ETV Bharat / state

ವಿಶೇಷಚೇತನ ವಿದ್ಯಾರ್ಥಿಗೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಸಹಾಯಕನ ನಿರಾಕರಣೆ ಆರೋಪ: ಪಾಲಕರಿಂದ ಕ್ರಮಕ್ಕೆ ಆಗ್ರಹ - SSLC Exam

author img

By ETV Bharat Karnataka Team

Published : Mar 27, 2024, 3:07 PM IST

disabled student  Demand for action from parents  Vijayapura
ವಿಶೇಷಚೇತನ ವಿದ್ಯಾರ್ಥಿಗೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಸಹಾಯಕನ ನಿರಾಕರಣೆ: ಪಾಲಕರಿಂದ ಕ್ರಮಕ್ಕೆ ಆಗ್ರಹ

ವಿಶೇಷಚೇತನ ವಿದ್ಯಾರ್ಥಿಗೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಸಹಾಯಕನ ನಿರಾಕರಣೆ ಮಾಡಿರುವ ಆರೋಪ ವಿಜಯಪುರ ಜಿಲ್ಲೆಯಲ್ಲಿ ಕೇಳಿಬಂದಿದೆ.

ವಿಶೇಷಚೇತನ ವಿದ್ಯಾರ್ಥಿಗೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಸಹಾಯಕನ ನಿರಾಕರಣೆ: ಪಾಲಕರಿಂದ ಕ್ರಮಕ್ಕೆ ಆಗ್ರಹ

ವಿಜಯಪುರ: ವಿಶೇಷಚೇತನ ವಿದ್ಯಾರ್ಥಿಗೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ನಿಯಮಾವಳಿ ಅನ್ವಯ ಸಹಾಯಕನೋರ್ವನ ಸಹಾಯ ಪಡೆದುಕೊಳ್ಳಲು ಪರೀಕ್ಷಾ ಕೇಂದ್ರದ ಅಧಿಕಾರಿಗಳು ನಿರಾಕರಣೆ ಮಾಡಿರುವ ಆರೋಪ ಪ್ರಕರಣ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ನಗರದ ಅಜ್ಲಾನ್‌ ನಾಯ್ಕೋಡಿ ಎಂಬ ವಿದ್ಯಾರ್ಥಿ ದೈಹಿಕವಾಗಿ ವಿಶೇಷಚೇತನ ಆಗಿದ್ದಾನೆ. ಆತನ ಕೈಗಳು ಮತ್ತು ಕಾಲುಗಳು ಭಾಗಶಃ ಸ್ವಾಧೀನ ಕಳೆದುಕೊಂಡಿರುವ ಕಾರಣ, ಪಾಲಕರು ಈ ಹಿಂದೆಯೇ ನಿಯಮಾವಳಿಯಡಿ ಪರೀಕ್ಷೆ ಬರೆಯಲು ಓರ್ವ ಸಹಾಯಕನ ನೆರವು ಪಡೆಯಲು ಅವಕಾಶ ನೀಡಬೇಕೆಂದು ಸಾಕಷ್ಟು ಬಾರಿ ಲಿಖಿತವಾಗಿ ಮನವಿ ಮಾಡಿದ್ದರು. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ವಿದ್ಯಾರ್ಥಿಗೆ ಪ್ರಥಮ ಪತ್ರಿಕೆಯಲ್ಲಿ ಸಹಾಯಕನನ್ನು ನೀಡುವ ಸೌಲಭ್ಯ ನಿರಾಕರಿಸಿದ್ದಾರೆ. ಈ ಕಾರಣಕ್ಕೆ ವಿಶೇಷಚೇತನ ವಿದ್ಯಾರ್ಥಿ ಸರಿಯಾಗಿ ಪರೀಕ್ಷೆ ಬರೆಯದೇ ಮನನೊಂದು ಪರೀಕ್ಷಾ ಕೇಂದ್ರದಿಂದ ಬಂದಿದ್ದನು.

ಪುತ್ರನ ಈ ಸ್ಥಿತಿ ಕಂಡು ಪಾಲಕರು ಕಣ್ಣೀರು ಸುರಿಸಿದ ಘಟನೆ ಎಲ್ಲರ ಮನ ಕಲುಕಿತು. ಸೂಕ್ತ ಸಮಯದಲ್ಲಿ ಮಾಧ್ಯಮದವರು ಮತ್ತು ಪಾಲಕರು ಡಿಡಿಪಿಐ ಅವರ ಗಮನಸೆಳೆದರು. ಈ ಕುರಿತು ಡಿಡಿಪಿಐ ಮಧ್ಯೆಪ್ರವೇಶಿಸಿ, ವಿಶೇಷಚೇತನ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಸಹಾಯಕನೋರ್ವನ ಸಹಾಯ ಪಡೆದುಕೊಳ್ಳಲು ಅವಕಾಶ ನೀಡಿದರು. ಆದರೆ, ಈಗಾಗಲೇ ವಿದ್ಯಾರ್ಥಿಯ ಒಂದು ವಿಷಯದ ಪರೀಕ್ಷೆ ಮುಗಿದಿದೆ. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯವರ ನಿರ್ಲಕ್ಷ್ಯದಿಂದಾಗಿ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದರಿಂದ ವಿದ್ಯಾರ್ಥಿಯ ಶಿಕ್ಷಣದ ಭವಿಷ್ಯದ ಮೇಲೆ ಮತ್ತು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಈ ವಿಶೇಷಚೇತನ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ, ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಒಡಕಿಲ್ಲ, ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ: ಯಡಿಯೂರಪ್ಪ - B S Yediyurappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.