ETV Bharat / state

ದೇಶ ವಿಭಜನೆಯ ಬಗ್ಗೆ ಡಿಕೆಶಿ ಹೇಳಿಕೆ: ಮತದ ಆಸೆಗೆ ದೇಶ ಬೇರ್ಪಡಿಸುವ ಹೇಳಿಕೆ ನೀಡಿದ್ದಾರೆ: ಬೆಲ್ಲದ ಆರೋಪ

author img

By ETV Bharat Karnataka Team

Published : Feb 2, 2024, 6:47 PM IST

ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್
ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್

ಮತಕ್ಕಾಗಿ ದೇಶವನ್ನೂ ಮಾರೋಕೆ ಹಿಂದೆ ಮುಂದೆ ನೋಡದವರು ಕಾಂಗ್ರೆಸ್​ನವರು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಹರಿಹಾಯ್ದಿದ್ದಾರೆ.

ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್

ಧಾರವಾಡ : ದೇಶ ವಿಭಜನೆಯ ಬಗ್ಗೆ ಡಿಕೆಶಿ ಹೇಳಿಕೆ ವಿಚಾರ ಧಾರವಾಡದಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಹರಿಹಾಯ್ದಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಕ್ಕಾಗಿ ದೇಶವನ್ನೂ ಮಾರೋಕೆ ಹಿಂದೆ ಮುಂದೆ ನೋಡದವರು ಕಾಂಗ್ರೆಸ್​ನವರು. ತಮ್ಮ ಮತಕ್ಕಾಗಿ ಯಾವುದೇ ಹಂತಕ್ಕೂ ಇಳಿಯಲು ತಯಾರಿದ್ದವರು ಅವರು. ಮತದ ಆಸೆಗೆ ದೇಶ ಬೇರ್ಪಡಿಸುವ ಹೇಳಿಕೆ ನೀಡಿದ್ದಾರೆ ಎಂದು ದೂರಿದ್ದಾರೆ.

ಪುರಾಣ ಕಾಲದಿಂದಲೂ ನಮ್ಮ ದೇಶವಿದೆ. ಮೊದಲಿನಿಂದಲೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇದೆ. ನಮ್ಮ ದೇಶದಲ್ಲಿ ಹೆಚ್ಚು ಬೆಳವಣಿಗೆ ಆಗಿದ್ದು ದಕ್ಷಿಣದ ರಾಜ್ಯಗಳು. ಕರ್ನಾಟಕ ಮತ್ತು ತಮಿಳನಾಡು ದೊಡ್ಡ ಜಿಎಸ್‌ಟಿ ರಾಜ್ಯಗಳು. ದೊಡ್ಡ ಸುಶಿಕ್ಷಿತರ ರಾಜ್ಯ ಕೇರಳ. ವೇಗವಾಗಿ ಅಭಿವೃದ್ಧಿಯಾದ ರಾಜ್ಯಗಳಲ್ಲಿ ತೆಲಂಗಾಣ ಇರುತ್ತದೆ. ದಕ್ಷಿಣ ರಾಜ್ಯಗಳ ಅಭಿವೃದ್ಧಿ ಬಹಳ ಆಗಿದೆ. ಜನರನ್ನು ದಾರಿ ತಪ್ಪಿಸುವ ಹೇಳಿಕೆ ಡಿ ಕೆ ಸುರೇಶ್​ರಿಂದ ಅಪೇಕ್ಷಿಸಿರಲಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಸಹ ಇಂತಹ ಕೆಲಸ ಮಾಡಿದ್ದರು. ಮೆಟ್ರೋದಲ್ಲಿ ಇಂಗ್ಲಿಷ್ ನಡೆಯುತ್ತದೆ. ಆದರೆ, ಹಿಂದಿ ಬೋರ್ಡ್ ವಿರೋಧಿಸಿದ್ದರು. ಹಿಂದಿ ಹೇರಿಕೆ ಅಂತಾ ಗದ್ದಲ ಎಬ್ಬಿಸಿದರು.‌ ನಂದಿನಿ, ಅಮೂಲ್ ವಿಷಯ ಎತ್ತಿದ್ದರು. ಮತಕ್ಕಾಗಿ ದೇಶ ಮಾರುವುದಕ್ಕೂ ಹೇಸಿಗೆ ಪಡದವರು ಕಾಂಗ್ರೆಸ್ಸಿಗರು. ಡಿಕೆಶಿ ತಮ್ಮ ತಪ್ಪು ಒಪ್ಪಿ, ಹೇಳಿಕೆ ವಾಪಸ್ ಪಡೆಯಬೇಕು. ದೇಶದ ದೃಷ್ಟಿಯಿಂದ ಇಂತಹ ಹೇಳಿಕೆಗಳು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದವರು ಇಂತಹ ಹೇಳಿಕೆ ನೀಡಬಾರದು. ಖರ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಡಿಕೆಶಿ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವೇ ಖರ್ಗೆಯವರೇ ಡಿಕೆಶಿ ಹೇಳಿಕೆ ತಪ್ಪು ಅಂತಾ ಹೇಳಲಿ ಎಂದು ಒತ್ತಾಯಿಸಿದ್ದಾರೆ.

ಕೆಲವರಿಂದ ಹೇಳಿಕೆ ಸಮರ್ಥನೆ ವಿಚಾರಕ್ಕೆ ಮಾತನಾಡಿದ ಅವರು, ಹಿರಿಯಕ್ಕನ ಛಾಳಿ ಮನೆ ಮಂದಿಗೆಲ್ಲ ಎನ್ನುವಂತಾಗಿದೆ. ಒಬ್ಬರು ಮಾಡಿದ್ದು, ಇನ್ನೊಬ್ಬರು ಮಾಡುತ್ತ ಹೊರಟಿದ್ದಾರೆ ಎಂದರು. ಎಂಪಿ‌ ಚುನಾವಣೆ ಬಳಿಕ ಗ್ಯಾರಂಟಿ ವಾಪಸ್ ಎಂಬ ವಿಚಾರಕ್ಕೆ ಮಾತನಾಡಿ, ಎಂಪಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಅಂತಾ ಕಾಂಗ್ರೆಸ್​ಗೆ ಗ್ಯಾರಂಟಿ ಆಗಿದೆ.‌ ಅದಕ್ಕೆ ಹೀಗೆಲ್ಲ ಹೇಳುತ್ತಿದ್ದಾರೆ. ಗ್ಯಾರಂಟಿ ಕಟ್ ಮಾಡೋದು ಗ್ಯಾರಂಟಿ ಇದ್ದೇ ಇದೆ. ಅದಕ್ಕಾಗಿಯೇ ಆ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರ ಉದ್ದೇಶ ಜನರಿಗೂ ಅರ್ಥವಾಗಿದೆ ಎಂದು ತಿಳಿಸಿದ್ದಾರೆ. ಸವದಿ, ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಮಾತನಾಡಿ, ದಿನ ಕಳೆದಂತೆ ಅದು ಗೊತ್ತಾಗುತ್ತದೆ. ಈಗಲೇ ಅದರ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.

ಸಚಿವ ಸಂತೋಷ ಲಾಡ್

ಸಂಸದ ಡಿ ಕೆ ಸುರೇಶ್​ ಹೇಳಿಕೆಯಲ್ಲಿ ತಪ್ಪೇನಿದೆ - ಸಂತೋಷ ಲಾಡ್ ಸಮರ್ಥನೆ: ದಕ್ಷಿಣ ಭಾರತಕ್ಕೆ ಪ್ರತ್ಯೇಕ ದೇಶ ಎಂಬ ಸಂಸದ ಡಿ ಕೆ ಸುರೇಶ್​ ಹೇಳಿಕೆಯನ್ನು ಸಚಿವ ಸಂತೋಷ ಲಾಡ್ ಸಮರ್ಥಿಸಿಕೊಂಡಿದ್ದಾರೆ. ಡಿ ಕೆ ಸುರೇಶ್ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ದಕ್ಷಿಣ ಭಾರತದ ಆದಾಯ ಮತ್ತು ಸಂಪನ್ಮೂಲಗಳನ್ನು ಉತ್ತರ ಭಾರತದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಇದು ಜಗಜ್ಜಾಹೀರಾಗಿದೆ ಎಂದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವನ್ನು ವಿಭಾಗ ಮಾಡುವ ಹೇಳಿಕೆ ಅವರ ಅಭಿಪ್ರಾಯ. ಅದನ್ನು ಅವರಿಗೆ ಕೇಳಿ ಎಂದರು. ಕೇಂದ್ರ ಸರ್ಕಾರದ ಚುನಾವಣೆ ಬಂದಿದೆ. ಹತ್ತು ವರ್ಷದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಏನು ಕೆಲಸ ಮಾಡಿದೆ ಅದರ ಬಗ್ಗೆ ಚರ್ಚೆ ಆಗಬೇಕು. ಅದು ಬಿಟ್ಟು ವಿವಾದಾತ್ಮಕ ಹೇಳಿಕೆಯಲ್ಲಿ ಮುಳುಗಬಾರದು ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಬಂದಾಗ ರಾಜ್ಯದಲ್ಲಿ ಸರ್ಕಾರ ಪತನ ಆಗಿದೆ ಎಂದು ಹೇಳುತ್ತಾರೆ. ಇದಲ್ಲದೇ ಉಳಿದವರು ಕಳೆದ 8 ತಿಂಗಳಿಂದ ಇದನ್ನೇ ಹೇಳುತ್ತಾ ಇದ್ದಾರೆ. ನಮ್ಮ ಸರ್ಕಾರ ಪತನ ಆಗೋ ಸಮಯಕ್ಕೆ ಆಗುತ್ತದೆ. ಈ ಬಗ್ಗೆ ಪ್ರಶ್ನೆ ಬೇಡ ಎಂದು ಹರಿಹಾಯ್ದಿದ್ದಾರೆ.

ಇದೀಗ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಜನತೆಗೆ ಒಂದು ಮನೆ ಕೂಡಾ ಕೊಟ್ಟಿಲ್ಲ. ಇದರ ಬಗ್ಗೆ ಚರ್ಚೆ ಏಕೆ ಮಾಡೋದಿಲ್ಲ? ಎಂದಿದ್ದಾರೆ. ಈ ಹಿಂದೆ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದ್ದಾರೆ.‌ ಅದರ ಬಗ್ಗೆ ಮಾತನಾಡಲಿ. ಈ ಬಗ್ಗೆ ಬಿಜೆಪಿಯವರು ಬಹಿರಂಗವಾಗಿ ಬಂದು ಮಾತನಾಡಲಿ. ಅದನ್ನೇ ಅಜೆಂಡಾ ಮಾಡಲಿ ಎಂದು ತಿಳಿಸಿದ್ದಾರೆ. ಸರ್ಕಾರ ಬೀಳಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ಅವರು ವಿವಿಧ ದೇಶದ ಸರ್ಕಾರವನ್ನು ಬೀಳಿಸಲಿ. ನಾವು ಜನರಿಂದ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಷ್ಟೊಂದು ಕಳಪೆ ಕೇಂದ್ರ ಬಜೆಟ್​​ನ್ನು ಯಾವತ್ತೂ ನೋಡಿಲ್ಲ, ರಾಜ್ಯಕ್ಕೂ ಅನ್ಯಾಯವಾಗಿದೆ: ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.