ETV Bharat / state

ಆನ್‌ಲೈನ್ ಜೂಜಾಟದ ಗೀಳು: ಹಣಕ್ಕಾಗಿ ಚಿಕ್ಕಮ್ಮನಿಗೆ ಅಪಹರಣದ ಕತೆ ಕಟ್ಟಿದ್ದ ಮಗ ಅರೆಸ್ಟ್

author img

By ETV Bharat Karnataka Team

Published : Mar 15, 2024, 12:16 PM IST

arrest-of-accused-who-staged-kidnapping-for-online-gambling-obsession
ಆನ್‌ಲೈನ್ ಜೂಜಾಟದ ಗೀಳಿಗೆ ಅಪಹರಣದ ನಾಟಕವಾಡಿದ್ದ ಆರೋಪಿಗಳ ಬಂಧನ

ಅಪರಹರಣ ದೂರು ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದ ಪೊಲೀಸರಿಗೆ, ವಿಚಾರಣೆ ವೇಳೆ ಆರೋಪಿಗಳು ಅಪಹರಣ ಡ್ರಾಮಾ ಮಾಡಿರುವುದು ತಿಳಿದು ಬಂದಿದೆ.

ಬೆಂಗಳೂರು: ಆನ್‌ಲೈನ್‌ ಜೂಜಾಟದ ಗೀಳಿಗೆ ಬಿದ್ದ ವ್ಯಕ್ತಿಯೊಬ್ಬ ಹಣಕ್ಕಾಗಿ ಅಪಹರಣದ ನಾಟಕವಾಡಿ ಪೊಲೀಸ್ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯನ್ನು ಜೀವನ್ (29) ಎಂದು ಗುರುತಿಸಲಾಗಿದೆ. ಆರೋಪಿಯು ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ವಾರ್ಡನ್ ಆಗಿದ್ದು, ಆತನ ಚಿಕ್ಕಮ್ಮ ಸಹ ಅದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು.

ಜೂಜಾಟದ ಗೀಳಿಗಾಗಿ ಸ್ನೇಹಿತರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದ ಜೀವನ್ ಮಾರ್ಚ್ 11ರಂದು ತನ್ನ ತಲೆಯ ಮೇಲೆ ಟೊಮ್ಯಾಟೋ ಸಾಸ್ ಚೆಲ್ಲಿಕೊಂಡು ತನ್ನ ಚಿಕ್ಕಮ್ಮನಿಗೆ ಫೋಟೋಗಳನ್ನು ಕಳಿಸಿ, ತನ್ನನ್ನು ಹಣಕ್ಕಾಗಿ ಅಪಹರಿಸಿರುವುದಾಗಿ ಹೇಳಿದ್ದ. ಸಹೋದರಿಯ ಮಗನ ಮಾತು ನಂಬಿ ಗಾಬರಿಗೊಂಡಿದ್ದ ಆತನ‌ ಚಿಕ್ಕಮ್ಮ ಬೊಮ್ಮನಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅಪಹರಣ ಪ್ರಕರಣವೆಂದು ತನಿಖೆ ಆರಂಭಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು. ಪೊಲೀಸ್ ವಿಚಾರಣೆ ವೇಳೆ ಜೀವನ್ ಹಣಕ್ಕಾಗಿ ಗೆಳೆಯರೊಂದಿಗೆ ಸೇರಿ ಅಪಹರಣದ ಡ್ರಾಮಾ ಮಾಡಿರುವುದು ತಿಳಿದು‌ಬಂದಿದೆ.

ಆನ್‌ಲೈನ್ ಆ್ಯಪ್​ನಲ್ಲಿ‌ ಜೂಜಾಟವಾಡಿ ಹಣ ಕಳೆದುಕೊಂಡಿದ್ದ ಜೀವನ್, ಹಣಕ್ಕಾಗಿ ಗೆಳೆಯರೊಂದಿಗೆ ಸೇರಿ ಅಪಹರಣದ ನಾಟಕವಾಡಿದ್ದ. ಅಲ್ಲದೇ 37 ಸಾವಿರ ರೂ ಹಣವನ್ನು ಸಹ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಜೀವನ್, ಆತನ‌ ಸ್ನೇಹಿತರಾದ ವಿನಯ್, ಪೂರ್ಣೇಶ್, ಪ್ರೀತಮ್ ಹಾಗೂ ರಾಜುನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂಓದಿ: ಜೂಜಾಟದ ವೇಳೆ ದಾಳಿ: ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.