ETV Bharat / state

ಅಮಿತ್ ಶಾ ಕರ್ನಾಟಕಕ್ಕೆ ಬರಿಗೈಲಿ ಬಂದಿದ್ದಾರೆ: ಸಿಎಂ ಸಿದ್ದರಾಮಯ್ಯ ಕಿಡಿ

author img

By ETV Bharat Karnataka Team

Published : Feb 11, 2024, 3:42 PM IST

Updated : Feb 11, 2024, 5:13 PM IST

amit-shah-has-no-morals-to-talk-about-farmers-and-poor-people
ಅಮಿತ್ ಶಾ ಕರ್ನಾಟಕಕ್ಕೆ ಬರಿಗೈಲಿ ಬಂದಿದ್ದಾರೆ: ಸಿಎಂ ಸಿದ್ದರಾಮಯ್ಯ ಕಿಡಿ

ಬರ ಪರಿಹಾರ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರಾದ ಅಮಿತ್​ ಶಾ ಅವರು ಈ ಬಗ್ಗೆ ಸಭೆಯನ್ನೇ ನಡೆಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ''ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಅವರು, ''ಅಮಿತ್ ಶಾ ಅವರಿಗೆ ರೈತರು, ಬಡವರ ಬಗ್ಗೆ ಮಾತಾಡಲು ಯಾವುದೇ ನೈತಿಕತೆ ಇಲ್ಲ. ಬರ ಪರಿಹಾರ ಕೇಳಿ ನಾಲ್ಕು ತಿಂಗಳಾಗಿದೆ. ಒಂದು ಸಭೆಯನ್ನೂ ಅವರು ಮಾಡಿಲ್ಲ. ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ. ಇದುವರೆಗೆ ಬರಗಾಲದ ಬಗ್ಗೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಬರ ಪರಿಹಾರ ಕೊಡುವ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರೇ ಮಿಸ್ಟರ್ ಅಮಿತ್ ಶಾ. ರೈತರು ಕಷ್ಟಪಡುತ್ತಿದ್ದಾರೆ, ನೀರಿಗೆ ಸಮಸ್ಯೆ ಇದೆ, ಕೆಲಸಕ್ಕೆ ಕಷ್ಟ ಆಗಿದೆ'' ಎಂದು ವಾಗ್ದಾಳಿ ನಡೆಸಿದರು.

''ನರೇಗಾದಡಿ ಬರಗಾಲ ಇದ್ದಾಗ ಕೆಲಸದ ದಿನಗಳನ್ನು 150 ಕ್ಕೆ ಏರಿಸಬೇಕು. ಇದರ ಬಗ್ಗೆ ಪತ್ರ ಕೊಟ್ಟಿದ್ದೇವೆ. ಇವತ್ತಿನ ತನಕ ಇದಕ್ಕೂ ಅನುಮತಿ ನೀಡಿಲ್ಲ. ಇದರೆಲ್ಲದರ ಬಗ್ಗೆ ಅಮಿತ್ ಶಾ ಅವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಬೇಕಿದೆ, ಅವರಿಗೆ ಪ್ರಶ್ನೆ ಮಾಡಿ‌'' ಎಂದರು.

ದೇವೇಗೌಡರು ಯಜಮಾನರು: ತೆರಿಗೆ ಹಂಚಿಕೆ ಕುರಿತ ನಿರ್ಮಲಾ ಸೀತಾರಾಮನ್ ಸ್ಪಷ್ಟನೆಗೆ ದೇವೇಗೌಡರ ಬೆಂಬಲ ವಿಚಾರವಾಗಿ ತಿರುಗೇಟು ನೀಡಿದ ಸಿಎಂ, ''ದೇವೇಗೌಡರು ಈಗ ಬಿಜೆಪಿಯವರ ಜೊತೆ ಸೇರಿಕೊಂಡಿದ್ದಾರೆ. ಅದಕ್ಕೆ ನಿರ್ಮಲಾ ಸೀತಾರಾಮನ್ ಹೇಳಿಕೆ ಸರಿ ಅಂದಿದ್ದಾರೆ. ಇದೇ ದೇವೇಗೌಡರು, ನಾನು ಮುಂದಿನ ಜನ್ಮ ಅಂತ ಇದ್ದರೆ ಮುಸ್ಲಿಮನಾಗಿ ಹುಟ್ಟುತ್ತೇನೆ ಅಂದಿದ್ದರು. ಈಗ ಏನು ಹೇಳ್ತಾರೆ ದೇವೇಗೌಡರು?. ನಾವು ಇದನ್ನೆಲ್ಲ ಹೇಳೋಕ್ಕೆ ಹೋಗಬಾರದು. ದೇವೇಗೌಡರು‌ ಯಜಮಾನರು, ಮಾಜಿ ಪ್ರಧಾನಿಗಳು, ಹೀಗೆಲ್ಲ ಹೇಳಬಾರದು. ಬಿಜೆಪಿ ಜೊತೆ ಮೈತ್ರಿ ಇದೆ ಅಂತ ಅವರು ಮಾಡಿರುವ ಅನ್ಯಾಯವನ್ನೆಲ್ಲ ಸರಿ ಅಂತ ಹೇಳಬಾರದು'' ಎಂದು ಹೇಳಿದರು.

ಸಿಎಂ ತವರು ಜಿಲ್ಲೆಯಿಂದ ಅಮಿತ್ ಶಾ ಚುನಾವಣಾ ರಣಕಹಳೆ ಮೊಳಗಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ''ರಣಕಹಳೆ ಅಂದರೇನು?. ನೀವು ಬಳಸುವ ಪದ ಇದೆಯಲ್ಲ ಕಹಳೆ, ಏನದು?. ನಾವು ಈ ಸಲ ಮೈಸೂರು, ಚಾಮರಾಜನಗರ ಎರಡೂ ಕಡೆಯೂ ಗೆಲ್ಲುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸುವುದಾಗಿ ಘೋಷಿಸಲಿ: ಸಿಎಂ ಸವಾಲು

ಇದಕ್ಕೂ ಮುನ್ನ ಪತ್ರಿಕಾ ಹೇಳಿಕೆ ಮೂಲಕ ಕಿಡಿಕಾರಿದ್ದ ಸಿಎಂ, ''ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ ಎಂದಿದ್ದಾರೆ. ಈ ರೀತಿ ಗ್ಯಾರಂಟಿಗಳ ಬಗ್ಗೆ ವಿರೋಧವಿದ್ದರೆ ಬಿಜೆಪಿ ನಾಯಕರು ಅದನ್ನೇ ಹೇಳಿಕೊಂಡಿರುವುದನ್ನು ಬಿಟ್ಟು ನೇರ ಹಾಗೂ ಸ್ಪಷ್ಟವಾಗಿ ಹೇಳಿಬಿಡಬೇಕು. ಜೊತೆಗೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನೂ ನಿಲ್ಲಿಸಬೇಕು. ಅದರ ಮೂಲಕ ತಮ್ಮ ದಮ್ಮು ತಾಕತ್​ ತೋರಿಸಲಿ'' ಎಂದು ಸವಾಲು ಹಾಕಿದ್ದರು.

Last Updated :Feb 11, 2024, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.