ETV Bharat / sports

'ದೇಶೀಯ ಕ್ರಿಕೆಟ್​ ಆಡಿ': ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಕ್ರಿಕೆಟಿಗ ಮನೋಜ್​ ತಿವಾರಿ

author img

By ETV Bharat Karnataka Team

Published : Feb 21, 2024, 7:45 AM IST

ಮನೋಜ್​ ತಿವಾರಿ
ಮನೋಜ್​ ತಿವಾರಿ

ದೇಶೀಯ ಕ್ರಿಕೆಟ್​ ಮಹತ್ವವನ್ನು ಕಾಪಾಡಬೇಕು ಎಂದು ಕ್ರಿಕೆಟಿಗ ಮನೋಜ್​ ತಿವಾರಿ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ನವದೆಹಲಿ: ಐಪಿಎಲ್​ನಂತೆ ದೇಶೀಯ ಕ್ರಿಕೆಟ್​ಗೂ ಆಟಗಾರರು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಸೂಚಿಸಿದ್ದನ್ನು ಸ್ವಾಗತಿಸಿರುವ ಕ್ರಿಕೆಟಿಗ ಮನೋಜ್​ ತಿವಾರಿ, ಈ ಬಗ್ಗೆ ನಾನು ತಿಂಗಳ ಹಿಂದೆಯೇ ಧ್ವನಿ ಎತ್ತಿದ್ದೆ. ಕೊನೆಗೂ ಈ ಬಗ್ಗೆ ಕ್ರಿಕೆಟ್​ ಮಂಡಳಿ ನಿರ್ಧಾರಕ್ಕೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಈ ಬಗ್ಗೆ ಧ್ವನಿ ಎತ್ತದಿದ್ದರೆ, ಬಿಸಿಸಿಐ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಭಾವಿಸುತ್ತೇನೆ. ಬಹುಶಃ ಇದು ನನ್ನ ಪೋಸ್ಟ್​ನಿಂದಾಗಿ ಸಾಧ್ಯವಾಗಿದೆ. ರಣಜಿ ಟೂರ್ನಿಯಲ್ಲಿ ಆಡಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕ್ರಿಕೆಟಿಗರು ಮತ್ತೆ ರಣಜಿಯನ್ನು ಆಡುವುದಿಲ್ಲ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಕ್ರೀಡಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿಗಳು ರಣಜಿ ಟೂರ್ನಿಯಲ್ಲೂ ಕ್ರಿಕೆಟಿಗರು ಆಡಬೇಕು ಎಂದು ಸೂಚಿಸಿದ್ದಾರೆ. ಇದನ್ನೇ ನಾನು ಈ ಹಿಂದೆ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದೆ. ರಣಜಿ ಟ್ರೋಫಿಯ ಮೂಲಕ ವೃತ್ತಿಜೀವನ ಕಂಡುಕೊಂಡ ಅನೇಕ ಆಟಗಾರರು, ಐಪಿಎಲ್‌,ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ವಿಯಾದ ನಂತರ ಅವರು ಮತ್ತೆ ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದು ಕಳವಳಕಾರಿ ಸಂಗತಿ ಎಂದು ತಿವಾರಿ ಹೇಳಿದ್ದಾರೆ.

ಯುವ ಆಟಗಾರರು ಐಪಿಎಲ್​ಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ಐಪಿಎಲ್​ ಬಳಿಕ ಬಿಡುವು ಸಿಕ್ಕಲ್ಲಿ ವಿದೇಶಗಳಿಗೆ ಪ್ರವಾಸ ತೆರಳುತ್ತಾರೆ. ದೇಶೀಯ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳದ ಕಾರಣ ಪ್ರತಿಷ್ಠಿತ ರಣಜಿ ಟ್ರೋಫಿಯ ಮಹತ್ವ ಕುಗ್ಗುತ್ತಿದೆ. ಐಪಿಎಲ್ ದೊಡ್ಡ ವೇದಿಕೆಯಾದರೂ, ರಣಜಿ ಟ್ರೋಫಿಯ ಮಹತ್ವವನ್ನು ಹೆಚ್ಚಿಸಲು ಬಿಸಿಸಿಐ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ವಿನಂತಿಸುತ್ತೇನೆ ಎಂದಿದ್ದಾರೆ.

ರಣಜಿ ಬಗ್ಗೆ ತಿವಾರಿ ಹೇಳಿದ್ದೇನು?: ಈ ತಿಂಗಳ ಆರಂಭದಲ್ಲಿ ಕ್ರಿಕೆಟಿಗ ಮನೋಜ್​ ತಿವಾರಿ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡು, ರಣಜಿ ಪಂದ್ಯಗಳ ಅಂಪೈರಿಂಗ್ ಮತ್ತು ವೇಳಾಪಟ್ಟಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ಬಾರಿಯ ರಣಜಿ ಟ್ರೋಫಿಯನ್ನೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಪ್ರತಿಷ್ಠಿತ, ಶ್ರೀಮಂತ ಇತಿಹಾಸ ಹೊಂದಿರುವ ರಣಜಿ ಟ್ರೋಫಿಯನ್ನು ಸಾಮಾನ್ಯ ಕಾಲೇಜು ಮೈದಾನಗಳಲ್ಲಿ ಆಡಿಸಲಾಗುತ್ತಿದೆ. ಈ ಮೂಲಕ ಇದರ ಮಹತ್ವ ಹಾಳು ಮಾಡಲಾಗುತ್ತಿದೆ. ಕಳಪೆ ಅಂಪೈರಿಂಗ್​, ಬೇಕಾಬಿಟ್ಟಿ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಟೂರ್ನಿ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಅಭಿಮಾನಿಗಳಿಗೆ ಸಂಪೂರ್ಣ ನಿರಾಶೆ ತಂದಿದೆ ಎಂದು ಬರೆದುಕೊಂಡಿದ್ದರು.

ಜಯ್​ ಶಾ ಸಲಹೆ: ಇಶಾನ್​ ಕಿಶನ್​, ಶ್ರೇಯಸ್​ ಅಯ್ಯರ್​, ದೀಪಕ್​ ಚಹರ್​ ಅವರಂತಹ ಆಟಗಾರರು ರಣಜಿ ಟೂರ್ನಿಯಲ್ಲಿ ಆಡಿ ಮತ್ತೆ ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕು ಎಂದು ಬಿಸಿಸಿಐ ಹೇಳಿತ್ತು. ಇದನ್ನು ಗಂಭೀರವಾಗಿ ಪರಿಗಣಿಸದ ಕ್ರಿಕೆಟಿಗರ ಬಗ್ಗೆ ಬೇಸರಿಸಿದ್ದ ಕಾರ್ಯದರ್ಶಿ ಜಯ್ ಶಾ, ಕೆಲವು ಆಟಗಾರರು ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಇದು ಉಚಿತವಲ್ಲ. ದೇಶೀಯ ಕ್ರಿಕೆಟ್ ಭಾರತೀಯ ಕ್ರಿಕೆಟ್​ನ ಅಡಿಪಾಯ. ಕ್ರೀಡೆಯಲ್ಲಿ ಯಾವುದೂ ಕಡಿಮೆಯಲ್ಲಿ ಎಂದು ಹೇಳಿದ್ದರು.

ಇದನ್ನೂ ಓದಿ: ಐಪಿಎಲ್‌ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್‌ ಕಡೆಗಣಿಸುವುದು ಒಳ್ಳೆಯದಲ್ಲ: ಆಟಗಾರರಿಗೆ ಜಯ್ ಶಾ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.