ETV Bharat / sports

ಟಿ20 ವಿಶ್ವಕಪ್​ಗೂ ಮುನ್ನ ಬಾಬರ್​ ಅಜಂಗೆ ಮತ್ತೆ ಪಾಕಿಸ್ತಾನ ತಂಡದ ನಾಯಕತ್ವದ ಹೊಣೆ? - Babar back as captain

author img

By PTI

Published : Mar 30, 2024, 3:33 PM IST

ಬಾಬರ್​ ಅಜಂಗೆ ಮತ್ತೆ ಪಾಕಿಸ್ತಾನ ತಂಡದ ನಾಯಕತ್ವ ಹೊ
ಬಾಬರ್​ ಅಜಂಗೆ ಮತ್ತೆ ಪಾಕಿಸ್ತಾನ ತಂಡದ ನಾಯಕತ್ವ ಹೊ

ಮುಂಬರುವ ಟಿ20 ವಿಶ್ವಕಪ್​ಗೂ ಮುನ್ನ ಬಾಬರ್​ ಅಜಂ ಅವರನ್ನು ಮತ್ತೆ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕರನ್ನಾಗಿ ಪಟ್ಟ ಕಟ್ಟಲು ಪಿಸಿಬಿ ಮುಂದಾಗಿದೆ.

ಲಾಹೋರ್ (ಪಾಕಿಸ್ತಾನ): ಪಾಕಿಸ್ತಾನ ಕ್ರಿಕೆಟ್​ನಲ್ಲಿ ಮತ್ತೆ ನಾಯಕತ್ವದ ಬಿಕ್ಕಟ್ಟು ಉದ್ಭವಿಸಿದೆ. ಟಿ20, ಏಕದಿನ, ಟೆಸ್ಟ್​ನಲ್ಲಿ ತಂಡ ಹೀನಾಯ ಪ್ರದರ್ಶನ ನೀಡುತ್ತಿದ್ದು, ಮಾಜಿ ನಾಯಕ ಬಾಬರ್​ ಅಜಂಗೆ ಮತ್ತೆ ನಾಯಕತ್ವದ ಪಟ್ಟ ಕಟ್ಟುವ ಸಾಧ್ಯತೆ ಇದೆ. ಈ ವರ್ಷ ಜೂನ್​ನಲ್ಲಿ ನಡೆಯುವ ಟಿ-20 ವಿಶ್ವಕಪ್​ಗೂ ಮುನ್ನ ಈ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ತಂಡ ಕಳಪೆ ಪ್ರದರ್ಶನ ನೀಡಿದ ಬಳಿಕ ಬಾಬರ್​ ಅಜಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ಮೂರು ಮಾದರಿ ನಾಯಕತ್ವಕ್ಕೆ ಬಾಬರ್ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ವೇಗದ ಬೌಲರ್​ ಶಾಹೀನ್​ ಆಫ್ರಿದಿ ಅವರನ್ನು ಟಿ-20 ಮತ್ತು ಏಕದಿನ ಮತ್ತು ಟೆಸ್ಟ್​ ತಂಡಕ್ಕೆ ಶಾನ್​ ಮಸೂದ್ ಅವ​​ರನ್ನು ನಾಯಕರನ್ನಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಘೋಷಿಸಿತ್ತು.

ಇತ್ತೀಚೆಗೆ ಇಬ್ಬರೂ ಆಟಗಾರರ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿ ಸರಣಿಗಳನ್ನು ಕಳೆದುಕೊಂಡಿತ್ತು. ಇದರಿಂದ ಪಿಸಿಬಿ ನಾಯಕರ ಮೇಲೆ ಬೇಸರ ವ್ಯಕ್ತಪಡಿಸಿದೆ. ಜೂನ್​ನಲ್ಲಿ ಮಹತ್ವದ ಟಿ -20 ವಿಶ್ವಕಪ್​ ನಡೆಯಲಿದ್ದು, ಅದಕ್ಕೂ ಮೊದಲು ತಂಡವನ್ನು ಬಲಿಷ್ಠಗೊಳಿಸಲು ನಾಯಕತ್ವದ ಬದಲಾವಣೆಗೆ ಕೈಹಾಕಿದೆ ಎಂದು ವರದಿಯಾಗಿದೆ.

ಮತ್ತೆ ಬಾಬರ್​ ಹೆಗಲಿಗೆ ಕ್ಯಾಪ್ಟನ್ಸಿ: ಪಾಕ್​ ತಂಡದ ಪರವಾಗಿ ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲಿ ಮಿಂಚಿದ್ದ ಬಾಬರ್​ ಅಜಂ ವಿಶ್ವಕಪ್​ ಸೋಲಿನ ಬಳಿಕ ಭಾರೀ ಟೀಕೆಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಅವರು ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಪಿಸಿಬಿ ಮತ್ತೆ ಅವರಿಗೆ ತಂಡದ ಹೊಣೆ ನೀಡಲು ಮುಂದಾಗಿದೆ. ಆದರೆ, ಇದಕ್ಕೆ ಬಾಬರ್​ ಕೆಲ ಷರತ್ತುಗಳನ್ನು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೂರೂ ಮಾದರಿಯ ಕ್ರಿಕೆಟ್​ಗೆ ತಮ್ಮನ್ನು ನಾಯಕನನ್ನಾಗಿ ಮಾಡಬೇಕು. ತಂಡದ ಆಯ್ಕೆ, ಕೋಚ್​ಗಳ ನೇಮಕ ಸೇರಿದಂತೆ ಹಲವು ವಿಷಯಗಳಲ್ಲಿ ಆದ್ಯತೆ ನೀಡಬೇಕು ಎಂಬ ಷರತ್ತು ವಿಧಿಸಿದ್ದಾರೆ. ಆದರೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಎಲ್ಲ ಕರಾರುಗಳನ್ನು ಒಪ್ಪಲು ಮನಸ್ಸು ಮಾಡಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ವಿಶ್ವಕಪ್​ಗೆ ತಯಾರಿ ನಡೆಸಬೇಕಿದ್ದ ತಂಡ ನಾಯಕತ್ವದ ಗೋಜಲಿನಲ್ಲಿ ಒದ್ದಾಡುತ್ತಿದೆ.

ಶಾಹೀನ್​ ಬೇಸರ: ಇನ್ನೊಂದೆಡೆ ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಶಾಹೀನ್​ ಅಫ್ರಿದಿ ಬೇಸರಗೊಂಡಿದ್ದಾರೆ. ಯಾವುದೇ ಪೂರ್ವ ಮಾಹಿತಿ ನೀಡದೇ ಕೈಬಿಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾಗಿ ತಿಳಿದು ಬಂದಿದೆ. ಜೊತೆಗೆ ಏಪ್ರಿಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ತವರಿನಲ್ಲಿ ನಡೆಯುವ ಟಿ-20 ಸರಣಿಯಲ್ಲಿ ಕೊನೆಯ ಅವಕಾಶ ನೀಡುವ ಬಗ್ಗೆಯೂ ಪಿಸಿಬಿ ಯೋಚಿಸಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ಕೋಚ್​ಗಳಿಂದ ನಿರಾಸಕ್ತಿ: ಪಾಕಿಸ್ತಾನ ತಂಡಕ್ಕೆ ಮುಖ್ಯ ಕೋಚ್​​ ಆಗಲು ವಿದೇಶಿಗರು ನಿರಾಸಕ್ತಿ ತೋರುತ್ತಿರುವುದು ಪಿಸಿಬಿಗೆ ಮತ್ತೊಂದು ಹೊಡೆತ ಬಿದ್ದಿದೆ. ಆ್ಯಡಂ ವೋಗ್ಸ್, ಲ್ಯೂಕ್ ರೋಂಚಿ, ಶೇನ್ ವ್ಯಾಟ್ಸನ್ ಮತ್ತು ಮೈಕ್ ಹೆಸ್ಸನ್ ಸೇರಿದಂತೆ ಹಲವಾರು ವಿದೇಶಿ ಮಾಜಿ ಆಟಗಾರರು ತಂಡದ ಕೋಚ್​ ಆಗಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಗ್ಯಾರಿ ಕರ್ಸ್ಟನ್ ಮತ್ತು ಜೇಸನ್ ಗಿಲ್ಲಿಸ್ಪಿ ಅವರೊಂದಿಗಿನ ಪಿಸಿಪಿ ನಡೆಸಿರುವ ಮಾತುಕತೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಇಬ್ಬರೂ ಪ್ರತ್ಯೇಕವಾಗಿ ವೈಟ್​ಬಾಲ್ ಮತ್ತು ರೆಡ್ ಬಾಲ್ ತರಬೇತುದಾರರಾಗಲು ಮುಂದಾಗಿದ್ದಾರೆ. ಆದರೆ, ತಮ್ಮದೇ ಬೆಂಬಲ ಸಿಬ್ಬಂದಿಯನ್ನು ಕರೆತರಲು ಅವರು ನಿರ್ಣಯಿಸಿದ್ದು, ಸ್ಥಳೀಯ ಮಾಜಿ ಆಟಗಾರರಿಗೆ ಅವಕಾಶ ನೀಡುವ ಇರಾದೆಯನ್ನು ಪಿಸಿಬಿ ಹೊಂದಿದೆ. ಇದು ಕೂಡ ಬಿಕ್ಕಟ್ಟು ಸೃಷ್ಟಿಸಿದೆ.

ಇದನ್ನೂ ಓದಿ: ಎಫ್‌ಐಎಚ್ ಅಥ್ಲೀಟ್‌ಗಳ ಸಮಿತಿಯ ಸಹ - ಅಧ್ಯಕ್ಷರಾಗಿ ಪಿಆರ್ ಶ್ರೀಜೇಶ್​ ನೇಮಕ - PR Sreejesh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.