ETV Bharat / state

ಹೆಸರೆತ್ತದೆ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್

author img

By ETV Bharat Karnataka Team

Published : Feb 27, 2024, 9:52 PM IST

Updated : Feb 27, 2024, 10:07 PM IST

Actor Prakash Raj
ನಟ ಪ್ರಕಾಶ್ ರಾಜ್

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ನಟ ಪ್ರಕಾಶ್ ರಾಜ್ ಅವರು ಮಂಗಳೂರಿನ ತೊಕ್ಕೊಟ್ಟಿನಲ್ಲಿ ನಡೆದ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ತೀವ್ರ ವಾಗ್ದಾಳಿ ನಡೆಸಿದರು.

ನಟ ಪ್ರಕಾಶ್ ರಾಜ್

ಮಂಗಳೂರು: "ಜನರನ್ನು ಮಂಗ ಮಾಡಲು ಅತ್ಯಂತ ಶ್ರೇಷ್ಠ ನಟ ದೇಶದ ನಾಯಕನಾಗಿದ್ದಾನೆ. 2019ರಲ್ಲಿ ಆತ ಗುಹೆ ಸೇರಿಕೊಂಡ. ಈಗ ಕ್ಯಾಮರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ.‌ ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ" ಎಂದು ಪ್ರಧಾನಿ‌ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.

ನಗರದ ತೊಕ್ಕೊಟ್ಟಿನ ಯುನಿಟಿ ಮೈದಾನದಲ್ಲಿ ಇಂದು ನಡೆದ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

"ಈ ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುವ ನಾಯಕರಿದ್ದರು. ಆದರೆ ಈಗ ದೇವಸ್ಥಾನದ ಉದ್ಘಾಟನೆಗೆ ಉಪವಾಸ ಮಾಡುವ ನಾಯಕನಿದ್ದಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡುತ್ತಾನೆ. ಕರ್ಕಶವಾದ ಲೌಡ್ ಸ್ಪೀಕರ್ ಅವನು.‌ ಈತ ವಂದೇ ಭಾರತ್​ಗೆ ಬಾವುಟ ತೋರಿಸಿದಷ್ಟು ಬಾವುಟವನ್ನು ಸ್ಟೇಷನ್ ಮಾಸ್ಟರ್ ಸಹ ತೋರಿಸಿರಲಿಕ್ಕಿಲ್ಲ" ಎಂದರು.

"ಕಲಾವಿದನಾಗಿ ಮಾತನಾಡಬೇಕಾಗುವುದು ನನ್ನ ಜವಾಬ್ದಾರಿ. ಸಮಸ್ಯೆಗಳಾದಾಗ ಬಂದು ನಾನು ನಿಲ್ಲಬೇಕಿದೆ. ದೇಹಕ್ಕಾದ ಗಾಯಗಳು ಸುಮ್ಮನಿದ್ದರೂ ಶಮನವಾಗುತ್ತವೆ. ಆದರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟೂ ಹೆಚ್ಚಾಗುತ್ತದೆ.‌ ಒಬ್ಬ ಕಲಾವಿದ ಮೌನವಾದರೆ ಇಡೀ ಸಮಾಜ ಮೌನವಾದಂತೆ. ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು" ಎಂದು ಹೇಳಿದರು.

"ಆರ್​ಎಸ್‌ಎಸ್, ಬಿಜೆಪಿಯಂತಹ ಕಿಡ್ನ್ಯಾಪ್‌ ಟೀಮ್ ದೇಶದಲ್ಲಿ ಬೇರೆ ಇಲ್ಲ. ಮಾತೆತ್ತಿದ್ರೆ ರಾಮಮಂದಿರ, ಮಸೀದಿ, ಹಿಂದೂ ಧರ್ಮ ಅಂತಾರೆ. ಎಷ್ಟು ಅಂತಾ ಅಗೀತಾ ಹೋಗ್ತೀರಾ?. ಮುಂದೆ ಹರಪ್ಪ, ಮೊಹೆಂಜದಾರೋ ಸಿಗಬಹುದು. ಹಾಗಾದರೆ ಮತ್ತೆ‌ ಶಿಲಾಯುಗಕ್ಕೆ ಹೋಗ್ತೀರಾ ಎಂದು ಪ್ರಶ್ನಿಸಿದರು.

"ಪೆಟ್ರೋಲ್ ಮುಸ್ಲಿಂ ರಾಷ್ಟ್ರದಲ್ಲಿ ಸಿಗುತ್ತೆ. ಹಾಗಾದ್ರೆ ಪೆಟ್ರೋಲ್ ಬೇಡ ಅಂತಾ ಎತ್ತಿನಗಾಡಿಯಲ್ಲಿ ಹೋಗ್ತೀರಾ?. ಈ ಸಲ ಗೆದ್ದರೆ ಇನ್ನಷ್ಟು ನಾಚಿಕೆ ಮಾನ, ಮರ್ಯಾದೆ ಕಳೆದುಕೊಳ್ಳುತ್ತಾನೆ. ಹಿಂದೂ ರಾಷ್ಟ್ರ ಮಾಡಲು ಈ ಮಂಗಗಳು ತಿರುಗಾಡ್ತಿವೆ. ಹಿಂದೂ ರಾಷ್ಟ್ರ ಆದ ಮೇಲೆ ಮತ್ತೆ ಜಾತಿ ಪದ್ಧತಿ ಶುರು ಮಾಡುತ್ತಾರೆ" ಎಂದರು.

"ಫೇಕ್ ಡಿಗ್ರಿಯಲ್ಲಿ ಓಡಾಡುತ್ತಿರುವವನಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ?. ಪಾರ್ಲಿಮೆಂಟ್ ಮೇಲೆ ನಾಲ್ಕೈದು ಯುವಕ-ಯುವತಿಯರು ದಾಳಿ ಮಾಡಿದರು. ಯುವಕರು ಏಕೆ ಹಾಗೆ ಮಾಡಿದರು ಎಂದು ನಾವು ಯೋಚನೆ ಮಾಡಬೇಕು. ನಿರುದ್ಯೋಗ ಸಮಸ್ಯೆ ಇದೆ ಎಂದು ಯುವಕರು ಹೇಳ್ತಿದ್ದಾರೆ. ಬಾಲ್ಯದಲ್ಲಿದ್ದಾಗ ಮಂಗಳೂರು ಹೀಗಾಗುತ್ತೆ ಎಂದು ಗೊತ್ತಿರಲಿಲ್ಲ. ಎಷ್ಟು ಜನ ಯುವಕರು ಜೈಲಿನಲ್ಲಿ ಕೊಳೀತಾ ಇದ್ದಾರೆ. ಗಲಾಟೆ ಮಾಡಿಸುವ ಒಬ್ಬ ಜನಪ್ರತಿನಿಧಿಯ ಮಕ್ಕಳು ಜೈಲಿನಲ್ಲಿದ್ದಾರಾ?" ಎಂದರು.

ಇದನ್ನೂ ಓದಿ: ಹನೂರಿ‌ನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರಾಜ್

Last Updated :Feb 27, 2024, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.