡಿಸಿಎಂ ಡಿಕೆ ಶಿವಕುಮಾರ್, ಈಗ ಇರುವ ಕಾನೂನಿನಲ್ಲಿ ಆಸ್ತಿ ತೆರಿಗೆ ಕಟ್ಟದೇ ಇದ್ದಲ್ಲಿ 200 ಪರ್ಸೆಂಟ್ ದಂಡ ಹಾಕಲು ಅವಕಾಶವಿತ್ತು. ಅದನ್ನು 100 ಪರ್ಸೆಂಟ್​ಗೆ ಕಡಿತ ಮಾಡಿದ್ದೇವೆ, ಬೆಂಗಳೂರು ಬಿಟ್ಟು ಇತರ ಕಡೆ ಆಸ್ತಿ ತೆರಿಗೆ ಗೈಡೆನ್ಸ್ ವ್ಯಾಲ್ಯೂ ಮೇಲೆ ಸಂಗ್ರಹಿಸಲಾಗುತ್ತಿದೆ. ಅದನ್ನೇ ಬೆಂಗಳೂರಿಗೂ ಅನ್ವಯ ಮಾಡಲಾಗುತ್ತದೆ. ಇದರಿಂದಾಗಿ 2000 ಕೋಟಿ ರೂ. ಹೆಚ್ಚುವರಿಯಾಗಿ ಆಸ್ತಿ ತೆರಿಗೆ ಬರುವ ನಿರೀಕ್ಷೆ ಇದೆ. ಜನರಿಗೂ ಅನುಕೂಲವಾಗಲಿದೆ, ಎಷ್ಟು ಕಟ್ಟಡ ಕಟ್ಟಿದ್ದಾರೋ ಅಷ್ಟಕ್ಕೆ ತೆರಿಗೆ ಸಂಗ್ರಹಿಸುತ್ತೇವೆ. ಆಸ್ತಿ ತೆರಿಗೆಯಿಂದ ಹೊರಗಿರುವವರಿಗೆ ಒನ್ ಟೈಂ ಸೆಟಲ್​ಮೆಂಟ್ ಮೂಲಕ ತೆರಿಗೆ ವ್ಯಾಪ್ತಿಗೆ ತರಲಾಗುತ್ತದೆ ಎಂದು ವಿವರಣೆ ನೀಡಿದರು.

ಬಿಲ್ ಕುರಿತು ಮಾತನಾಡಿದ ಬಿಜೆಪಿ ಸದಸ್ಯ ನವೀನ್, ಚಿಕ್ಕವರಿಗೆ ಒನ್ ಟೈಂ ಸೆಟಲ್​ಮೆಂಟ್ ಮಾಡಿ. ಆದರೆ ದೊಡ್ಡ ದೊಡ್ಡ ಬಿಲ್ಡರ್​ಗಳಿಗೆ ಹಣ ಕಡಿಮೆ ಮಾಡುವುದು ಬೇಡ,‌ ಸರ್ಕಾರ ಬಡವರ ಪರ ಇರಬೇಕು, ಬಿಲ್ಡರ್​ಗಳ ಬಡ್ಡಿ, ದಂಡ ಯಾಕೆ ಮನ್ನಾ ಮಾಡುತ್ತೀರಿ? ಉಳ್ಳವರಿಗೆ ಸಹಾಯ ಮಾಡುವಂತೆ ಈ ಬಿಲ್ ತರಲಾಗುತ್ತಿದೆ ಎಂದು ಆರೋಪಿಸುತ್ತಾ ಬಡವ ಕಟ್ಟುವ ತೆರಿಗೆಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.

ಸದಸ್ಯ ಗೋಪಿನಾಥ್ ಮಾತನಾಡಿ, ಗೈಡೆನ್ಸ್ ವ್ಯಾಲ್ಯೂ ಮೇಲೆ ತೆರಿಗೆ ಹಾಕಿದರೆ ಈಗ ಕಟ್ಟುತ್ತಿರುವ ಮೂರುಪಟ್ಟು ತೆರಿಗೆ ಕಟ್ಟಬೇಕಾಗಲಿದೆ. ಮನೆ ಬಾಡಿಗೆ ಕೊಟ್ಟಿಲ್ಲ, ಸ್ವಂತ ಮನೆಯಲ್ಲಿರುತ್ತಾರೆ. ಅದರಿಂದ ಆದಾಯ ಇರಲ್ಲ ಅವರಿಗೆ ಗೈಡೆನ್ಸ್ ವ್ಯಾಲ್ಯೂ ಮೇಲೆ ತೆರಿಗೆ ಸಂಗ್ರಹಿಸಿದರೆ ಕಷ್ಟ, ಬಾಡಿಗೆ ಕೊಟ್ಟಿದ್ದರೆ ಸಂಗ್ರಹಿಸಿ, ಆದಾಯ ಇಲ್ಲದವರಿಗೆ ಇದರಿಂದ ವಿನಾಯಿತಿ ನೀಡಿ ಎಂದು ಮನವಿ ಮಾಡಿದರು.

ಜೆಡಿಎಸ್​ ಸದಸ್ಯ ಗೋವಿಂದರಾಜ್ ಮಾತನಾಡಿ, ಮಾಲ್​ಗಳುಳ್ಳ ದೊಡ್ಡವರು ಬಿಬಿಎಂಪಿಯವರು ತೆರಿಗೆ ಸಂಗ್ರಹಕ್ಕೆ ಹೋದಾಗ ಕೋರ್ಟ್ ನಿಂದ ತಡೆ ತರುತ್ತಾರೆ. ದೊಡ್ಡ ದೊಡ್ಡ ಉದ್ದಿಮೆದಾರರು ತೆರಿಗೆ ಕಟ್ಟದೆ ವಂಚಿಸುತ್ತಿದ್ದಾರೆ, ಅವರಿಗೆ ಕಡಿವಾಣ ಹಾಕಬೇಕು ಎಂದರು. ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ವಾಣಿಜ್ಯದ ಉದ್ದೇಶಕ್ಕೆ ಒಂದು ರೀತಿ ಮತ್ತು ವಾಸಕ್ಕಾಗಿ ಮಾಡಿಕೊಂಡಿರುವ ಆಸ್ತಿಗೆ ಕಡಿಮೆಯಾಗಿರುವಂತೆ ಮತ್ತೊಂದು ರೀತಿ ತೆರಿಗೆ ಸಂಗ್ರಹಿಸಬೇಕು. ಎಲ್ಲರಿಗೂ ಒಂದೇ ರೀತಿ ನೋಡಬಾರದು ಎಂದು ಮನವಿ ಮಾಡಿದರು.

ಬಿಜೆಪಿ ಸದಸ್ಯ ಮುನಿರಾಜುಗೌಡ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಹಸಿರು ವಲಯದ ಖಾಲಿ ಜಾಗಕ್ಕೆ ಗೈಡೆನ್ಸ್ ವ್ಯಾಲ್ಯು ಪ್ರಕಾರ ತೆರಿಗೆ ಸಂಗ್ರಹಿಸಿದರೆ ಈಗಿರುವ ತೆರಿಗೆಯ ಹಲವು ಪಟ್ಟು ಹೆಚ್ಚಾಗಲಿದೆ ಅವರು ವ್ಯವಸಾಯ ಮಾಡುತ್ತಿಲ್ಲ. ಬೇರೆ ಚಟುವಟಿಕೆಗೂ ಅವಕಾಶವಿಲ್ಲ, ಇಂತವರಿಗೆ ಬೇರೆಯವರಂತೆ ತೆರಿಗೆ ಹಾಕಿದರೆ ಹೇಗೆ? ನೈಸ್ ಅಕ್ಕಪಕ್ಕದ ಜಮೀನುಗಳಿಗೆ ಯಾವ ರೀತಿ ತೆರಿಗೆ ಹಾಕಲಾಗುತ್ತದೆ? ಎಂದು ಪ್ರಶ್ನಿಸಿದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಬಡವರಿಗೆ ಅನುಕೂಲ, ಮಧ್ಯಮವರ್ಗದವರಿಗೆ ರಿಯಾಯಿತಿ ನೀಡುವ ನಿರ್ಧಾರ ಸ್ವಾಗತಾರ್ಹ. ಆದರೆ ಶ್ರೀಮಂತರಿಗೆ ಬಡವರ ರೀತಿಯ ರಿಯಾಯಿತಿ ಬೇಡ, ಒಂದು ಲಕ್ಷ ಬಾಕಿ ವಸೂಲಿಗೆ ಇರುವ ರಿಯಾಯತಿ ಹತ್ತು ಕೋಟಿ ಬಾಕಿ ಇರಿಸಿಕೊಂಡವರ ಬಾಕಿ ವಸೂಲಿಗೆ ರಿಯಾಯಿತಿ ಬೇಡ ಎಂದರು.

ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ದೊಡ್ಡ ದೊಡ್ಡವರು ಕಟ್ಟುವ ಅಪಾರ್ಟ್ಮೆಂಟ್​ಗಳಲ್ಲಿ ಮಧ್ಯಮವರ್ಗದವರು ಫ್ಲಾಟ್ ತೆಗೆದುಕೊಂಡಿರುತ್ತಾರೆ. ಭೂ ಮಾಲೀಕ ದಾಖಲಾತಿ ಸರಿಯಾಗಿ ಕೊಡದ ಕಾರಣ ತೆರಿಗೆ ಕಟ್ಟಲಾಗಿರಲ್ಲ. ಈಗ ದಂಡ, ಬಡ್ಡಿಯ ಹಣ ಯಾರು ಕಟ್ಟಬೇಕು, ಭೂ ಮಾಲೀಕನ ತಪ್ಪಿಗೆ ಖರೀದಿದಾರನಿಗೆ ದಂಡವೇ? ತಪ್ಪು ಯಾರದ್ದು ಇದರಲ್ಲಿ, ಯಾರು ದಂಡ ಕಟ್ಟಬೇಕು? ಎಂದು ಪ್ರಶ್ನಿಸಿದರು.

ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ತೆರಿಗೆ ಕಟ್ಟದವರು ದೊಡ್ಡ ದೊಡ್ಡ ಕುಳಗಳು, ಅವರ ವಿಚಾರದಲ್ಲಿ ರಿಯಾಯಿತಿ ಬೇಡ, ಕಠಿಣ ಕ್ರಮ ಅಗತ್ಯ, ಬಡ, ಮಧ್ಯಮವರ್ಗದವರು ತೆರಿಗೆ ಕಟ್ಟುತ್ತಾರೆ ಹಾಗಾಗಿ ಉಳ್ಳವರಿಗೆ ರಿಯಾಯಿತಿ ಬೇಡ ಎಂದರು. ಸದಸ್ಯರ ಮಾತಿನ ನಂತರ ಸ್ಪಷ್ಟೀಕರಣ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಈಗಾಗಲೇ 70 ಸಾವಿರ ಜನಕ್ಕೆ ನೋಟಿಸ್ ಹೋಗಿದೆ. ಒನ್ ಟೈಂ ಸೆಟಲ್​ಮೆಂಟ್ ವಸತಿ ಆಸ್ತಿಗೆ ಮಾತ್ರ. ವಾಣಿಜ್ಯ ಕಟ್ಟಡ, ವಾಣಿಜ್ಯ ಆಸ್ತಿಗೆ ಅಲ್ಲ. ಇದರಲ್ಲಿ ಯಾವುದೇ ಮಾಲ್ ಬರಲ್ಲ, ಮಾಲ್ ನವರಿಗೆ ಯಾವುದೇ ರಿಯಾಯಿತಿ ಇಲ್ಲ, ವಾಣಿಜ್ಯ ತೆರಿಗೆ ಕಟ್ಟಬೇಕು ಎಂದರು.

ಹೊಸ ತೆರಿಗೆ ಮುಂದಿನ ವರ್ಷದಿಂದ ಜಾರಿ ಹಿಂದಿನ ವರ್ಷಕ್ಕೆ ಅನ್ವಯವಾಗಲ್ಲ, ಗೈಡೆನ್ಸ್ ವ್ಯಾಲ್ಯೂ ಪ್ರಕಾರವೇ ಕಟ್ಟಬೇಕು ಇದರಲ್ಲಿ ಏನೂ ಮಾಡಲಾಗಲ್ಲ, ವಸತಿಗೆ ವಸತಿ ರೀತಿ ತೆರಿಗೆ, ವಾಣಿಜ್ಯಕ್ಕೆ ವಾಣಿಜ್ಯ ತೆರಿಗೆ ಕಟ್ಟಬೇಕು, ಕೆಳಗೆ ಮಳಿಗೆ ಮೇಲೆ ಮನೆ ಕಟ್ಟಿದ್ದರೆ ವಸತಿಗೆ ವಸತಿ, ವಾಣಿಜ್ಯಕ್ಕೆ ವಾಣಿಜ್ಯ ರೀತಿ ತೆರಿಗೆ ಕಟ್ಟಬೇಕು. 5-7 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿ ಇಲ್ಲ ಅವರನ್ನು ತೆರಿಗೆ ವ್ಯಾಪ್ತಿಗೆ ತರಬೇಕಿದೆ, ಗೈಡೆನ್ಸ್ ವ್ಯಾಲ್ಯೂನ 0.1 ಪರ್ಸೆಂಟ್ ಸ್ವಂತ ವಾಸದ ಮನೆಗೆ, ಬಾಡಿಗೆಗೆ ಕೊಟ್ಟ ಮನೆಗೆ 0.2 ಪರ್ಸೆಂಟ್ ತೆರಿಗೆ ನಿಗದಿಪಡಿಸಿದ್ದು, ವಾಣಿಜ್ಯಕ್ಕೆ, ಹೋಟೆಲ್, ತಾರಾ ಹೋಟೆಲ್​ಗೆ ಬೇರೆ ಬೇರೆ ಸ್ಲ್ಯಾಬ್ ನಿಗದಿ ಮಾಡಲಾಗಿದೆ‌. ಕೃಷಿ ಭೂಮಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಒಂದು ವೇಳೆ ಜಾಗ ಖಾಲಿ ಬಿಟ್ಟಿದ್ದರೆ ಗೈಡೆನ್ಸ್ ವ್ಯಾಲ್ಯೂನ 0.025 ಪರ್ಸೆಂಟ್ ಖಾಲಿ ಜಾಗಕ್ಕೆ ತೆರಿಗೆ ವಿಧಿಸಲಾಗುತ್ತದೆ. ಗೈಡೆನ್ಸ್ ವ್ಯಾಲ್ಯೂ ಪ್ರಕಾರವೇ ತೆರಿಗೆ ಸಂಗ್ರಹ ಮಾಡಬೇಕು ಎಂದು ಹಣಕಾಸು ಆಯೋಗದ ಆದೇಶವೇ ಇದೆ. ಹಾಗಾಗಿ ಈ ಬಿಲ್ ತರಲಾಗಿದೆ. ಈ ಬಿಲ್ ಗೆ ಒಪ್ಪಿಗೆ ನೀಡಿ ಎಂದು ಮನವಿ ಮಾಡಿದರು.

ಅಕ್ರಮ ಸಕ್ರಮ ವಿಚಾರ ಸುಪ್ರೀಂ ಕೋರ್ಟ್​ನಲ್ಲಿದೆ. ಹಾಗಾಗಿ ನಾವು ಈ ವಿಚಾರದಲ್ಲಿ ಏನೂ ಮಾಡುವಂತಿಲ್ಲ, ಹಾಗಂತ ಅಕ್ರಮ ಕಟ್ಟಡಗಳ ತೆರಿಗೆ ಸಂಗ್ರಹ ಮಾಡದೆ ಇರಲಾಗಲ್ಲ. ಅವರಿಗೆಲ್ಲಾ ನಾವು ನೀರು, ವಿದ್ಯುತ್ ಸೇರಿ ಎಲ್ಲಾ ಸೌಲಭ್ಯ ಕೊಟ್ಟಿದ್ದೇವೆ. ಹಾಗಾಗಿ ಅವರಿಂದ ತೆರಿಗೆ ಸಂಗ್ರಹ ಮಾಡುತ್ತೇವೆ. ಆದರೆ ತೆರಿಗೆ ವಸೂಲಿ ಕಟ್ಟಡದ ಸಕ್ರಮಕ್ಕೆ ಪ್ರಮಾಣಪತ್ರವಲ್ಲ. ನಾವು ಸೌಲಭ್ಯ ಕೊಟ್ಡಿದ್ದೇವೆ, ತೆರಿಗೆ ಸಂಗ್ರಹಿಸುತ್ತೇವೆ ಅಷ್ಟೆ. ಆಸ್ತಿ ತೆರಿಗೆ ಪಾವತಿ ಕಟ್ಟಡದ ಸಕ್ರಮ ಎನ್ನುವ ಪ್ರಮಾಣ ಪತ್ರವಲ್ಲ, ಎನ್ನುವುದನ್ನು ಎಲ್ಲರೂ ಮನಗಾಣಬೇಕು ಎಂದರು.

ನಂತರ ಧ್ವನಿಮತದ ಮೂಲಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ)ವಿಧೇಯಕ-2024 ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

ಇದನ್ನೂ ಓದಿ: ಬಿಜೆಪಿ ತಂದಿರುವ ಕಾಯ್ದೆಗಳಿಗೆ ನಾವು ತಿದ್ದುಪಡಿ ತಂದಿದ್ದೇವೆ ಅಷ್ಟೇ, ವಿಜಯೇಂದ್ರಗೆ ಕಾನೂನು ಅರಿವಿಲ್ಲ: ಸಚಿವ ರಾಮಲಿಂಗಾರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.